ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿರುದ್ಯೋಗಿ ಯುವಜನತೆ ಕೊಡುಗೆಗಳನ್ನು ನೀಡಿದ್ದಾರೆ. ಇದೇ ವರ್ಷದಲ್ಲಿ 5 ಲಕ್ಷ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಒದಗಿಸಲಾಗುವುದು.
ಉದ್ಯೋಗಾವಕಾಶದ ಪ್ರಮುಖಾಂಶಗಳು:
* ಕರ್ನಾಟಕ ಉದ್ಯೋಗ ವರದಿಯ ಪ್ರಕಾರ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಸೇರ್ಪಡೆಯಾದ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಕರ್ನಾಟಕದ ಪಾಲು ಶೇ. 10.4 ರಷ್ಟಾಗಿದೆ.
* 2021-22ರಲ್ಲಿ ಕರ್ನಾಟಕದ ಸಂಘಟಿತ ವಲಯದಲ್ಲಿ ಕಳೆದ ಐದು ವರ್ಷಗಳಲ್ಲಿ 15 ಲಕ್ಷ ಉದ್ಯೋಗಿಗಳು ಸೇರ್ಪಡೆಯಾಗಿದ್ದಾರೆ.
* ಪ್ರಸಕ್ತ ಸಾಲಿನಲ್ಲಿ ಪಿಎಂ-ಸ್ವನಿಧಿ ಯೋಜನೆಯಡಿ ನವೆಂಬರ್ 2022 ರ ಅಂತ್ಯದವರೆಗೆ 69,000 ಬೀದಿ ಬದಿ ವ್ಯಾಪಾರಿಗಳಿಗೆ 70 ಕೋಟಿ ರೂ. ಗಳಷ್ಟು ಸಾಲ ಮಂಜೂರು ಮಾಡಲಾಗಿದೆ.
* ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ಅಮೃತ ಕೌಶಲ್ಯ ತರಬೇತಿ, ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಮತ್ತು ಇತರ ಕಾರ್ಯಕ್ರಮಗಳಡಿ ಒಟ್ಟು 1.12 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ.
* ಸ್ಕಿಲ್ ಕನೆಕ್ಟ್ ಪೋರ್ಟಲ್ ಮತ್ತು ಉದ್ಯೋಗ ಮೇಳಗಳ ಮೂಲಕ 51,000 ಜನರಿಗೆ ಉದ್ಯೋಗಾವಕಾಶ ದೊರೆತಿದೆ.
* ಕೌಶಲಾಭಿವೃದ್ಧಿ ಇಲಾಖೆಯಡಿಯಲ್ಲಿ ಇದುವರೆಗೂ ಖಾಸಗಿ ಸಂಸ್ಥೆಗಳ ಮೂಲಕ ನಡೆಯುತ್ತಿದ್ದ ಕೌಶಲ್ಯ ತರಬೇತಿಯನ್ನು ಇನ್ನುಮುಂದೆ ಐಟಿಐ, ಸರ್ಕಾರ ಉಪಕಾರಣಕಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ), ಪಾಲಿಟೆಕ್ನಿಕ್ ಸಂಸ್ಥೆಗಳ ಮೂಲಕ ನಡೆಸಲಾಗುವುದು.
* ಸಾಂಪ್ರದಾಯಿಕ ಕೌಶಲ್ಯಗಳು ಪುನರುಜ್ಜೀವನಕ್ಕಾಗಿ ಬಿದಿರಿನ ಉತ್ಪನ್ನಗಳಲ್ಲಿ ಮೇದಾರ ಸಮುದಾಯಕ್ಕೆ, ಚನ್ನಪಟ್ಟಣ ಗೊಂಬೆಗಳ ತಯಾರಿಕೆಗೆ, ಕಿನ್ಹಾಳ ಕಲೆಗಾಗಿ ಚಿತ್ರಗಾರ ಸಮುದಾಯಕ್ಕೆ ಹಾಗೂ ಕುಂಬಾರಿಕೆ, ಬಿದರಿ ಕಲೆ, ಕಸೂತಿ ಮುಂತಾದ ಕಲೆಗಳಲ್ಲಿ ಆಯ್ದ ತಲಾ 100 ಅಭ್ಯರ್ಥಿಗಳಿಗೆ ಉನ್ನತ ಮಟ್ಟದ ಕೌಶಲ್ಯವರ್ಧನಾ ತರಬೇತಿ ನೀಡಲಾಗುವುದು.
* ವಿದೇಶಿ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಅಂತರರಾಷ್ಟ್ರೀಯ ವಲಸೆ ಕೇಂದ್ರದ ವತಿಯಿಂದ 8 ಜಿಲ್ಲೆಗಳಲ್ಲಿ ಸಂಪನ್ಮೂಲ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು 4 ಜಿಲ್ಲೆಗಳಲ್ಲಿ ಪೂರ್ವ ನಿರ್ಗಮನದ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.
* ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ 50 ವರ್ಷಗಳನ್ನು ಪೂರೈಸಿದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪಾರಂಪರಿಕ ಸಂಸ್ಥೆಗಳಾಗಿ ಅಭಿವೃದ್ಧಿ ಪಡಿಸಲಾಗುವುದು. ಯುವಕರಿಗೆ ಕೈಗಾರಿಕೆಗಳ ಬೇಡಿಕೆಗಳಿಗನುಗುಣವಾಗಿ ತಾಂತ್ರಿಕ ಜ್ಞಾನವನ್ನು ನೀಡಲು ಹೊಸ ಯಂತ್ರೋಪಕರಣ ಮತ್ತು ಸಲಕರಣೆಗಳನ್ನು 100 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗುವುದು.
* 'ಕಲಿಕೆ' ಜೊತೆಗೆ 'ಕೌಶಲ್ಯ' ಎಂಬ ವಿನೂತನ ಕಾರ್ಯಕ್ರಮದಡಿ ಕೈಗಾರಿಕಾ ಆದ್ಯತಾ ಮತ್ತು ಉದ್ಯಮಶೀಲತಾ ತರಬೇತಿಗಳನ್ನು ಸರ್ಕಾರಿ ಪ್ರಥಮ ದರ್ಜೆ, ಇಂಜಿನಿಯರಿಂಗ್ ಹಾಗೂ ಐ.ಟಿ.ಐ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಇದೇ ಮಾದರಿಯಲ್ಲಿ ಕ್ರೈಸ್ ಸಂಸ್ಥೆಯ ಅಧೀನದ ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೂ ಹೆಚ್ಚುವರಿ ತಾಂತ್ರಿಕ ಮತ್ತು ಕೌಶಲಾಭಿವೃದ್ಧಿ ತರಬೇತಿ ನೀಡಲಾಗುವುದು.
* ಬೆಂಗಳೂರಿನಲ್ಲಿ ವಿಶೇಷ ಚೇತನ ಮಕ್ಕಳನ್ನು ಉದ್ಯೋಗಸ್ಥರನ್ನಾಗಿ ಮಾಡಲು ವಿಶೇಷ ಕೌಶಲ ತರಬೇತಿ ನೀಡಲಾಗುವುದು.
* ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 2023-24ನೇ ಸಾಲಿನಲ್ಲಿ ಒಟ್ಟು ₹80,318 ಕೋಟಿ ಒದಗಿಸಲಾಗುವುದು.
ಇವನ್ನೂ ಓದಿ: Karnataka Budget 2023: ಯಾವ ವಲಯಕ್ಕೆ ಎಷ್ಟು ಅನುದಾನ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.