ಬೆಂಗಳೂರು: ‘ರಾಜ್ಯ ಸರ್ಕಾರ ಮಧ್ಯಾಹ್ನದ ಊಟದಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆಯನ್ನು ನೀಡಲು ಏಕೆ ನಿರ್ಧರಿಸಿದೆ? ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ತಮ್ಮ ಪಕ್ಷದ ಸರ್ಕಾರವನ್ನೇ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಅವರು, ‘ಕರ್ನಾಟಕ ಸರ್ಕಾರ ಮಧ್ಯಾಹ್ನದ ಊಟದಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆಯನ್ನು ನೀಡಲು ಯಾಕೆ ನಿರ್ಧರಿಸಿದೆ? ಪೋಷಕಾಂಶಕ್ಕೆ ಇದು ಏಕೈಕ ಮೂಲವೇನಲ್ಲ. ಸಸ್ಯಾಹಾರಿಗಳಾಗಿರುವ ಅನೇಕ ವಿದ್ಯಾರ್ಥಿಗಳು ಇದರಿಂದ ಹೊರಗುಳಿಯುವಂತಾಗಲಿದೆ’ ಎಂದು ಅವರು ಹೇಳಿದ್ದಾರೆ.
ಮುಂದುವರಿದು, ‘ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶ ಸಿಗುವಂತೆ ನಮ್ಮ ನೀತಿಗಳನ್ನು ರೂಪಿಸಬೇಕಾದ ಅಗತ್ಯವಿದೆ’ ಎಂದು ತೇಜಸ್ವಿನಿ ಅನಂತಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಮೊಟ್ಟೆಗೆ ನನ್ನ ವಿರೋಧವಿಲ್ಲ. ಆದರೆ, ಅಪೌಷ್ಠಿಕತೆಯನ್ನು ಮೊಟ್ಟೆಯೇ ನಿವಾರಿಸುತ್ತದೆ ಎಂದರೆ ಅದು ಬಹಳ ತಪ್ಪು ಎಂದೂ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರಧ್ವಾಜ್ ಗಿರೀಶ್ ಎಂಬ ಟ್ವಿಟರ್ ಬಳಕೆದಾರರೊಬ್ಬರು, ‘ಸಸ್ಯಾಹಾರಿ ವಿದ್ಯಾರ್ಥಿಗಳಿಗೆ ಶೇಂಗಾ ಚಿಕ್ಕಿ ಕೊಡುತ್ತಿರಬಹುದು’ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿನಿ, ‘ಚಿಕ್ಕಿಯನ್ನೇ ಎಲ್ಲ ವಿದ್ಯಾರ್ಥಿಗಳಿಗೆ ಕೊಡಬಹುದಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.