ಬೆಂಗಳೂರು: ‘ಕೇಂದ್ರೀಯ ವನ್ಯಜೀವಿ ಮಂಡಳಿಯು ತನ್ನ ಮುಂದಿನ ಸಭೆಯಲ್ಲಿ ಕಳಸಾ–ಬಂಡೂರಿ ನಾಲಾ ಯೋಜನೆಗೆ ಅನುಮೋದನೆ ನೀಡುವ ವಿಶ್ವಾಸವಿದೆ’ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ವನ್ಯಜೀವಿ ಮಂಡಳಿಯು ಬುಧವಾರ ಸಭೆ ನಡೆಸಿತ್ತು. ಆ ಸಭೆಯಲ್ಲಿ ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿ ಕಳಸಾ–ಬಂಡೂರಿ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ಯೋಜನೆ ಕುರಿತು ಆಶಾದಾಯಕ ಚರ್ಚೆ ನಡೆದಿದೆ’ ಎಂದು ಅವರು ತಿಳಿಸಿದರು.
‘ಮಹದಾಯಿ ನದಿಯ ಉಪನದಿಗಳಾದ ಕಳಸಾ–ಬಂಡೂರಿಯ 3.9 ಟಿಎಂಸಿಯಷ್ಟು ನೀರನ್ನು ನಾಲಾ ಮೂಲಕ ಮಲಪ್ರಭಾ ನದಿಗೆ ತಿರುಗಿಸಲು ಮಹದಾಯಿ ನ್ಯಾಯಮಂಡಳಿ ಅನುಮೋದನೆ ನೀಡಿದೆ. ಆದರೆ ಇದಕ್ಕೆ ಪರಿಸರ ಅನುಮತಿಯ ಅಗತ್ಯ ಇದೆ ಎಂಬುದನ್ನು ರಾಜ್ಯ ಅಧಿಕಾರಿಗಳು ವನ್ಯಜೀವಿ ಮಂಡಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ’ ಎಂದರು.
‘ಈ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರೀಯ ಜಲ ಆಯೋಗ 2022ರಲ್ಲಿ ನೀಡಿರುವ ಅನುಮತಿ, ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಅಧಿಕಾರಿಗಳು ಮಂಡಳಿ ಸಭೆಯಲ್ಲಿ ಮಂಡಿಸಿದ್ದಾರೆ. ಈ ಎಲ್ಲ ವಿವರಗಳನ್ನು ಒಳಗೊಂಡಂತೆ ಇಲಾಖೆಯಿಂದಲೂ ಮಂಡಳಿಗೆ ಪತ್ರ ಬರೆಯುತ್ತೇವೆ. ಮಂಡಳಿಯು ತನ್ನ ಮುಂದಿನ ಸಭೆಯಲ್ಲಿ ಅನುಮತಿ ನೀಡುವ ವಿಶ್ವಾಸವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.