ADVERTISEMENT

ನಾವ್ಯಾಕೆ ದೇವೇಗೌಡರ ಸಾವು ಬಯಸುತ್ತೇವೆ?: ಸಚಿವ ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 20 ಮೇ 2024, 11:54 IST
Last Updated 20 ಮೇ 2024, 11:54 IST
   

ಚಾಮರಾಜನಗರ: ‘ನಾವ್ಯಾಕೆ ದೇವೇಗೌಡರ ಸಾವು ಬಯಸುತ್ತೇವೆ? ಅವರ ಮನೆಯಲ್ಲಿ ನಡೆದಿರುವ ಅನಾಹುತಕ್ಕೆ ನಾವು ಕಾರಣವೇ? ಅವರ ಮನೆಯವರೇ ಮಾಡಿಕೊಂಡ ಅನಾಹುತಗಳು’ ಎಂದು ಪಶುಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಸೋಮವಾರ ಹೇಳಿದರು.  

‘ಕಾಂಗ್ರೆಸ್‌ ದೇವೇಗೌಡರ ಸಾವು ಬಯಸುತ್ತಿದೆ’ ಎಂಬ ಜೆಡಿಎಸ್‌ ಆರೋಪದ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಮೂರ್ಖರ ರೀತಿ ಮಾತನಾಡುತ್ತಿದ್ದಾರೆ. ನಡೆದಿರುವ ಘಟನೆಯಿಂದ ದೇವೇಗೌಡರ ಮನಸ್ಸಿಗೆ ನೋವಾಗಿರುತ್ತದೆ. ದೇವೇಗೌಡರು ಇನ್ನೂ ಹತ್ತಾರು ವರ್ಷ ಬದುಕಲಿ ನಮಗೆ ತೊಂದರೆಯಿಲ್ಲ’ ಎಂದರು. 

ದೇವರಾಜೇಗೌಡ ಜೈಲಿನಿಂದ ಹೊರಬಂದರೆ ಸರ್ಕಾರ ಬಿದ್ದು ಹೋಗುತ್ತದೆ ಎಂಬ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ದೇವರಾಜೇಗೌಡರಂತಹ ನೂರು ಜನ ಜೈಲಿಂದ ಹೊರಬಂದರೂ ಸರ್ಕಾರ ಬೀಳುವುದಿಲ್ಲ. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಪೆನ್‌ಡ್ರೈವ್‌ ಹಂಚಿರುವುದು ಬಿಜೆಪಿಯ ಕುತಂತ್ರ. ಪೆನ್‌ಡ್ರೈವ್‌ ಇದೆ ಎಂದು ಹೇಳುತ್ತಿದ್ದವರು ವಕೀಲ ದೇವರಾಜೇಗೌಡ. ಅವರೇ ಪೆನ್‌ಡ್ರೈವ್‌ ಹೊರಗಡೆ ಬಿಟ್ಟಿರಬೇಕು. ಅವರ ಬಳಿ ಏನೇ ಸಾಕ್ಷಿ ಇದ್ದರೂ ಎಸ್‌ಐಟಿಗೆ ಕೊಡಲಿ. ಯಾರಾದರೂ ಕುತಂತ್ರ ಮಾಡಿರುವ ಸಾಕ್ಷಿ ಇದ್ದರೂ ಕೊಡಲಿ. ಪ್ರಜ್ವಲ್ ನಮ್ಮ ದೇಶದಲ್ಲಿ ಇಲ್ಲದಿರುವುದರಿಂದ ಬಂಧನ ಸಾಧ್ಯವಾಗಿಲ್ಲ. ಪ್ರಕರಣವನ್ನು ಸರ್ಕಾರ ಸಿಬಿಐಗೆ ವರ್ಗಾವಣೆ ಮಾಡುವುದಿಲ್ಲ’ ಎಂದರು. 

ADVERTISEMENT

‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದಾರೆ’ ಎಂಬ ಆರೋಪದ ಬಗ್ಗೆ ಕೇಳಿದ್ದಕ್ಕೆ, ‘ಕೆಟ್ಟದ್ದಕ್ಕೆ ಮಾತ್ರ ಡಿಕೆಶಿ ಹೆಸರು ಸೇರಿಸಲಾಗುತ್ತಿದೆ. ಅವರು ಮಾಡಿರುವ ಒಳ್ಳೆಯದರ ಬಗ್ಗೆ ಯಾರಾದರೂ ಮಾತನಾಡುತ್ತಾರಾ? ಅವರು ಒಳ್ಳೆಯದು ಕೂಡ ಮಾಡಿದ್ದಾರೆ. ಅದಕ್ಕೂ ಅವರ ಹೆಸರು ಸೇರಿಸಬೇಕಲ್ಲಾ’ ಎಂದು ವೆಂಕಟೇಶ್‌ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.