ADVERTISEMENT

ಒಳನೋಟ| ರಸ್ತೆಗುಂಡಿಗೆ ಯಾರು ಹೊಣೆ?

ಕಾಮಗಾರಿಯಲ್ಲಿ ನಿಯಮ ಉಲ್ಲಂಘನೆ l ಲಂಚಕ್ಕೆ ಆದ್ಯತೆ l ಪರಿಹಾರಕ್ಕೂ ಗಂಡಾಗುಂಡಿ

Published 3 ಡಿಸೆಂಬರ್ 2022, 19:30 IST
Last Updated 3 ಡಿಸೆಂಬರ್ 2022, 19:30 IST
   

ಬೆಂಗಳೂರು:‘ದೇಶಕ್ಕಾಗಿ ಗಡಿಯಲ್ಲಿ ಹೋರಾಡಿದ ಮಗ ಇಲ್ಲಿಗೆ ಬಂದು ಯಕಶ್ಚಿತ್‌ ರಸ್ತೆ ಗುಂಡಿಗೆ ಬಲಿಯಾದ. ಶತ್ರುಗಳ ಗುಂಡಿಗೆ ಬಲಿಯಾಗಿದ್ದರೆ ದೇಶಕ್ಕಾಗಿ ತ್ಯಾಗ ಮಾಡಿದ ಎಂಬ ಹೆಮ್ಮೆ ಇರುತ್ತಿತ್ತು. ಆದರೆ ಇಲ್ಲಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡ...’

-ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದ ನಿವೃತ್ತ ಎಎಸ್‌ಐ ಎನ್‌. ನರಸಯ್ಯ ಹಾಗೂ ಅವರ ಪತ್ನಿ ಸರೋಜಮ್ಮ ಅವರು ಹೀಗೆ ಹೇಳುವಾಗ ಕಣ್ಣೀರು ತುಂಬಿತ್ತು. ಮಂಡ್ಯ ಜಿಲ್ಲೆಯಲ್ಲಿ ಕಾರೆಮನೆ ಗೇಟ್‌ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟ ಎಸ್‌.ಎನ್‌.ಕುಮಾರ್‌ (38) ಅವರು ಭಾರತೀಯ ಸೇನೆಯಿಂದ ನಿವೃತ್ತರಾಗಿ ಎರಡು ವರ್ಷವಷ್ಟೇ ಆಗಿತ್ತು. ‘ಜಮ್ಮು–ಕಾಶ್ಮೀರ ಸೇರಿದಂತೆ ದೇಶದ ಹಲವೆಡೆ ಕಠಿಣ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸಿ ಸಾವು ಗೆದ್ದು ಬಂದಿದ್ದ ಮಗ, ರಸ್ತೆ ಗುಂಡಿಗೆ ಬಲಿಯಾದ’ ಎಂದು ಪೋಷಕರು ಮರುಗಿದರು.

ADVERTISEMENT
ಮಂಡ್ಯದಲ್ಲಿ ರಸ್ತೆಗುಂಡಿಯಲ್ಲಿ ಬಿದ್ದು ಮೃತಪಟ್ಟ ಎಸ್‌.ಎನ್‌.ಕುಮಾರ್‌ ಭಾವಚಿತ್ರದೊಂದಿಗೆ ಪೋಷಕರು

ಬೆಂಗಳೂರು, ದಾವಣಗೆರೆ, ಮಂಗಳೂರು, ಮೈಸೂರಿನಲ್ಲಿ ಈ ವರ್ಷ 12ಕ್ಕೂ ಹೆಚ್ಚು ಮಂದಿ ರಸ್ತೆ ಗುಂಡಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂತ್ರಸ್ತರಿಗೆ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ಪರಿಹಾರ ನೀಡಿಲ್ಲ. ಪೊಲೀಸರು ದಾಖಲಿಸುವ ಎಫ್‌ಐಆರ್‌ನಲ್ಲಿ ‘ಅಪಘಾತಕ್ಕೆ ಅಜಾಗರೂಕತೆಯ ಚಾಲನೆ’ ಎಂಬುದು ನಮೂದಾಗದ್ದರಿಂದ ಪರಿಹಾರ ಸಿಗುತ್ತಿಲ್ಲ. ಇನ್ನು, ಕಳಪೆ ಕಾಮಗಾರಿಯಿಂದಾಗಿಯೇ ಸೃಷ್ಟಿಯಾಗುತ್ತಿರುವ ರಸ್ತೆ ಗುಂಡಿಗೆ ಕಾರಣರಾದ ಗುತ್ತಿಗೆದಾರ, ಎಂಜಿನಿಯರ್‌ಗಳಿಗೆ ಕನಿಷ್ಠ ಶಿಸ್ತುಕ್ರಮದ ಶಿಕ್ಷೆಯೂ ಆಗುತ್ತಿಲ್ಲ.

