ಶಿವಮೊಗ್ಗ: ‘ಜಾತ್ಯತೀತವಾಗಿರುವ ದೇಶದಲ್ಲಿ ಜಾತಿ ಗಣತಿ ಏಕೆ ಬೇಕು? ಅಷ್ಟೊಂದು ಹಣ ಖರ್ಚು ಮಾಡಿ ತಯಾರಿಸಲಾದ ಜಾತಿ ಗಣತಿ ವರದಿಯನ್ನು ಇಷ್ಟು ವರ್ಷ ಮುಚ್ಚಿಟ್ಟಿದ್ದು ಏಕೆ?’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನಿಸಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎಂದು ಹೇಳುತ್ತಾರೆ. ಮತ್ತೊಂದು ಕಡೆಗೆ ಜಾತಿ ಗಣತಿ ಬೇಕು ಅನ್ನುತ್ತಾರೆ. ಜಾತಿ ಗಣತಿ ಏಕೆ ಬೇಕು ಎನ್ನುವುದು ತಿಳಿಯುತ್ತಿಲ್ಲ’ ಎಂದರು.
‘ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣದ ಇನ್ನುಳಿದ ಕಾರ್ಯ ಭರದಿಂದ ಸಾಗಿದೆ. ಒಂದು ವರ್ಷದಲ್ಲಿ ಶ್ರೀರಾಮ ಮಂದಿರ ಕಾಮಗಾರಿ ಪೂರ್ಣವಾಗಲಿದೆ. ರಾಮರಾಜ್ಯದ ಸ್ಥಾಪನೆಗಾಗಿ ನಮಗೆ ರಾಮ ಮಂದಿರ ಬೇಕು. ಇವತ್ತು ಪ್ರಜಾರಾಜ್ಯ ಇದೆ. ಆದರೂ ರಾಮನ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ತಾಯಿಯನ್ನೂ, ತಾಯಿನಾಡನ್ನೂ ಗೌರವಿಸಬೇಕು’ ಎಂದು ಹೇಳಿದರು.
‘ಅಯೋಧ್ಯೆಗೆ ಹೋದಾಗ ನಿಮ್ಮ ಹೆಸರಿನಲ್ಲಿ ಸಹಾಯ ಮಾಡುತ್ತಿದ್ದೇನೆ ಅಂದರೆ ಅದೇ ಸೇವೆ. ನಮ್ಮ ಮಠದಿಂದ ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡುವ ಕಾರ್ಯ ಆಗುತ್ತಿದೆ. ರಾಮನ ಮಂದಿರ ನಿರ್ಮಾಣ ಕಾಮಗಾರಿ ಶುರುವಾದ ಮೇಲೆ ಇಂತಹ ಕಾರ್ಯಗಳು ನಡೆಯುತ್ತಿವೆ. ರಾಮಮಂದಿರ ದೇಶದ ಹೆಮ್ಮೆಯ ಪ್ರತೀಕ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.