ಬೆಳಗಾವಿ:ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಸುವರ್ಣಸೌಧದ ಪ್ರವೇಶ ದ್ವಾರದ ಮೆಟ್ಟಿಲುಗಳ ಮುಂದೆ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಕಾಡುಗಳ್ಳ ವೀರಪ್ಪನ್ ಹೋಲುವ ಚಿತ್ರದ ಮಾದರಿಯಲ್ಲೇ ಮಲ್ಲಿಕಾರ್ಜುನ್ ಅವರ ಭಾವಚಿತ್ರದ ಫಲಕಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆ ಅನುಮತಿ ಪಡೆಯದೆ ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, 'ವನ್ಯಜೀವಿಗಳನ್ನು ಹತ್ಯೆ ಮಾಡಿರುವ ಮಲ್ಲಿಕಾರ್ಜುನ್ ಅವರನ್ನು ತಕ್ಷಣವೇ ಬಂಧಿಸಬೇಕು'ಎಂದು ಘೋಷಣೆಗಳನ್ನು ಹಾಕಿದರು.
'ಮಲ್ಲಿಕಾರ್ಜನ್ ಅವರ ಮಾಲೀಕತ್ವದ ದಾವಣಗೆರೆಯ ಕಲ್ಲೇಶ್ವರ ಮಿಲ್ ಹಿಂಭಾಗದ ಫಾರ್ಮ್ ಹೌಸ್‌ನಲ್ಲಿ ವನ್ಯಜೀವಿಗಳು ಪತ್ತೆಯಾಗಿದ್ದು, ತಕ್ಷಣವೇ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಬೇಕು'ಎಂದು ಒತ್ತಾಯಿಸಿದರು.
ವನ್ಯ ಜೀವಿಗಳನ್ನು ಬೇಟೆಯಾಡಿರುವ ಮಲ್ಲಿಕಾರ್ಜುನ್ ಅವರನ್ನು ಇದುವರೆಗೂ ಬಂಧಿಸದಿರುವುದು ಖಂಡನೀಯ. ಅವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ಡಿಎಫ್ಒ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಅಧಿಕಾರಿಗಳು ಮನವೊಲಿಸಿ ಕಾರ್ಯಕರ್ತರನ್ನು ವಾಪಸ್ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.