ADVERTISEMENT

ಮುಡಾ ದಾಖಲೆ ವಿಮಾನದಲ್ಲಿ ಸಾಗಿಸಿದ್ದೇಕೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 15:39 IST
Last Updated 6 ಜುಲೈ 2024, 15:39 IST
ಎಚ್‌ಡಿಕೆ
ಎಚ್‌ಡಿಕೆ   

ಬೆಂಗಳೂರು: ಮೈಸೂರಿನ ‘ಮುಡಾ’ ಹಗರಣದ ದಾಖಲೆಗಳನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ವಿಶೇಷ ವಿಮಾನದಲ್ಲಿ ಸಾಗಿಸಿ, ಸುರಕ್ಷಿತ ಸ್ಥಳಗಳಲ್ಲಿ ಇಟ್ಟುಕೊಂಡಿದ್ದರೂ, ‘ರೀ–ಡೂ’ನಂತೆ ಈ ಹಗರಣವನ್ನು ಸರ್ಕಾರ ಮುಚ್ಚಿಹಾಕಲು ಸಾಧ್ಯವಿಲ್ಲ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಗರಣ ಬೆಳಕಿಗೆ ಬರುತ್ತಿದ್ದಂತೆ ಮೈಸೂರಿಗೆ ದೌಡಾಯಿಸಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ‘ಮುಡಾ’ದಲ್ಲಿದ್ದ ದಾಖಲೆಗಳನ್ನು ವಿಶೇಷ ವಿಮಾನದಲ್ಲಿ ಸಾಗಿಸಿದ್ದಾರೆ. ಅಕ್ರಮ ನಡೆದೇ ಇಲ್ಲ ಎನ್ನುವುದಾದರೆ ದಾಖಲೆ ಸಾಗಿಸಿದ್ದೇಕೆ ಎಂದು ಅವರು ಪ್ರಶ್ನಿಸಿದರು.

‘ಅವರು ಏನೆಲ್ಲ ಮುಚ್ಚಿಡಲು ಯತ್ನಿಸಿದರೂ ಎಲ್ಲ ದಾಖಲೆಗಳು ಈಗ ಸಾರ್ವಜನಿಕವಾಗಿ ಲಭ್ಯವಿವೆ. ಹಾಗಾಗಿ, ಹಗರಣ ಮುಚ್ಚಿಹಾಕಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಮುಡಾ’ದಲ್ಲಿ ನಡೆದಿರುವುದು ಹಗರಣವೇ ಅಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಹಾಗಾದರೆ ತನಿಖೆ ಏಕೆ ನಡೆಯುತ್ತಿದೆ? ಜಿಲ್ಲಾಧಿಕಾರಿ ವರದಿ ನೀಡಿದ ನಂತರವೂ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ? ಬಿಜೆಪಿ ಸರ್ಕಾರದ ಅವಧಿಯಲ್ಲೇ ಜಮೀನು, ನಿವೇಶನ ಪಡೆದಿದ್ದರೆ ಆಸ್ತಿಯ ವಿವರವನ್ನು 2023ರ ವಿಧಾಸನಭಾ ಚುನಾವಣೆಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಏಕೆ ನಮೂದಿಸಲಿಲ್ಲ ಎಂದು ಕೇಳಿದರು.

ಅವರದೇ ಪಕ್ಷದ ಶಾಸಕ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವಿನಯ್‌ ಕುಲಕರ್ಣಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಪ್ರತಿಕ್ರಿಯೆಯನ್ನೇ ನೀಡಿಲ್ಲ ಎಂದು ಕುಟುಕಿದರು.

ಪರಿಶಿಷ್ಟರ ಹಣ ಲೂಟಿ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲ್ಯಾಣಕ್ಕೆ ಇರಿಸಲಾಗಿದ್ದ ಹಣವನ್ನು ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ. ಪರಿಶಿಷ್ಟರ ಬೆನ್ನಿಗೆ ಚೂರಿ ಹಾಕಿದೆ. ಕಳೆದ ಸಾಲಿನಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಿಗೆ ಈ ಹಣವನ್ನು ರವಾನಿಸಿತ್ತು ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿ ಉಪ ಯೋಜನೆ, ಪರಿಶಿಷ್ಟ ಪಂಗಡಗಳ ಉಪ ಯೋಜನೆ ಅಡಿಯಲ್ಲಿ ₹39 ಸಾವಿರ ಕೋಟಿ ವೆಚ್ಚ ಮಾಡುವ ಕ್ರಿಯಾ ಯೋಜನೆ ಪ್ರಸ್ತಾವನೆಗೆ ಎಸ್‌ಸಿಎಸ್‌ಪಿ–ಟಿಎಸ್‌ಪಿ ಅಭಿವೃದ್ಧಿ ಪರಿಷತ್ ಅನುಮೋದನೆ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಧ್ಯಪ್ರದೇಶ ಸೇರಿದಂತೆ ಬಹುತೇಕ ರಾಜ್ಯಗಳು ಕರ್ನಾಟಕಕ್ಕಿಂತ ಹೆಚ್ಚು ಅನುದಾನವನ್ನು ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.