ADVERTISEMENT

ಹೈಕಮಾಂಡ್‌ ಸೂಚಿಸಿದ ಕ್ಷೇತ್ರದಲ್ಲೇ ಸ್ಪರ್ಧೆ: ಸಿದ್ದರಾಮಯ್ಯ ಸ್ಪಷ್ಟನೆ

ಕೋಲಾರದಲ್ಲಿ ಸ್ಪರ್ಧಿಸುವ ಕುರಿತು ಇನ್ನೂ ನಿರ್ಧರಿಸಲ್ಲ –ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 18:40 IST
Last Updated 27 ನವೆಂಬರ್ 2022, 18:40 IST
ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಸಂಗೊಳ್ಳಿ ರಾಯಣ್ಣ, ಕನಕದಾಸ ಮತ್ತು ಕಾಳಿದಾಸರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ವಕೀಲ ಕಾಂತರಾಜು, ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಕಾಂಗ್ರೆಸ್‌ ಮುಖಂಡ ಎಚ್‌.ಎಂ.ರೇವಣ್ಣ ಇದ್ದರು –ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಸಂಗೊಳ್ಳಿ ರಾಯಣ್ಣ, ಕನಕದಾಸ ಮತ್ತು ಕಾಳಿದಾಸರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ವಕೀಲ ಕಾಂತರಾಜು, ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಕಾಂಗ್ರೆಸ್‌ ಮುಖಂಡ ಎಚ್‌.ಎಂ.ರೇವಣ್ಣ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೋಲಾರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವ ಕುರಿತು ಇನ್ನೂ ನಿರ್ಧರಿಸಿಲ್ಲ. ಪಕ್ಷದ ಹೈಕಮಾಂಡ್‌ ಸೂಚಿಸಿದ ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತೇನೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಡಿ.ದೇವರಾಜ ಅರಸು ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಎಂದು ನನ್ನನ್ನು ಬೆಂಬಲಿಸಬೇಡಿ. ಸಾಮರ್ಥ್ಯ ಇದೆಯೊ? ಇಲ್ಲವೊ? ಎಂಬುದನ್ನು ನೋಡಿ ಬೆಂಬಲಿಸಿ’ ಎಂದರು.

‘ಕೋಲಾರ ಕ್ಷೇತ್ರದಲ್ಲಿ ವರ್ತೂರು ಪ್ರಕಾಶ್‌ ಎಲ್ಲಿದ್ದ ಹೇಳಿ? ಆತನನ್ನು ಕರೆದುಕೊಂಡು ಶಾಸಕನಾಗಿ ಮಾಡಿದೆ. ನಮ್ಮ ಸಮುದಾಯದವರು ಯಾವುದೇ ಪಕ್ಷದಲ್ಲಿದ್ದರೂ ಸರಿ ಎನ್ನುವುದನ್ನು ಬಿಡಿ. ಯೋಚಿಸಿ ಬೆಂಬಲಿಸಿ. ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗ್ತಾರೆ. ಆಗಲೂ ನಮ್ಮವರು ಎಂದು ಮತ ಹಾಕ್ತೀರಾ?’ ಎಂದು ಪ್ರಶ್ನಿಸಿದರು.

ADVERTISEMENT

ಜಾತಿವಾದಿಯಲ್ಲ: ‘ನಾನು ಮೇಲ್ಜಾತಿಗಳ ವಿರೋಧಿ ಎಂದು ಕಳೆದ ಚುನಾವಣೆ ವೇಳೆ ಕೆಲವರು ಅಪಪ್ರಚಾರ ನಡೆಸಿದರು. ನಾನು ಯಾವ ವರ್ಗಗಳ ಪರ ಕೆಲಸ ಮಾಡಿದ್ದೆನೋ ಅವರ ಬೆಂಬಲವೂ ಸಿಗಲಿಲ್ಲ. ನಾನು ಯಾವ ಜಾತಿಗಳ ವಿರೋಧಿಯೂ ಅಲ್ಲ. ಮನುಷ್ಯರ ಪರವಾಗಿ ಇರುವವನು’ ಎಂದರು.

‘ನಾನು ಕೂಡ ಅಸ್ಪೃಶ್ಯತೆ ಅನುಭವಿಸಿದ್ದೇನೆ. ಡಾ.ಬಿ.ಆರ್‌.ಅಂಬೇಡ್ಕರ್‌ರವರು ನೀಡಿದ ಸಂವಿಧಾನ ಬಲದಿಂದ ಸಿ.ಎಂ ಆದೆ. ಯಾವತ್ತೂ ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಈಗ ಸಂವಿಧಾನ ಕೆಟ್ಟವರ ಕೈಗೆ ಸಿಲುಕಿದೆ. ಸಂವಿಧಾನವನ್ನೇ ಬುಡಮೇಲು ಮಾಡು ವುದಾಗಿ ಹೇಳುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಮುಖಂಡ ಎಚ್‌.ಎಂ.ರೇವಣ್ಣ ಅವರು, ‘ಸಿದ್ದರಾಮಯ್ಯ ಅವರು ಸಮುದಾಯಕ್ಕೆ ಸ್ವಾಭಿಮಾನ, ಧೈರ್ಯ ತಂದುಕೊಟ್ಟಿದ್ದಾರೆ. ಅವರು ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆಗೇರುವ ಸಾಧ್ಯತೆ ಇದೆ’ ಎಂದು ಹೇಳಿದರು.

ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ವಕೀಲ ಕಾಂತರಾಜು, ಕುರುಬರ ಸಂಘದ ಮಾಜಿ ಅಧ್ಯಕ್ಷ ಲಿಂಗಪ್ಪ ಎನ್‌., ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ರಾಮಯ್ಯ ಇದ್ದರು.

ನಾನು ಇಲ್ಲದಿದ್ದರೆ ಕುರುಬರ ಸಂಘ ಉಳಿಯುತ್ತಿರಲಿಲ್ಲ

‘ನಾನು ಇಲ್ಲದಿದ್ದರೆ ಕುರುಬರ ಸಂಘ ಉಳಿಯುತ್ತಿರಲಿಲ್ಲ. ಯಾರೋ ಮಾರಿಕೊಂಡು ತಿಂದುಬಿಡುತ್ತಿದ್ದರು. ಈ ವಿಚಾರದಲ್ಲಿ ನನಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದರು’ ಎಂದು ಸಿದ್ದರಾಮಯ್ಯ ಹೇಳಿದರು.

‘ಕನಕ ಗುರುಪೀಠ ಮಾಡಿದ್ದು ನಾನು. ಗುರುಪೀಠ ರಚನೆ ಕುರಿತ ಮೊದಲ ಸಭೆಗೆ ಈಶ್ವರಪ್ಪ ಬಂದಿದ್ದ. ಪೀಠ ಸ್ಥಾಪನೆಗೆ ಹಣ ಕೇಳಿದರು. ಎರಡನೇ ಸಭೆಗೆ ಆ ಗಿರಾಕಿ ಬರಲೇ ಇಲ್ಲ. ಆದರೂ, ಅವ ನಮ್ಮವ ಅಂತ ಜೈಕಾರ ಹಾಕುತ್ತೀರಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.