ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಪ್ರಬುದ್ಧರ ಸಭೆಯಲ್ಲಿ ಸಂಸದ ಡಾ. ಉಮೇಶ ಜಾಧವ ಅವರನ್ನು ಪಕ್ಷದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.
ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, 'ನನ್ನ ಗೆಲುವಿನಲ್ಲಿ ರಾಜ್ಯ ಪ್ರಧಾನಕಾರ್ಯದರ್ಶಿಯೂ ಅಗಿರುವ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಸಾಕಷ್ಟು ಶ್ರಮಿಸಿದ್ದಾರೆ. ಹಗಲು- ರಾತ್ರಿ ಎನ್ನದೆ ಲೋಕಸಭಾ ಚುನಾವಣೆಯಲ್ಲಿ ಇಡೀ ಕ್ಷೇತ್ರದಾದ್ಯಂತ ಓಡಾಡಿದ್ದರು' ಎಂದು ಪ್ರಶಂಸಿದರು.
ಸಂಸದರ ಈ ಮಾತಿಗೆ ಸಭೆಯಲ್ಲಿ ಇದ್ದ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ, 'ನಾವ್ಯಾರೂ ನಿಮಗೆ ವೋಟ್ ಹಾಕಿಲ್ಲವೇ? ಒಬ್ಬರ ಓಲೈಕೆಯನ್ನು ಬದಿಗಿಡಿ' ಎಂದರು. ಚುನಾವಣೆ ವೇಳೆ ಕಾಣಿಸಿಕೊಳ್ಳದವರು ಈಗ ಬಂದಿದ್ದೀರಾ. ಇಷ್ಟು ದಿನ ಎಲ್ಲಿಗೆ ಹೋಗಿದ್ದೀರಿ ಎಂದು ಮತ್ತೊಬ್ಬ ಕಾರ್ಯಕರ್ತರು ಪ್ರಶ್ನಿಸಿದರು.
ಸಭೆಯಲ್ಲಿ ಹಲವು ಕಾರ್ಯಕರ್ತರು ಅಸಮಾಧಾನ ಹೊರಹಾಕಿ ಸಂಸದರಿಗೆ ಸರಣಿ ಪ್ರಶ್ನೆಗಳನ್ನು ಹಾಕಿದರು. ನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡ ಚಂದು ಪಾಟೀಲ ಅವರು ಮಧ್ಯ ಪ್ರವೇಶಿಸಿ, 'ಸಂಸದರ ಭಾಷಣದ ನಡುವೆ ಈ ರೀತಿ ವರ್ತಿಸಬಾರದು. ಬಿಜೆಪಿ ಶಿಸ್ತಿನ ಪಕ್ಷ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಏನೆ ಅಸಮಾಧಾನ ಇದ್ದರು ಪಕ್ಷದ ಒಳಗೆ ಅದನ್ನು ಬಗೆ ಹರಿಸಿಕೊಳ್ಳೋಣ' ಎಂದು ಸಮಾಧಾನ ಮಾಡಿದರು. ಆಗಲು ಕಾರ್ಯಕರ್ತರು ಸುಮ್ಮನಾಗಲಿಲ್ಲ.
ಎನ್. ರವಿಕುಮಾರ್ ಅವರು ಎದ್ದು ನಿಂತು, 'ಸಂಸದ ಉಮೇಶ ಜಾಧವ ಅವರು ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದಾರೆ. ಅವರ ಗೆಲುವು ಪಕ್ಷದ ಕಾರ್ಯಕರ್ತರ ಗೆಲುವು' ಎಂದು ಹೇಳಿ, ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ಎಲ್ಲರೂ ಶಾಂತವಾಗಿ ಕುಳಿತ ಬಳಿಕ ಭಾಷಣ ಮುಂದುವರಿಸಿದ ಸಂಸದ ಜಾಧವ ಅವರು, 'ನಾನು ಕಾರ್ಯಕರ್ತರಿಂದ ಗೆದ್ದಿದ್ದೇನೆ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರಿಸಲು ಸಿದ್ಧ ಇದ್ದೇನೆ. ಎರಡು ಗಂಟೆ ಇಲ್ಲಿಯೇ ಕುಳಿತು ಉತ್ತರಿಸುತ್ತೇನೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.