ದಾವಣಗೆರೆಯ ಚಳ್ಳಕೆರೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದ ಜಗಳೂರು ತಾಲ್ಲೂಕಿನ ಮುಸ್ಟೂರು ಗ್ರಾಮದ ಪಶು ಆಸ್ಪತ್ರೆ ನೌಕರ ಹರೀಶ್‌ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರಿಗೆ ಎರಡು ವರ್ಷದ ಮಗು ಸೇರಿದಂತೆ ಇಬ್ಬರು ಮಕ್ಕಳು. ಪತ್ನಿಗೆ ಆದಾಯದ ಮೂಲವಿಲ್ಲ. ‘ಇಲ್ಲಿಯವರೆಗೆ ಯಾವುದೇ ಪರಿಹಾರ ಬಂದಿಲ್ಲ. ಇಬ್ಬರು ಮಕ್ಕಳನ್ನು ಸಾಕಿ ಸಲಹುವುದು ಕಷ್ಟವಾಗಿದೆ’ ಎಂದು ಪತ್ನಿ ಐಶ್ವರ್ಯ ಅಳಲು ತೋಡಿಕೊಂಡರೂ ಕೇಳುವವರು ಇಲ್ಲದಂತಾಗಿದೆ. ಜಿಲ್ಲೆಯ ಆವಲಗೆರೆಯ ನಾಗರಾಜ್‌ ಕೂಡ ರೈಲ್ವೆ ಕೆಳಸೇತುವೆಯಲ್ಲಿ ರಸ್ತೆಗುಂಡಿಗೆ ಬಿದ್ದು ಮೃತಪಟ್ಟರು. ಅವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿದರೆ, ಆ ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕಾದ ಹೊಣೆ ಹೊತ್ತ ಇಲಾಖೆಯೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರು ದೂರು ನೀಡಲು ನಗರ ಸ್ಥಳೀಯ ಸಂಸ್ಥೆಗಳು ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಆದರೆ, ಸ್ಥಳೀಯ ಸಂಸ್ಥೆಗಳು ಈ ನಿರ್ದೇಶನವನ್ನೂ ಪಾಲಿಸುತ್ತಿಲ್ಲ.

‘ರಸ್ತೆ ಗುಂಡಿಯಿಂದಾಗಿ ಸತ್ತವರ ಕುಟುಂಬದವರಿಗೆ ನಾವು ಇದುವರೆಗೂ ಪರಿಹಾರ ನೀಡಿದ ಉದಾಹರಣೆ ಇಲ್ಲ. ಇಂತಹ ಪರಿಪಾಟವೇ ನಮ್ಮ ಪಾಲಿಕೆಯಲ್ಲಿಲ್ಲ’ ಎಂದು ಮಂಗಳೂರು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಹೇಳುತ್ತಾರೆ.

ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಉತ್ತರವೂ ಇದೇ ಆಗಿದೆ. ಎಫ್‌ಐಆರ್‌ನಲ್ಲಿ ‘ಸ್ಥಳೀಯ ಸಂಸ್ಥೆ ನಿರ್ಲಕ್ಷ್ಯದಿಂದಾಗಿರುವ ಗುಂಡಿಯಿಂದ ಸಂಭವಿಸಿದ ಅಪಘಾತ’ ಎಂದು ನಮೂದಿಸಿದರೆ ಮಾತ್ರ ಪರಿಹಾರ ನೀಡಲು ಸಾಧ್ಯ’ ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳುತ್ತಾರೆ.

