ADVERTISEMENT

‘ರಾಮ ಮದ್ಯಪಾನ ಮಾಡುತ್ತಿದ್ದ‘: ವಿವಾದದ ಕಿಡಿ ಹೊತ್ತಿಸಿದ ಭಗವಾನ್ ಪುಸ್ತಕ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 16:49 IST
Last Updated 27 ಡಿಸೆಂಬರ್ 2018, 16:49 IST
   

ಮೈಸೂರು: ‘ರಾಮ ಮದ್ಯಪಾನ ಮಾಡುತ್ತಿದ್ದ’ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು ಈಚೆಗೆ ಪ್ರಕಟಿಸಿದ ‘ರಾಮ ಮಂದಿರ ಏಕೆ ಬೇಡ?’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ರಾಮಾಯಣದ ಉತ್ತರಕಾಂಡದ 42ನೇ ಸರ್ಗದ ಶ್ಲೋಕಗಳನ್ನು ಇದಕ್ಕೆ ಪೂರಕವಾಗಿ ಉದಾಹರಿಸಿದ್ದಾರೆ.

‘ಸೀತಾಮಾದಾಯ ಹಸ್ತೇನ ಮಧು ಮೈರೇಯಕಂ’ ಎಂಬ ಶ್ಲೋಕವಿದ್ದು, ಇದರ ಅರ್ಥ ‘ಸೀತೆಯ ಜತೆ ಮಧು ಮೈರೇಯಕಂ ಎಂಬ ಮದ್ಯಪಾನ ಮಾಡುತ್ತಿದ್ದನು, ಮಾಂಸ ತಿನ್ನುತ್ತಿದ್ದನು. ನೃತ್ಯ ಗೀತೆಗಳಲ್ಲಿ ಪರಿಣತರಾದ ಹುಡುಗಿಯರೂ, ವನಿತೆಯರೂ ಪಾನಮತ್ತರಾಗಿ ರಾಮನ ಎದುರಿಗೆ ನರ್ತಿಸಿದರು. ಧರ್ಮವಂತ ವಿನೋದಪ್ರಿಯ ಪರಮಭೂಷಿತನಾದ ರಾಮ ಆ ಸ್ತ್ರೀಯರನ್ನು ಸಂತೋಷಪಡಿಸಿದನು’ ಎಂದು ಭಗವಾನ್ ಅರ್ಥೈಸಿದ್ದಾರೆ. (ಪುಟ ಸಂಖ್ಯೆ 101)

ADVERTISEMENT

ಈ ರೀತಿಯಲ್ಲಿ ರಾಮನ ವಿರುದ್ಧ ಇಡೀ ಪುಸ್ತಕದಲ್ಲಿ ಅವರು ಬರೆದಿದ್ದಾರೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದದ ಕಿಡಿ ಹೊತ್ತಿಸಿದೆ.

ಭಗವಾನ್ ವಿರುದ್ಧ ಪ್ರಕರಣ ದಾಖಲು

ಮಂಡ್ಯ: ‘ಶ್ರೀರಾಮನನ್ನು ನಿಂದಿಸಿರುವ ಪ್ರೊ.ಕೆ.ಎಸ್‌.ಭಗವಾನ್‌ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.

‘ಭಗವಾನ್‌ ಆಗಾಗ ಶ್ರೀರಾಮನನ್ನು ನಿಂದಿಸಿ ಜನರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಕೊಡಗಿನಲ್ಲಿ ಟಿಪ್ಪು ವಿರುದ್ಧ ಹೇಳಿಕೆ ನೀಡಿದ ವ್ಯಕ್ತಿಯನ್ನು ಬಂಧಿಸಲು ಸರ್ಕಾರ ಆದೇಶ ನೀಡುತ್ತದೆ. ಆದರೆ, ರಾಮನ ವಿರುದ್ಧ ನಿಂದನೆ ಮಾಡುತ್ತಿರುವ ಭಗವಾನ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಭಗವಾನ್‌ ಮಾನಸಿಕ ರೋಗಿಯಾಗಿದ್ದು ಚಿಕಿತ್ಸೆ ಕೊಡಿಸಬೇಕು, ಇಲ್ಲದಿದ್ದರೆ ನಾವೇ ಅವರಿಗೆ ಚಿಕಿತ್ಸೆ ಕೊಡಿಸುತ್ತೇವೆ. ಇದಕ್ಕೆ ಅನುಮತಿ ನೀಡಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.

‘ಶ್ರೀರಾಮ ಬದುಕಿದ್ದ ತ್ರೇತಾಯುಗದಲ್ಲಿ ಭಗವಾನ್‌ ವಂಶಸ್ಥರು ಮಿಲಿಟರಿ ಹೋಟೆಲ್‌ ಇಟ್ಟಿದ್ದರೇ, ಬಾರ್‌ ನಡೆಸುತ್ತಿದ್ದರೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಮುಖಂಡರಾದ ಶಿವಕುಮಾರ ಆರಾಧ್ಯ, ಸಿ.ಟಿ.ಮಂಜುನಾಥ್‌, ನಾಗಣ್ಣ ಮಲ್ಲಪ್ಪ, ಸಿದ್ದರಾಜುಗೌಡ, ಮಹಾಂತಪ್ಪ, ಶಿವು, ರಮೇಶ್‌ ದೂರು ಸಲ್ಲಿಸಿದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.