ಮೈಸೂರು: ‘ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ನಡೆದಿರುವ ಪರಿಶಿಷ್ಟ ಜಾತಿಯ ವಿಧವಾ ಪುನರ್ ವಿವಾಹದ ಅಕ್ರಮಕ್ಕೆ ಸಂಬಂಧಿಸಿದಂತೆ ನಾವು ಯಾರನ್ನು ದೂಷಿಸಬೇಕು’ ಎಂದು ಚಿಂತಕ ಡಾ.ಎಸ್.ತುಕಾರಾಮ್ ಪ್ರಶ್ನಿಸಿದರು.
ದಲಿತ ಸಂಘರ್ಷ ಸಮಿತಿ ಒಕ್ಕೂಟದ ವತಿಯಿಂದ ಇಲ್ಲಿ ಶನಿವಾರ ಏರ್ಪಡಿಸಿದ್ದ ’ಕವಿ ಕೆ.ಬಿ.ಸಿದ್ದಯ್ಯ ಒಂದು ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ಕಾರದ ಯೋಜನೆಗಳು ಈ ರೀತಿ ದುರ್ಬಳಕೆಯಾಗುತ್ತಿವೆ. ನಮ್ಮವರೇ ದ್ರೋಹ ಬಗೆಯುತ್ತಿದ್ದಾರೆ. ಇಂತಹ ಸಂಗತಿಗಳ ಮೇಲೆ ನಿಗಾ ಇಟ್ಟಿರಬೇಕು’ ಎಂದು ಅವರು ಹೇಳಿದರು.
ರಾಜ್ಯದ ಅಂಬೇಡ್ಕರ್ ಭವನಗಳ ನಿರ್ವಹಣೆಗೆ ವಾರ್ಷಿಕ ₹ 335 ಕೋಟಿಯನ್ನು ನೀಡಲಾಗುತ್ತದೆ. ಆದರೆ, ಅವುಗಳ ನಿರ್ಮಾಣದ ಹಿಂದಿನ ನಿಜವಾದ ಆಶಯ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ ಭವನಗಳು ಗ್ರಂಥಾಲಯಗಳಾಗಬೇಕಿತ್ತು, ಮಾಹಿತಿ ನೀಡುವ, ಜ್ಞಾನದ ಹಾಗೂ ಸಾಂಸ್ಕೃತಿಕ ಕೇಂದ್ರಗಳಾಗಬೇಕಿತ್ತು. ಆದರೆ, ಈಗ ಅವು ಏಪ್ರಿಲ್ 14 ಮತ್ತು ಡಿಸೆಂಬರ್ 6ರಂದು ಮಾತ್ರ ಕಾರ್ಯಕ್ರಮಗಳನ್ನು ಮಾಡಿ ಬಾಗಿಲು ಹಾಕುವಂತಹ ಕೇಂದ್ರಗಳಾಗಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎಸ್‌ಇಪಿ ಟಿಎಸ್‌ಪಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ₹ 30,444 ಕೋಟಿ ನಿಗದಿಯಾಗಿದೆ. ಇದರಲ್ಲಿ ಪರಿಶಿಷ್ಟಜಾತಿಗೆ ₹ 21,600 ಕೋಟಿ ಹಾಗೂ ಪರಿಶಿಷ್ಟ ಪಂಗಡಕ್ಕೆ ₹ 8,800 ಕೋಟಿ ಇದೆ. ಇಷ್ಟು ಹಣವನ್ನು 36 ಇಲಾಖೆಗಳು 376 ಕಾರ್ಯಕ್ರಮಗಳಿಗೆ ಬಳಕೆ ಮಾಡಬೇಕಾಗಿದೆ. ಬಳಕೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬಹುದಾಗಿದೆ. ಆದರೆ, ಈ ಹಣ ಎಲ್ಲಿ ತಲುಪುತ್ತಿದೆ ಎಂದು ಯಾರೂ ಗಮನಿಸುತ್ತಿಲ್ಲ ಎಂದು ಹೇಳಿದರು.
ದಲಿತರೇ ಮಾಲೀಕರಾಗಿರುವ ಶಾಲೆಗಳಲ್ಲಿ ದಲಿತ ಮಕ್ಕಳಿಗೆ ಉಚಿತ ಪ್ರವೇಶ ಸಿಕ್ಕುತ್ತಿಲ್ಲ ಎಂದು ಕಿಡಿಕಾರಿದರು.
ದಲಿತ ಸಂಘರ್ಷ ಸಮಿತಿ ರೂಪಿಸಿದ ಚಳವಳಿಗಳಲ್ಲಿ ಹಿಂದೆ ದೊಡ್ಡ ಪೂರ್ವಸಿದ್ಧತೆ ಇರುತ್ತಿತ್ತು. ಚಳವಳಿಯ ಭಾಷೆಯೂ ಸರಿಯಾಗಿತ್ತು. ಆದರೆ, ಈಗ ಹಿಂದಿನಷ್ಟು ಪೂರ್ವಸಿದ್ಧತೆ ಇಲ್ಲ. ಭಾಷೆ ಹದ್ದು ಮೀರುತ್ತಿದೆ. ಹೀಗಾಗುವುದನ್ನು ತಡೆಯದಿದ್ದರೆ ಮುಖ ಬದಲಿಸಿಕೊಂಡು ಬರುವ ಸಮಸ್ಯೆಗಳನ್ನು ಎದುರಿಸುವುದು ಕಷ್ಟ ಎಂದು ವಿಶ್ಲೇಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.