‘ಗುಂಡಿ ಬಿದ್ದ ರಸ್ತೆ ಹಾಗೂ ಬೆಳಕಿನ ವ್ಯವಸ್ಥೆಯಿಲ್ಲದ ರಸ್ತೆಗಳನ್ನು ಗುರುತಿಸಿ ಸಂಬಂಧಪಟ್ಟ ಏಜೆನ್ಸಿಗಳು ಹಾಗೂ ಇಲಾಖೆಗಳಿಗೆ ನೋಟಿಸ್‌ ನೀಡಲಾಗುತ್ತಿದೆ. ಪೊಲೀಸ್‌ ಇಲಾಖೆಯಿಂದ ನೋಟಿಸ್‌ ಜಾರಿ ಮಾಡಿದ್ದರೂ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಅಪಘಾತಗಳು ನಡೆದರೆ ಮಾತ್ರ ಎಫ್‌ಐಆರ್‌ನಲ್ಲಿ ರಸ್ತೆ ಅವ್ಯವಸ್ಥೆಯ ಕಾರಣ ದಾಖಲಿಸಲಾಗುವುದು’ ಎಂದು ಬೆಂಗಳೂರು ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಎಂ. ಅಬ್ದುಲ್‌ ಸಲೀಂ ತಾಂತ್ರಿಕ ಕಾರಣವನ್ನು ತಿಳಿಸುತ್ತಾರೆ.

ರಾಜಧಾನಿ ಬೆಂಗಳೂರು ಸೇರಿ ನಗರ, ಪಟ್ಟಣಗಳಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸದಿರುವುದೇ ರಸ್ತೆ ಗುಂಡಿ
ಗಳು ಹೆಚ್ಚಾಗಲು ಕಾರಣ. ನಿಯಮಗಳ ಪ್ರಕಾರ ನಿರ್ಮಾಣ ವಾದ ಒಂದು ರಸ್ತೆ ಕನಿಷ್ಠ 10 ವರ್ಷ ಬಾಳಿಕೆ ಬರಬೇಕು. ಆದರೆ, ಕಳಪೆ ಕಾಮಗಾರಿಯಿಂದ ಒಂದು ಮಳೆಗೇ ರಸ್ತೆಗಳಲ್ಲಿ ಗುಂಡಿಗಳು ಬೀಳತೊಡಗುತ್ತವೆ. ಒಂದು ಕಿ.ಮೀ ರಸ್ತೆ ನಿರ್ಮಾಣಕ್ಕೆ ₹2.5 ಕೋಟಿ ವೆಚ್ಚ ಮಾಡಲಾಗುತ್ತದೆ. ಎಲ್ಲ ನಿಯಮಗಳನ್ನೂ ಟೆಂಡರ್‌ ದಾಖಲೆ ಹಾಗೂ ಪ್ರಕ್ರಿಯೆಗಳಲ್ಲಿ ತೋರಲಾಗಿರುತ್ತದೆ. ದರಂತೆಯೇ ಕಾಮಗಾರಿ ಅನುಷ್ಠಾನವಾಗುತ್ತಿಲ್ಲ. ಕಾಮಗಾರಿಗೆ ಒಂದು ವಿಸ್ತೃತ ಯೋಜನಾ ವರದಿ ಇರುತ್ತದೆ. ಗುತ್ತಿಗೆದಾರರು, ನಿರ್ವಹಣಾ ಸಂಸ್ಥೆ, ಎಂಜಿನಿಯರ್‌ಗಳ ಮೇಲ್ವಿಚಾರಣೆಯೂ ಇರುತ್ತದೆ. ಆದರೆ, ಕಳಪೆ ಕಾಮಗಾರಿಯಾದರೂ ಇವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಎಲ್ಲ ಹಂತದಲ್ಲಿ ಈ ಅಧಿಕಾರಿಗಳೂ ಈ ಕಳಪೆ ಕಾಮಗಾರಿಗೆ ಕಾರಣವಾಗಿ
ದ್ದರೂ ಶಿಸ್ತುಕ್ರಮವಾಗುವುದಿಲ್ಲ.

