ADVERTISEMENT

ಗಂಡನ ಲೈಂಗಿಕ ಅಸಮರ್ಥತೆ ಪತ್ನಿ ಆರೋಪಕ್ಕೆ ಸಾಕ್ಷಿ ಅವಶ್ಯ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 20:00 IST
Last Updated 15 ಜೂನ್ 2022, 20:00 IST
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್   

ಬೆಂಗಳೂರು: ‘ನನ್ನ ಗಂಡ ಲೈಂಗಿಕವಾಗಿ ಅಸಮರ್ಥನಿದ್ದಾನೆ ಎಂದು ಪತ್ನಿ ಸುಳ್ಳು ಆರೋಪ ಹೊರಿಸಿದ್ದೇ ಆದರೆ, ಅದು ಮಾನಸಿಕ ಕ್ರೌರ್ಯ’ ಎಂದು ವ್ಯಾಖ್ಯಾನಿಸಿರುವ ಹೈಕೋರ್ಟ್, ‘ಇಂತಹ ಪ್ರಕರಣ ಗಳಲ್ಲಿ ಪತಿ ಧಾರಾಳವಾಗಿ ವಿಚ್ಛೇದನ ಕೋರಬಹುದು‘ ಎಂದು ಆದೇಶಿಸಿದೆ.

ಪ್ರಕರಣವೊಂದರಲ್ಲಿ ಪತಿಯ ವಿರುದ್ಧ ಆಧಾರ ರಹಿತವಾಗಿ ನಪುಂಸಕತ್ವದ ಆರೋಪ ಹೊರಿಸಿದ್ದ ಪತ್ನಿಯ ನಡೆಯನ್ನು ಆಕ್ಷೇಪಿಸಿರುವ ನ್ಯಾಯಮೂರ್ತಿ ಎಸ್.ಸುನಿಲ್‌ ದತ್‌ ಯಾದವ್‌ ಹಾಗೂ ನ್ಯಾಯಮೂರ್ತಿ ಕೆ.ಎಸ್‌.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಒಂದು ವೇಳೆ ಪತಿ ಮಕ್ಕಳನ್ನು ಹೊಂದಲು ಅಸಮರ್ಥ ಎಂದಾದರೆ ಅಂತಹ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ಇರಬೇಕು. ಇಲ್ಲವಾದಲ್ಲಿ ಅದು ಮಾನಸಿಕ ಕ್ರೌರ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

‘ಲೈಂಗಿಕ ಕ್ರಿಯೆ ನಡೆಸಲು ಪತಿ ಅಸಮರ್ಥ ಎಂದು ಈ ಪ್ರಕರಣದಲ್ಲಿ ಪತ್ನಿ ಆರೋಪ ಮಾಡಿದ್ದಾರೆ.ಪ್ರಜ್ಞಾವಂತ ಮಹಿಳೆಯೊಬ್ಬರು ತನ್ನ ಪತಿಯ ನಪುಂಸಕತ್ವದ ಬಗ್ಗೆಮತ್ತೊಬ್ಬರ ಮುಂದೆ ಸುಳ್ಳು ಆರೋಪ ಮಾಡುವುದಿಲ್ಲ. ಸಾರ್ವಜನಿಕವಾಗಿ ಇಂತಹ ನಿರಾಧಾರ ಆರೋಪ ಮಾಡುವುದರಿಂದ ಪತಿಯ ಘನತೆಗೆ ಧಕ್ಕೆ ತಂದಂತಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

‘ನಾನು ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥ ಎಂದು ಪತ್ನಿ ಪದೇ ಪದೇ ಸಂಬಂಧಿಕರ ಮುಂದೆ ದೂರುತ್ತಿದ್ದಳು. ಇದರಿಂದ ನನಗೆ ತುಂಬಾ ಮುಜುಗರ ಉಂಟಾಗುತ್ತಿತ್ತು ಮತ್ತು ಇದರಿಂದ ನಾನು ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸುತ್ತಿದ್ದು, ನನಗೆ ವಿಚ್ಛೇದನ ಮಂಜೂರು ಮಾಡಬೇಕು’ ಎಂದು ಕೋರಿ 34 ವರ್ಷದ ಪತಿ ಕೌಟುಂಬಿಕ ನ್ಯಾಯಾಲಯ ಕಾಯ್ದೆಯ ಕಲಂ 19 (1)ರ ಅಡಿಯಲ್ಲಿ 2014ರಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪ್ರಧಾನ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು.

ಪ್ರಧಾನ ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಇದೀಗ ರದ್ದುಗೊಳಿಸಿರುವ ವಿಭಾಗೀಯ ನ್ಯಾಯಪೀಠ, ಅರ್ಜಿದಾರರ ಮನವಿಯನ್ನು ಭಾಗಶಃ ಪುರಸ್ಕರಿಸಿದೆ. ‘ಪತ್ನಿ ಮತ್ತೊಂದು ಮದುವೆಯಾಗುವ ತನಕ ಪ್ರತಿ ತಿಂಗಳೂ ₹ 8 ಸಾವಿರ ನೀಡಬೇಕು’ ಎಂದು ಪತಿಗೆ ಆದೇಶಿಸಿ ವಿಚ್ಛೇದನ ಮಂಜೂರು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.