ಬೆಂಗಳೂರು:ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಹೆಸರು ಮುಂಚೂಣಿಯಲ್ಲಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರನ್ನು ಕೈಬಿಡಲಾಗಿದೆ. ಬದಲಾಗಿ ಯುವ ಮೋರ್ಚಾ ನಾಯಕ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಿದ್ದು ಏಕೆ? ಎಂದು ಬಿಜೆಪಿ ಶಾಸಕ ವಿ. ಸೋಮಣ್ಣ ಪಕ್ಷದ ನಾಯಕರನ್ನು ಪ್ರಶ್ನಿಸಿದ್ದಾರೆ.
ತೇಜಸ್ವಿನಿ ನಿವಾಸದಲ್ಲಿ ಬುಧವಾರ ನಡೆದ ಸಭೆ ಬಳಿಕ ಮಾತನಾಡಿದ ಅವರು, ಟಿಕೆಟ್ ಕೈ ತಪ್ಪಿದ್ದು ಸಂಪೂರ್ಣ ದುರದೃಷ್ಟಕರ. ತೇಜಸ್ವಿನಿ ಅವರ ಹೆಸರನ್ನು ಕೈಬಿಡುವ ನಿರ್ಧಾರವನ್ನು ತೆಗೆದುಕೊಂಡಿದ್ದುಏಕೆ ಎನ್ನುವ ಬಗ್ಗೆ ಸ್ಪಷ್ಟನೆ ದೊರೆಯುವವರೆಗೆ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದುಎಚ್ಚರಿಕೆ ನೀಡಿದರು.
ಈ ವಿಚಾರದಲ್ಲಿ ಬಸವನಗುಡಿ ವಿಧಾನಸಭೆ ಶಾಸಕ ರವಿ ಸುಬ್ರಮಣ್ಯ ಅವರ ಪಾತ್ರವಿದೆ ಎಂದೂ ದೂರಿದರು.‘ರವಿ ಸುಬ್ರಮಣ್ಯ ಅವರು ನನ್ನನ್ನು ಭೇಟಿ ಮಾಡಿದ್ದ ವೇಳೆಯೂ ಅವರಿಗೆ ಇದೇ ಮಾತನ್ನು ಹೇಳಿದ್ದೆ. ತೇಜಸ್ವಿನಿ ಅವರ ಹೆಸರನ್ನು ಕೈಬಿಡಲಾಗಿರುವುದರ ಹಿಂದಿನ ಸತ್ಯವನ್ನು ತಿಳಿಯ ಬಯಸುತ್ತೇನೆ’ ಎಂದರು.
ಮುಂದಿನ ಮೂರು ದಿನದೊಳಗಾಗಿ ನಡೆಯಲಿರುವ ಬಿಜೆಪಿ ಹಿರಿಯ ನಾಯಕರ ಸಭೆಯಲ್ಲಿ ಈ ನಿರ್ಧಾರ ಸಂಬಂಧ ಸ‌್ಪಷ್ಟನೆ ಸಿಗುವ ನಿರೀಕ್ಷೆ ಇದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.
ಆದಾಗ್ಯೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ತೆಜಸ್ವಿ ಸೂರ್ಯ ಆಯ್ಕೆ ಸಂಬಂಧ ಪಕ್ಷದಲ್ಲಿ ಅಸಮಾಧಾನವಿಲ್ಲ ಎಂದಿದ್ದಾರೆ. ‘ಆಯ್ಕೆ ಪ್ರಕ್ರಿಯೆ ಸಂಬಂಧ ಪಕ್ಷದಲ್ಲಿ ಯಾವುದೇ ಪ್ರಶ್ನಿಗಳಿಲ್ಲ. ತೇಜಸ್ವಿನಿ ಅವರೇ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ಪಕ್ಷದ ಅಭ್ಯರ್ಥಿಯ ಜಯಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸಮಾಡಬೇಕು’ ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.