ರಸ್ತೆ ನಿರ್ಮಾಣಕ್ಕೆ ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ನಿಯಮಾವಳಿಗಳನ್ನು ರೂಪಿಸಿದೆ. ಇದನ್ನೇ ರಾಜ್ಯದಾದ್ಯಂತ ಎಲ್ಲ ಇಲಾಖೆಗಳು ಪಾಲಿಸುವುದು. ಐಆರ್‌ಸಿ ಪ್ರಕಾರ, ಒಂದು ರಸ್ತೆ 8 ರಿಂದ 10 ವರ್ಷ ಬಾಳಿಕೆ ಬರಬೇಕು. ಆದರೆ, ಒಂದೇ ವರ್ಷಕ್ಕೆ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಳ್ಳುತ್ತವೆ. ಗುಂಡಿಗಳಾಗುವುದು ಸ್ಥಳೀಯ ಸಂಸ್ಥೆಗೆ ಮೊದಲೇ ಗೊತ್ತಿರುತ್ತದೆ ಎಂಬಂತೆ ಪ್ರತಿ ವರ್ಷ ಬಜೆಟ್‌ನಲ್ಲಿ ಹತ್ತಾರು ಕೋಟಿ ರೂಪಾಯಿಯನ್ನು ರಸ್ತೆ ಗುಂಡಿ ದುರಸ್ತಿಗೇ ಮೀಸಲಿಡಲಾಗುತ್ತದೆ. ಇದು ರಸ್ತೆ ಕಾಮಗಾರಿ ಮೇಲೆ ಬಿಬಿಎಂಪಿ ಎಂಜಿನಿಯರ್‌ಗಳಿಗೆ ಇರುವ ಭರವಸೆಯನ್ನು ತೋರುತ್ತದೆ! ಬಿಬಿಎಂಪಿಯು ಕಳೆದ ಸಾಲಿನಲ್ಲಿ ₹30
ಕೋಟಿ ವೆಚ್ಚ ಮಾಡಿದೆ. ಈ ವರ್ಷ 33 ಸಾವಿರ ಗುಂಡಿಗಳನ್ನು ಮುಚ್ಚಿದೆ. ಮೈಸೂರು ಮಹಾನಗರ ಪಾಲಿಕೆ ₹ 5.80 ಕೋಟಿ, ಮಂಗಳೂರು ಮಹಾನಗರ ಪಾಲಿಕೆ ₹ 5.25 ಕೋಟಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ₹ 3.21 ಕೋಟಿ, ಯಾದಗಿರಿ ನಗರಸಭೆ ₹6 ಕೋಟಿ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚಲು ಮುಂದಾಗಿವೆ. ಆದರೆ, ಗುಂಡಿಯಿಂದಾಗಿರುವ ದುರಂತಗಳಿಗೆ ಪರಿಹಾರದ ಬಗ್ಗೆ ಮಾತ್ರ ಯಾರೂ ಚಕಾರ ಎತ್ತುವುದಿಲ್ಲ.

ಕಲಬುರಗಿ ಜಿಲ್ಲೆ ಕಾಳಗಿ ಪಟ್ಟಣದಿಂದ ಚಿಂಚೋಳಿಗೆ ಹೋಗುವ ಮಾರ್ಗದಲ್ಲಿ ಎರಡು, ಮೂರು ಅಡಿ ಆಳ ಅಗೆದಿರುವುದಿಂದ ಪ್ರತಿ ನಿತ್ಯವೂ ವಾಹನ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ತಿಂಥಣಿ ಬ್ರಿಜ್‌ ಮಾರ್ಗದ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 150 ಎ)ಯ ಅಕ್ಕಪಕ್ಕದ ಮಣ್ಣಿನ ಬಾಹುಗಳು ಸವಕಳಿಯಾಗಿದ್ದು, ಹಟ್ಟಿ ಚಿನ್ನದ ಗಣಿ, ಗುರಗುಂಟಾ, ಗೊಲಪಲ್ಲಿ ಹತ್ತಿರ ಪ್ರತಿನಿತ್ಯವೂ ಒಂದಾದರೂ ಅಪಘಾತ ಸಂಭವಿಸುತ್ತಿದೆ. ಯಾದಗಿರಿ ನಗರದ ಮುಂಡರಗಿ ರಸ್ತೆ ಮಾರ್ಗದಲ್ಲಿ ಸೆ.9ರಂದು ಬೈಕ್ ಸವಾರ ಭೀಮೇಶ ಗುಂಡಿಗೆ ಬಿದ್ದು, ಅವರ ಮೇಲೆ ಲಾರಿ ಹರಿಯಿತು. ಅವರು ಸ್ಥಳದಲ್ಲೇ ಮೃತಪಟ್ಟರು. ಅವರ ಕುಟುಂಬಕ್ಕೂ ಪರಿಹಾರ ನೀಡಿಲ್ಲ. ಆ ಗುಂಡಿಯನ್ನು ಮುಚ್ಚುವ ಕನಿಷ್ಠ ಕೆಲಸವನ್ನೂ ಎಂಜಿನಿಯರ್‌ಗಳು ಮಾಡಿಲ್ಲ.

