ಬೆಂಗಳೂರು: ರಾಜ್ಯದ 10 ಜಿಲ್ಲೆಗಳಲ್ಲಿಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಗಳು ಮತ್ತು ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಹಲವರನ್ನು ವಶಕ್ಕೆ ಪಡೆದು, ಕೆಲವರನ್ನು ಬಂಧಿಸಿದ್ದಾರೆ.
ಸ್ಥಳೀಯ ತನಿಖಾ ಸಂಸ್ಥೆಗಳ (ಪೊಲೀಸರು) ಜೊತೆ ಸೇರಿ ರಾಷ್ಟ್ರೀಯ ತನಿಖಾ ಸಂಸ್ಥೆಮಂಗಳವಾರ ಬೆಳಗ್ಗೆಪಿಎಫ್ಐ ಮುಖಂಡರು, ಕಾರ್ಯಕರ್ತರು ಹಾಗೂ ಸಿಪಿಎಫ್, ಎಸ್‌ಡಿಪಿಐ ಕಾರ್ಯಕರ್ತರಿಗೆ ಎನ್ಐಎ ಮತ್ತೆ ಶಾಕ್ ನೀಡಿದೆ. ಕಳೆದ ಗುರುವಾರ (ಸೆ.22) ಕೂಡ ಎನ್‌ಐಎ ದಾಳಿ ಮಾಡಿ ಹಲವರನ್ನು ಬಂಧಿಸಿತ್ತು.
ಪ್ರಾಥಮಿಕ ವರದಿಗಳ ಪ್ರಕಾರ ರಾಜ್ಯದ 12 ಜಿಲ್ಲೆಗಳಲ್ಲಿ ದಾಳಿ ಮಾಡಲಾಗಿದೆ. ಬಾಗಲಕೋಟೆ, ಕೋಲಾರ, ಬೆಳಗಾವಿ, ಚಿತ್ರದುರ್ಗ, ಕೊಪ್ಪಳ, ಚಾಮರಾಜನಗರ, ರಾಯಚೂರು, ವಿಜಯಪುರ, ಕಲಬುರ್ಗಿ, ಬೀದರ್, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ದಾಳಿ ಮಾಡಿರುವ ಅಧಿಕಾರಿಗಳು ಕೆಲವರನ್ನು ವಶಕ್ಕೆ ಪಡೆದರೆ, ಮತ್ತೆ ಕೆಲವರನ್ನು ಬಂಧಿಸಿದ್ದಾರೆ
ಪಿಎಫ್‌ಐ, ಸಿಪಿಎಫ್ ಹಾಗೂ ಎಸ್‌ಡಿಪಿಐ ಮೇಲೆ ಉಗ್ರವಾದ, ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ, ಶಸ್ತ್ರಾಸ್ತ್ರ ತರಬೇತಿ ನೀಡಲು ಶಿಬಿರಗಳ ಆಯೋಜನೆ, ಉಗ್ರವಾದ ಚಟುವಟಿಕೆಗಳಿಗೆ ಪ್ರೆರೇಪಣೆ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು ಸೇರಿದಂತೆ ಹಲವಾರ ಆರೋಪಗಳನ್ನು ಮಾಡಲಾಗಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.
ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷನ ಬಂಧನ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಆಶ್ಫಾಕ್ ಜಮಖಂಡಿ ಮನೆ ಮೇಲೆ ಜಿಲ್ಲಾ ಪೊಲೀಸರು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿ ಬಂಧಿಸಿದ್ದಾರೆ.
ಬಾಗಲಕೋಟೆಯಲ್ಲಿ 7ಜನರ ಬಂಧನ:ಶಾಂತಿ ಕದಡಿದ ಆರೋಪದ ಮೇರೆಗೆ ಜಿಲ್ಲೆಯಲ್ಲಿ ಪಿಎಫ್ಐ ಸಂಘಟನೆಯ ಏಳು ಜನರನ್ನು ಬಂಧಿಸಲಾಗಿದೆ. ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಅಸ್ಗರ್ ಅಲಿ, ಇರ್ಫಾನ್, ಮಹಮ್ಮದ್, ರಾಜೇಸಾಬ್, ಮುರ್ತುಜ್, ಉಮರ್ ಫಾರೂಕ್, ಮುಸಾ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಜಯಪ್ರಕಾಶ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಏಳು ಪಿಎಫ್ಐ ಮುಖಂಡರ ವಶ:ಇಲ್ಲಿನ ಏಳು ಪಿಎಫ್ಐ ಮುಖಂಡರನ್ನು ಮಂಗಳವಾರ ನಸುಕಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಸುಕಿನ 4 ಗಂಟೆಗೆ ಮನೆಗಳ ಮೇಲೆ ದಾಳಿ ಮಾಡಿದ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದ ಪೊಲೀಸರ ತಂಡ ಇವರನ್ನು ವಶಕ್ಕೆ ಪಡೆದಿದೆ.
