ADVERTISEMENT

ವಿಶ್ವೇಶ ತೀರ್ಥರಿಗೆ ಹಂಪಿಯಲ್ಲಿ ಸನ್ಯಾಸ ದೀಕ್ಷೆ

ಎಂಟು ವರ್ಷದವರಿದ್ದಾಗ ವಿಶ್ವಮಾನ್ಯತೀರ್ಥ ಸ್ವಾಮೀಜಿಯಿಂದ ದೀಕ್ಷೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಡಿಸೆಂಬರ್ 2019, 10:52 IST
Last Updated 29 ಡಿಸೆಂಬರ್ 2019, 10:52 IST
ಎಂಟು ವರ್ಷದವರಿದ್ದಾಗ ಹಂಪಿಯಲ್ಲಿ ದೀಕ್ಷೆ ತೆಗೆದುಕೊಂಡ ಪೇಜಾವರ ಶ್ರೀ
ಎಂಟು ವರ್ಷದವರಿದ್ದಾಗ ಹಂಪಿಯಲ್ಲಿ ದೀಕ್ಷೆ ತೆಗೆದುಕೊಂಡ ಪೇಜಾವರ ಶ್ರೀ   

ಹೊಸಪೇಟೆ: ಭಾನುವಾರ ವಿಧಿವಶರಾದ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥರಿಗೂ ತಾಲ್ಲೂಕಿನ ಹಂಪಿಗೂ ಅವಿನಾಭಾವ ಸಂಬಂಧವಿದೆ.

ಅವರ ಸನ್ಯಾಸತ್ವಕ್ಕೆ ಮುನ್ನುಡಿ ಹಾಡಿದ್ದೆ ಹಂಪಿ. 1938ರ ಸಂದರ್ಭ. ಆಗಿನ್ನೂ ಅವರಿಗೆ ಎಂಟು ವರ್ಷದ ಬಾಲ್ಯ. ಅಷ್ಟರಲ್ಲಾಗಲೇ ವಿಶ್ವಮಾನ್ಯತೀರ್ಥ ಸ್ವಾಮೀಜಿ ಅವರಿಂದ ದೀಕ್ಷೆ ಪಡೆದು, ಮೋಹದ ಬದುಕಿನಿಂದ ದೂರವಾಗಿ ಸನ್ಯಾಸಿಯಾಗಿದ್ದರು.

ಹಂಪಿಯ ಯಂತ್ರೋದ್ಧಾರಕ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅವರು ದೀಕ್ಷೆ ಪಡೆದುಕೊಂಡಿದ್ದರು. ಬಳಿಕ ತುಂಗಭದ್ರಾ ನದಿಯಲ್ಲಿ ಮಿಂದೆದ್ದು ವಿರೂಪಾಕ್ಷೇಶ್ವರ ಸ್ವಾಮೀಜಿ, ನವವೃಂದಾವನಕ್ಕೆ ಭೇಟಿ ನೀಡಿ ಸನ್ಯಾಸತ್ವ ಮಾರ್ಗದಿಂದ ವಿಚಲಿತನಾಗುವುದಿಲ್ಲ ಎಂದು ಶಪಥ ಮಾಡಿದ್ದರು.

ADVERTISEMENT

1985ರಲ್ಲಿ ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠಕ್ಕೆ ಬಂದಿದ್ದರು. ಅದಾದ ಬಳಿಕ 2007ರಲ್ಲಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮಕ್ಕೆ ಅವರು ಸಾಕ್ಷಿಯಾಗಿದ್ದರು. ಮಠದ ವತಿಯಿಂದ 2018ರ ಮಾರ್ಚ್‌ನಲ್ಲಿ ಪ್ರಾರಂಭಿಸಿರುವ ಸರ್ವಧರ್ಮ ರಥೋತ್ಸವಕ್ಕೆ ಚಾಲನೆ ಕೊಟ್ಟಿದ್ದರು. ಇತ್ತೀಚೆಗೆ ನಿಧಿ ಆಸೆಯಿಂದ ನವವೃಂದಾವನವನ್ನು ಕಿಡಿಗೇಡಿಗಳು ಹಾಳು ಮಾಡಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಸ್ವಾಮೀಜಿ ಸ್ಥಳಕ್ಕೆ ದೌಡಾಯಿಸಿ, ಅತೀವ ಕಳವಳ ವ್ಯಕ್ತಪಡಿಸಿದ್ದರು.

‘ವಿಶ್ವೇಶ ತೀರ್ಥರು ಹಿಂದೂ ಧರ್ಮದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ವೀರಶೈವ–ಲಿಂಗಾಯತ ವಿಷಯದಲ್ಲಿ ಭಿನ್ನಾಭಿಪ್ರಾಯ ತಲೆದೋರಿದಾಗ, ಎಲ್ಲರೂ ಹಿಂದೂ ಧರ್ಮದ ಸಹೋದರರು. ಯಾರು ನಮ್ಮನ್ನು ಬಿಟ್ಟು ದೂರ ಹೋಗಬಾರದು ಎಂದು ಹೇಳಿದ್ದರು. ಅವರ ಅಗಲಿಕೆಯಿಂದ ಸಮಾಜಕ್ಕೆ ಬಹಳ ದೊಡ್ಡ ನಷ್ಟವಾಗಿದೆ’ ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಹೇಳಿದರು.

ಅಷ್ಟೇ ಅಲ್ಲ, ಸ್ಥಳೀಯರ ಜತೆಗೆ ಅವರು ಉತ್ತಮ ಒಡನಾಟ ಹೊಂದಿದ್ದರು. ‘ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಸರ್ವೋದಯ ಗ್ರಾಮದ ವಾಸುದೇವಾಚಾರ್ಯರು, ಸಂಡೂರಿನ ಹಿಂದಿ ಪಂಡಿತರಾಗಿದ್ದ ಬಳ್ಳೂರು ಸುಬ್ರಾಯ ಅಡಿಗರು, ನಗರದ ಕನ್ನಡ ಪಂಡಿತ ಕೆ. ನಾರಾಯಣ ಭಟ್ಟರು ವಿಶ್ವೇಶ ತೀರ್ಥರ ಬಾಲ್ಯದ ಸ್ನೇಹಿತರಾಗಿದ್ದರು. ಅವರೆಲ್ಲರೂ ಅವರ ಸಮಕಾಲೀನ ಸಹಪಾಠಿಗಳಾಗಿದ್ದರು’ ಎಂದು ನೆನಕೆ ಮಾಡಿಕೊಂಡರು ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.