ಬೆಂಗಳೂರು: ‘ವನ್ಯಜೀವಿಗಳು ನೈಸರ್ಗಿಕವಾಗಿ ಗಾಯಗೊಂಡಾಗ, ಸಹಜವಾಗಿಯೇ ಗುಣಮುಖವಾಗುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಅಂತಹ ಸಂದರ್ಭದಲ್ಲಿ ಅವುಗಳಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಬೇಕು’ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.
‘ವನ್ಯಜೀವಿಗಳು ನೈಸರ್ಗಿಕವಾಗಿ ಗಾಯಗೊಳ್ಳುವುದು ಒಂದು ಸಹಜ ಪ್ರಕ್ರಿಯೆ. ಅವು ಸಹಜವಾಗಿಯೇ ಗುಣಮುಖವಾಗುತ್ತವೆ ಇಲ್ಲವೇ ಮೃತಪಡುತ್ತವೆ. ಅರಣ್ಯದಲ್ಲಿ ವನ್ಯಜೀವಿಗಳ ಸಮತೋಲನ ಕಾಯ್ದುಕೊಳ್ಳುವಲ್ಲಿ ಈ ಪ್ರಕ್ರಿಯೆ ಮಹತ್ವದ ಪಾತ್ರ ವಹಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಚಿಕಿತ್ಸೆ ನೀಡುತ್ತಾ ಹೋದರೆ, ಆ ಸಮತೋಲನ ತಪ್ಪುತ್ತದೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
‘ಕಾಡು ಪ್ರಾಣಿಗಳ ಸಂಖ್ಯೆ ಸಮತೋಲನ ತಪ್ಪುವ ಕಾರಣಕ್ಕೆ, ಅವು ಆಹಾರ ಅರಸಿ ಜನವಸತಿ ಪ್ರದೇಶಗಳತ್ತ ಬರುತ್ತವೆ. ಅದು ವನ್ಯಜೀವಿ–ಮನುಷ್ಯ ಸಂಘರ್ಷಕ್ಕೆ ಕಾರಣವಾಗುತ್ತದೆ. ಜತೆಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸಿಬ್ಬಂದಿಯ ಪ್ರಾಣಹಾನಿಯಾಗುವ ಅಪಾಯವೂ ಇರುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
2023ರಲ್ಲಿ ಹಾಸನದಲ್ಲಿ ಕಾಡಾನೆಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅರಣ್ಯ ವೀಕ್ಷಕ ವೆಂಕಟೇಶ ಅವರು ಕಾಡಾನೆ ದಾಳಿಗೆ ಬಲಿಯಾದ ಘಟನೆಯನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಹುಲಿ ಯೋಜನಾ ಪ್ರದೇಶಗಳು, ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿಧಾಮಗಳಲ್ಲಿ ನೈಸರ್ಗಿಕವಾಗಿ ಗಾಯಗೊಂಡ ಕಾಡುಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಪರಿಪಾಟ ಈಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಇದನ್ನು ತಪ್ಪಿಸಬೇಕಿದೆ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ತಗೆದುಕೊಳ್ಳಿ’ ಎಂದು ಅರಣ್ಯ ಸಚಿವರನ್ನು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.