ಚಿತ್ರದುರ್ಗದಲ್ಲಿ ಪಿಎಫ್ಐ ಕಾರ್ಯಕರ್ತನ ಬಂಧನ:ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾದ (ಪಿಎಫ್ಐ) ಕಾರ್ಯಕರ್ತ ಆಫನ್ ಅಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಸೇರಿ ಇತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೀದರ್‌ನಲ್ಲಿ ಪಿಎಫ್ಐ ಎಸ್‌ಡಿಪಿಐ ಮುಖಂಡರ ಬಂಧನ: ಪಿಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಮ್ ಹಾಗೂ ಎಸ್‌ಡಿಪಿಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶೇಖ್ ಮಕ್ಸೂದ್ ಅವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರತ್ಯೇಕವಾಗಿ ಎರಡು ತಂಡಗಳನ್ನು ರಚಿಸಿ ಬೆಳಗಿನ ಜಾವ ಕಾರ್ಯಾಚರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಕಲಬುರಗಿ ಪಿಎಫ್ಐ ಮುಖಂಡ ವಶಕ್ಕೆ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಜಿಲ್ಲಾ ಮಾಧ್ಯಮ ವಕ್ತಾರ ಎನ್ನಲಾದ ಮಜರ್ ಹುಸೇನ್ ಎಂಬಾತನನ್ನು ಕಲಬುರಗಿ ಪೊಲೀಸರು ಬೆಳಿಗ್ಗೆ ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಎಜಾಜ್ ಅಲಿಯನ್ನು ಬಂಧಿಸಿ ಎನ್ಐಎ ಅಧಿಕಾರಿಗಳು ಕರೆದೊಯ್ದಿದ್ದರು.
ಚಾಮರಾಜನಗರದಲ್ಲಿ ಪಿಎಫ್ಐ ಅಧ್ಯಕ್ಷ, ಕಾರ್ಯದರ್ಶಿ ಬಂಧನ: ಪಿಎಫ್ಐ ಜಿಲ್ಲಾ ಅಧ್ಯಕ್ಷ ಕಫೀಲ್ ಅಹಮದ್ ಹಾಗೂ ಜಿಲ್ಲಾ ಕಾರ್ಯದರ್ಶಿ ಸುಹೇಬ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದರು.
ರಾಮನಗರದಲ್ಲಿ 10ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರ ಬಂಧನ:ಇಲ್ಲಿನ ಐಜೂರು, ಟಿಪ್ಪು ನಗರ, ರೆಹಮಾನಿಯ ನಗರದಲ್ಲಿ ಪೊಲೀಸರು ಮಂಗಳವಾರ ನಸುಕಿನಲ್ಲಿ ದಾಳಿ ನಡೆಸಿದ್ದು, ಪಿಎಫ್ಐ ಸಂಘಟನೆಯ ಹತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಯಾದಗಿರಿಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ವಶಕ್ಕೆ:ಸಮಾಜದಲ್ಲಿ ಶಾಂತಿ ಕದಡುವ ಆರೋಪದ ಮೇಲೆ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ಬಂದೇನವಾಜ ಗೋಗಿ, ಕಾರ್ಯಕರ್ತ
ಮಹಮ್ಮದ್ ಹಸೀಮ್ ಪಟೇಲ್ ಗೋಗಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಯಚೂರಿನಲ್ಲಿ ಪಿಎಫ್ಐ ಪದಾಧಿಕಾರಿಗಳಿಬ್ಬರು ಪೊಲೀಸ್ ವಶಕ್ಕೆ:ಜಿಲ್ಲಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಇಬ್ಬರು ಪದಾಧಿಕಾರಿಗಳನ್ನು ಮಂಗಳವಾರ ಬೆಳಗಿನ ಜಾವ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಎಫ್ಐ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಅವರನ್ನು ಸದರ್ ಬಜಾರ್ ಠಾಣೆಯಿಂದ ಹಾಗೂ ಪಿಎಫ್ ಕಾರ್ಯದರ್ಶಿ ಅಸೀಮುದ್ದಿನ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಕೋಲಾರ ಪಿಎಫ್ಐ ಜಿಲ್ಲಾ ಅಧ್ಯಕ್ಷ ಸೇರಿ ಏಳು ಮಂದಿ ಬಂಧನ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಇಮ್ತಿಯಾಜ್ ಅಹ್ಮದ್ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿನಾಯಕ ನಗರದ ಇಮ್ತಿಯಾಜ್ ಅಹ್ಮದ್ (36), ಸಿದ್ದಿಕ್ ಪಾಷ, ವಾಸೀಂ ಪಾಷ (28), ರಹಮತ್ ನಗರದ ಅಲ್ಲಾ ಬಕಾಶ್ (28), ಮಿಲ್ಲತ್ ನಗರದ ನಯಾಜ್ ಪಾಷಾ (24), ಶಹಬಾಜ್ ಪಾಷಾ (34) ಹಾಗೂ ಶಾಹಿದ್ ನಗರದ ನೂರ್ ಪಾಷಾ (31) ಬಂಧಿತರು.
ಕೊಪ್ಪಳದಲ್ಲಿ ಸಿಎಫ್ಐ, ಪಿಎಫ್ಐ ಮುಖಂಡರು ಪೊಲೀಸರ ವಶಕ್ಕೆ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಗಂಗಾವತಿ ಮತ್ತು ಕೊಪ್ಪಳದ ಮುಖ್ಯ ಸಂಘಟಕ ರಸೂಲ್ ಮಹಮ್ಮದ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಸರ್ಫರಾಜ್ ಹುಸೇನ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಇವನ್ನೂ ಓದಿ..
ದೇಶದಾದ್ಯಂತ ಪಿಎಫ್ಐ ಸೇರಿದಂತೆ ಹಲವು ಸಂಘಟನೆಗಳ ಮೇಲೆ ಎನ್ಐಎ, ಇ.ಡಿ ದಾಳಿ
ಪಿಎಫ್ಐ ಮುಖಂಡರ ಮನೆ ಮೇಲೆ ದಾಳಿ: ಇಬ್ಬರ ಬಂಧನ
11 ರಾಜ್ಯಗಳಲ್ಲಿ ಎನ್ಐಎ ದಾಳಿ, 106 ಮಂದಿ ವಶಕ್ಕೆ: ಅಧಿಕಾರಿಗಳ ಜೊತೆ ಶಾ ಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.