ತುಮಕೂರು ‘ಸ್ಮಾರ್ಟ್‌ ಸಿಟಿ’ಯಾಗುವ ಸಮಯದಲ್ಲೂ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು. ಗುಂಡಿಗಳನ್ನು ಮುಚ್ಚಲು ಮಹಾನಗರ ಪಾಲಿಕೆ ಈ ವರ್ಷವೂ ₹ 30 ಲಕ್ಷ ಅನುದಾನ ಮೀಸಲಿಟ್ಟಿದೆ. ಆದರೂ ರಸ್ತೆಯ ದುಃಸ್ಥಿತಿ ಬದಲಾಗಿಲ್ಲ. ನಗರದ ಕುಣಿಗಲ್‌ ರಸ್ತೆ, ಕೋತಿತೋಪು ಮುಖ್ಯ ರಸ್ತೆ, ಶಿರಾ ಗೇಟ್‌ ಸೇರಿ ವಿವಿಧ ರಸ್ತೆಗಳಲ್ಲಿ ಸಂಚರಿಸಿದರೆ ಗುಂಡಿಗಳದ್ದೇ ದರ್ಶನ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ನಗರಸಭೆ ₹ 16 ಲಕ್ಷ, ಗೌರಿಬಿದನೂರು ನಗರಸಭೆ ₹ 2 ಲಕ್ಷ ವೆಚ್ಚ ಮಾಡಿದ್ದರೂ ರಸ್ತೆಗಳು ಗುಂಡಿಮುಕ್ತವಾಗಿಲ್ಲ. ಕೊಡಗು ಜಿಲ್ಲೆಯಲ್ಲಿ ಗುಂಡಿ ಇಲ್ಲದ ರಸ್ತೆಗಳನ್ನು ಹುಡುಕಬೇಕಾದ ಸ್ಥಿತಿ ಇದೆ. ಹಾಸನ ಜಿಲ್ಲೆಯಾದ್ಯಂತಮಳೆಯಿಂದಾಗಿ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಸರ್ಕಾರದಿಂದ ಅನುದಾನ ಸಿಕ್ಕಿಲ್ಲ ಎಂದು ಗುಂಡಿಗಳನ್ನು ಮುಚ್ಚಿಲ್ಲ.

ಪರ್ಸೆಂಟೇಜ್‌ ಕೊಡಬೇಕಲ್ಲ...: ‘ನಾನು ದಶಕಗಳಿಂದ ಗುತ್ತಿಗೆದಾರರ ಕೆಲಸ ಮಾಡುತ್ತಿದ್ದೇವೆ. ಐಆರ್‌ಸಿ ಸೇರಿ ಗುಣಮಟ್ಟದ, ಹಲವು ವರ್ಷ ಬಾಳಿಕೆ ಬರುವ ರಸ್ತೆ ನಿರ್ಮಿಸುವ ಕೆಲಸ ನಮಗೂ ಬರುತ್ತದೆ. ಟೆಂಡರ್‌ ಪ್ರಕ್ರಿಯೆಯಿಂದ ಹಿಡಿದು ಕಾರ್ಯಾದೇಶ, ಕಾಮಗಾರಿಗೆ ಚಾಲನೆ, ಕಾಮಗಾರಿ ನಡೆಯುತ್ತಿರುವಾಗ, ಮುಗಿದು ಬಿಲ್‌ ಪಡೆಯುವ ಎಲ್ಲ ಹಂತದಲ್ಲೂ ಎಲ್ಲರಿಗೂ ಪರ್ಸೆಂಟೇಜ್‌ ಕೊಡಲೇಬೇಕು. ನಿಯಮ ಪಾಲಿಸುತ್ತಾ ಕಾಮಗಾರಿ ಮಾಡಲು ನಾವು ಮುಂದಾದರೂ ಪರ್ಸೆಂಟೇಜ್‌ ಪಡೆಯುವವರು ಬಿಡುವುದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗುತ್ತಿಗೆದಾರರು ಹೇಳಿದರು.

