ADVERTISEMENT

ಪ್ರತಿಭಟನೆ ಮಾಡುವ ನೈತಿಕ ಹಕ್ಕು ಬಿಜೆಪಿಯವರಿಗೆ ಎಲ್ಲಿದೆ?: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 15:57 IST
Last Updated 17 ಜೂನ್ 2024, 15:57 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಜನರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲ ಕ್ರೋಡೀಕರಣ ಉದ್ದೇಶದಿಂದ ಪೆಟ್ರೋಲ್‌, ಡೀಸೆಲ್‌ ಮಾರಾಟ ತೆರಿಗೆಯನ್ನು ₹3ರಷ್ಟು ಹೆಚ್ಚಿಸಲಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ಮಾಡುವ ನೈತಿಕ ಹಕ್ಕು ಬಿಜೆಪಿಯವರಿಗೆ ಎಲ್ಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಜಿಎಸ್‌ಟಿ ವ್ಯವಸ್ಥೆ ಜಾರಿಗೊಳಿಸಿದ ನಂತರ ರಾಜ್ಯ ಸರ್ಕಾರಗಳ ಸಂಪನ್ಮೂಲ ಕ್ರೋಡೀಕರಣಕ್ಕೆ ಇರುವ ಅವಕಾಶ ಸೀಮಿತಗೊಂಡಿದೆ. ರಾಜ್ಯ ಸರ್ಕಾರಕ್ಕೆ ‌ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಾಹನ ತೆರಿಗೆ, ಪೆಟ್ರೋಲ್‌, ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹಾಗೂ ಮದ್ಯದ ಮೇಲಿನ ಮಾರಾಟ ತೆರಿಗೆ ಹೊರತುಪಡಿಸಿ ಯಾವುದೇ ಮೂಲಗಳಿಲ್ಲ’ ಎಂದರು.

‘ಮನಮೋಹನ್‌ ಸಿಂಗ್‌ ಅವರ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 113 ಡಾಲರ್‌ ಇತ್ತು. 2015ರಲ್ಲಿ ಈ ಬೆಲೆ ಅರ್ಧಕ್ಕರ್ಧ ಕಡಿಮೆಯಾದರೂ, ಬೆಲೆ ಇಳಿಸಿ, ಜನರ ಹೊರೆ ಕಡಿಮೆ ಮಾಡುವ ಕಾಳಜಿಯನ್ನು ನರೇಂದ್ರ ಮೋದಿಯವರು ತೋರಲಿಲ್ಲ. ಬಿಜೆಪಿಯವರು ಯಾರ ವಿರುದ್ಧ ಹೋರಾಡಬೇಕು’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ADVERTISEMENT

‘ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳದಿಂದ ಸಂಗ್ರಹವಾಗುವ ಅಂದಾಜು ₹3 ಸಾವಿರ ಕೋಟಿ ರಾಜ್ಯದ ಖಜಾನೆಗೆ ಸಂದಾಯವಾಗಲಿದೆ. ‌ಆ ಹಣ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗ ಆಗಲಿದೆಯೇ ಹೊರತು, ನಮ್ಮ ಜೇಬಿಗೆ ಹೋಗುವುದಿಲ್ಲ. ಜನವಿರೋಧಿ ಬಿಜೆಪಿ ನಾಯಕರಿಗೆ ಜನಕಲ್ಯಾಣಕ್ಕಾಗಿ ಸ್ಪಲ್ಪ ಪ್ರಮಾಣದ ತೆರಿಗೆ ಹೆಚ್ಚಿಸಿದ್ದನ್ನು ಪ್ರಶ್ನಿಸುವ ಯೋಗ್ಯತೆ ಎಲ್ಲಿದೆ’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರ ಪಾಪರ್‌ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಗೆ ಹೇಳುತ್ತಾರೆ. ನಾವು ಯಾರದ್ದಾದರೂ ಸಂಬಳ ನಿಲ್ಲಿಸಿದ್ದೇವೆಯೇ. ಆಯವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳಿಗೆ ಅನುದಾನ ಒದಗಿಸದೆ ಸ್ಥಗಿತಗೊಳಿಸಿದ್ದೇವೆಯೇ’ ಎಂದೂ ಕೇಳಿದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಬಸ್ ಪ್ರಯಾಣ ದರ ಏರಿಕೆ‌ ಮಾಡಿ ಎಷ್ಟು ವರ್ಷ ಆಗಿದೆ ಗೊತ್ತೇ? ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಏರಿಕೆ‌ ಮಾಡುವುದಿಲ್ಲ' ಎಂದರು.

ಶತಕ ದಾಟಿಸಿದ್ದೇ ಬಿಜೆಪಿ ಸರ್ಕಾರ: ‘ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚು ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿಸಿದ್ದೇ ಬಿಜೆಪಿ ಸರ್ಕಾರ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.