ADVERTISEMENT

ಕುಟುಂಬ ರಾಜಕಾರಣ | ಮೋದಿ ಮೌನ ವಹಿಸಿದ್ದೇಕೆ: ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 15:49 IST
Last Updated 15 ಏಪ್ರಿಲ್ 2024, 15:49 IST
<div class="paragraphs"><p>ದಿನೇಶ್ ಗುಂಡೂರಾವ್</p></div>

ದಿನೇಶ್ ಗುಂಡೂರಾವ್

   

ಬೆಂಗಳೂರು: ‘ಮೈಸೂರಿನಲ್ಲಿ ಭಾನುವಾರ ನಡೆದ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಕುಟುಂಬ ರಾಜಕಾರಣದ ಬಗ್ಗೆ ನರೇಂದ್ರ ಮೋದಿ ಮೌನ ವಹಿಸಿದ್ದು ಏಕೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಮೋದಿ ಪದೇ ಪದೇ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ, ಮೈಸೂರಿನಲ್ಲಿ ವೇದಿಕೆ ಮೇಲೆ ಎಚ್.ಡಿ. ದೇವೇಗೌಡ ಮತ್ತು ಯಡಿಯೂರಪ್ಪ ಇದ್ದರು. ಹೀಗಾಗಿ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿಲ್ಲ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಮೋದಿ ತಮಗೆ ಬೇಕಾದಾಗ ಕುಟುಂಬ ರಾಜಕಾರಣದ ಬೆಂಬಲ ಪಡೆಯುತ್ತಾರೆ. ಬೇಡದೆ ಇದ್ದಾಗ ತೆಗಳುತ್ತಾರೆ’ ಎಂದ ಅವರು, ‘ಕಾಂಗ್ರೆಸ್ ಗ್ಯಾರಂಟಿ ಮತ್ತು ಮೋದಿ ಗ್ಯಾರಂಟಿಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ’ ಎಂದರು. 

‘ಬಿಜೆಪಿ ಪ್ರಣಾಳಿಕೆಯಲ್ಲಿ ಮೋದಿ ಕಿ ಗ್ಯಾರಂಟಿ ಎಂದಿದ್ದಾರೆ. ಬಿಜೆಪಿಯಲ್ಲಿ ವ್ಯಕ್ತಿ ಪೂಜೆ ಪರಾಕಾಷ್ಠೆ ತಲುಪಿದೆ. ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಮತ ಹಾಕಿ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಇದರ ಪರಿಣಾಮವಾಗಿ ಮೋದಿ ಕೂಡ ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ಇದು ಆತ್ಮರತಿಯ ಅತಿರೇಕದ ಭ್ರಮೆ’ ಎಂದರು.

‘ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಎಚ್‌.ಡಿ. ಕುಮಾರಸ್ವಾಮಿ, ವಿಷಾದ ವ್ಯಕ್ತಪಡಿಸಿದರೆ ಸಾಕಾಗಲ್ಲ, ಮಹಿಳೆಯರಲ್ಲಿ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.