ಮುಂಜಾಗ್ರತೆ ಇಲ್ಲ...: ‘ರಸ್ತೆ ನಿರ್ಮಾಣ ಅಥವಾ ಗುಂಡಿ ದುರಸ್ತಿ ತಂತ್ರಜ್ಞಾನ ಬೇರೆ ದೇಶಗಳಲ್ಲಿ ವಿಭಿನ್ನವಾಗೇನೂ ಇಲ್ಲ. ಬಿಟುಮಿನ್‌ ಮಿಕ್ಸ್‌ ಹಾಕುವುದರಲ್ಲಿ ವ್ಯತ್ಯಾಸವಾಗಬಹುದು. ಶ್ರೀಲಂಕಾ, ಥಾಯ್ಲೆಂಡ್‌ ಸೇರಿ ಹೆಚ್ಚು ಮಳೆ ಬರುವ ದೇಶಗಳಲ್ಲಿ ರಸ್ತೆಗಳು ಇಷ್ಟು ಹಾಳಾಗುವುದಿಲ್ಲ ಎಂದರೆ ಅದಕ್ಕೆ ಗುಣಮಟ್ಟ, ಮುಂಜಾಗ್ರತೆ ಕಾರಣ. ಇದಕ್ಕಿಂತ ಹೆಚ್ಚಿನದಾಗಿ ‘ಕಳಪೆ ಕಾಮಗಾರಿ’ ಎಂದು ಗೊತ್ತಾದರೆ ಅವರಿಗೆ ಉಗ್ರ ಶಿಕ್ಷೆ ಕಾದಿರುತ್ತದೆ. ಹೀಗಾಗಿ ರಸ್ತೆಗಳು ಚೆನ್ನಾಗಿರುತ್ತವೆ. ನಮ್ಮಲ್ಲಿ ಇಂತಹ ವ್ಯವಸ್ಥೆ ಇಲ್ಲ. ಕಾಮಗಾರಿ ನಡೆದ ಮೇಲೆ ಮೂರನೇ ಸಂಸ್ಥೆಯಿಂದ ಪರಿಶೀಲನೆಯನ್ನೂ ಮಾಡಿಸುವುದಿಲ್ಲ. ರಸ್ತೆ ಗುಂಡಿ ಬೀಳುವುದೇ ಇವರಿಗೆಲ್ಲ ಬೇಕಿರುವುದು. ಗುತ್ತಿಗೆದಾರ, ಮೇಲ್ವಿಚಾರಣೆ ಹೊಂದಿರುವ ಎಂಜಿನಿಯರ್‌ಗಳಿಗೆ ಉಗ್ರ ಶಿಕ್ಷೆಯಾಗಿ ಎಲ್ಲರಿಗೂ ಅದು ಬಹಿರಂಗವಾದರೆ ನಮ್ಮ ರಸ್ತೆಗಳ ಗುಣಮಟ್ಟ ಹೆಚ್ಚಾಗುತ್ತದೆ’ ಎಂದು ತಾಂತ್ರಿಕ ತಜ್ಞ ಶ್ರೀಹರಿ ಹೇಳುತ್ತಾರೆ.

ತರಾತುರಿಯಲ್ಲಿ ಎಫ್‌ಐಆರ್‌

‘ಮಂಗಳೂರು ನಗರದ ಬಿಕರ್ನಕಟ್ಟೆಯಲ್ಲಿ ಆ.5ರಂದು ಸಂಜೆ 6.45ಕ್ಕೆ ಸಂಭವಿಸಿದ ಅಪಘಾತದಲ್ಲಿ ನನ್ನ ಮಗ ಆತಿಶ್‌ ಕೊನೆಯುಸಿರೆಳೆದಿದ್ದ. ರಸ್ತೆ ಗುಂಡಿಯೇ ಅಪಘಾತಕ್ಕೆ ಕಾರಣ ಎಂಬುದಕ್ಕೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳೇ ಸಾಕ್ಷಿ. ಆದರೆ ಪೊಲೀಸರು ರಾತ್ರಿ 10 ಗಂಟೆಗೆ ತರಾತುರಿಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಮರುದಿನವೇ ಆ ಗುಂಡಿ ಮುಚ್ಚಲಾಗಿದೆ. ಅಪಘಾತ ರಸ್ತೆ ಗುಂಡಿಯಿಂದಾಗಿಯೇ ಸಂಭವಿಸಿತ್ತು ಎಂಬುದನ್ನು ಸಾಬೀತುಪಡಿಸಲು ನಾನು ಕಾನೂನು ಸಮರ ನಡೆಸಬೇಕಾಗಿದೆ

ಯಶವಂತ ಎಸ್‌. ಬಂಗೇರ,ಮಾಲೆಮಾರ್‌, ಮಂಗಳೂರು

---

‘ಅಧಿಕಾರಿಗಳಿಗೆ ದಂಡ ಯಾವಾಗ?’

ನಾನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಪರಿಸರ ವಿಜ್ಞಾನ) ಕೊನೆಯ ಸೆಮಿಸ್ಟರ್‌ನಲ್ಲಿ ಕಲಿಯುತ್ತಿದ್ದಾಗ (ಜುಲೈ 28ರಂದು) ರಸ್ತೆಗುಂಡಿಯಿಂದಾಗಿ ಉಂಟಾದ ಅಪಘಾತದಲ್ಲಿ ಬಲಗೈ ಮೂಳೆ ಮುರಿಯಿತು. ಗುಂಡಿಯಲ್ಲಿದ್ದ ಕಬ್ಬಿಣದ ರಾಡ್‌ ಚಕ್ರಕ್ಕೆ ಸಿಲುಕಿತ್ತು. ಬಲಗೈ ಮೂಳೆ ಮುರಿತದಿಂದ ಶಿಕ್ಷಣಕ್ಕೂ ಅಡ್ಡಿಯಾಯಿತು. ಹೆಲ್ಮೆಟ್‌ ಧರಿಸದೇ ಇದ್ದರೆ, ದಾಖಲೆಗಳನ್ನು ತೋರಿಸದಿದ್ದರೆ ಪೊಲೀಸರು ನಮಗೆ ದಂಡ ವಿಧಿಸುತ್ತಾರೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ದಂಡ ವಿಧಿಸುವವರು ಯಾರು?

ನಿಶ್ಮಿತಾ ಪಿ.ಎಸ್‌.,ಕೊಟ್ಟಾರಚೌಕಿ, ಮಂಗಳೂರು‌
---

ಪತಿ ಚಿಕಿತ್ಸೆಗೆ ಸಾಲ...

ಬೆಂಗಳೂರಿನ ಗಂಗಮ್ಮ ವೃತ್ತದಲ್ಲಿ ನನ್ನ ಪತಿ ಸಂದೀಪ್‌ ರಸ್ತೆ ಗುಂಡಿಯಿಂದಾಗ ಬಿದ್ದು ಅಪಘಾತಕ್ಕೆ ಒಳಗಾದರು. ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದಾಗ ಅವರು ಕೋಮಾಗೆ ಹೋದರು. ಕೋಮಾದಿಂದ ಹೊರಬಂದು ಸ್ವಲ್ಪ ಚೇತರಿಸಿಕೊಳ್ಳುವ ಹೊತ್ತಿಗೆ ₹13 ಲಕ್ಷ ಖರ್ಚಾಗಿದೆ. ನಮ್ಮೆಲ್ಲ ಉಳಿತಾಯ ಖಾಲಿಯಾಗಿ, ಸಾಲವನ್ನೂ ಮಾಡಿಕೊಂಡಿದ್ದೇವೆ. ಸ್ನೇಹಿತರು, ಒಂದಷ್ಟು ದಾನಿಗಳು ಹಣ ನೀಡಿದ್ದಾರೆ. ಎಫ್‌ಐಆರ್‌ನಲ್ಲಿ ‘ನಿರ್ಲಕ್ಷ್ಯದ ಚಾಲನೆ’ ಎಂದಿದೆ. ಹೀಗಾಗಿ ಬಿಬಿಎಂಪಿ ಪರಿಹಾರ ನೀಡುತ್ತಿಲ್ಲ

ಸೀಮಾ,ಸಂದೀಪ್‌ ಅವರ ಪತ್ನಿ, ಬೆಂಗಳೂರು

---

ಮಾಹಿತಿ:‍ ಪ್ರವೀಣ್‌ಕುಮಾರ್‌ ಪಿ.ವಿ, ಡಿ.ಕೆ. ಬಸವರಾಜು, ಎಂ.ಮಹೇಶ್‌, ಎಂ.ಎನ್‌. ಯೋಗೇಶ್‌, ಚಂದ್ರಕಾಂತ ಮಸಾನಿ, ಮನೋಜಕುಮಾರ್ ಗುದ್ದಿ, ನಾಗರಾಜ ಚಿನಗುಂಡಿ, ಬಿ.ಜಿ. ಪ್ರವೀಣಕುಮಾರ್, ಆದಿತ್ಯ ಕೆ.ಎ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.