ADVERTISEMENT

ಬೆಳಗಾವಿ ಅಧಿವೇಶನ | ಹುಕ್ಕಾ ಬಾರ್‌ ನಿಯಂತ್ರಣಕ್ಕೆ ಕಾನೂನು: ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 15:50 IST
Last Updated 12 ಡಿಸೆಂಬರ್ 2023, 15:50 IST
<div class="paragraphs"><p>ಗೃಹ ಸಚಿವ ಜಿ. ಪರಮೇಶ್ವರ</p></div>

ಗೃಹ ಸಚಿವ ಜಿ. ಪರಮೇಶ್ವರ

   

ವಿಧಾನಸಭೆ: ರಾಜ್ಯದಲ್ಲಿ ಹುಕ್ಕಾ ಬಾರ್‌ಗಳ ನಿಯಂತ್ರಣಕ್ಕೆ ಹೊಸ ಕಾನೂನು ರಚಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಬಿಜೆಪಿಯ ಸಿ.ಕೆ. ರಾಮಮೂರ್ತಿ ಅವರ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಸಚಿವರು, ‘ಹುಕ್ಕಾ ಬಾರ್‌ಗಳ ಆರಂಭಕ್ಕೆ ಬಿಬಿಎಂಪಿಯಿಂದ ಯಾವುದೇ ರೀತಿಯ ಪರವಾನಗಿ ನೀಡುತ್ತಿಲ್ಲ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದು ಹುಕ್ಕಾ ಬಾರ್‌ಗಳನ್ನು ನಡೆಸಲಾಗುತ್ತಿದೆ. ಈಗ ಇರುವ ಕಾನೂನುಗಳಲ್ಲಿ ಅವುಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಆದ್ದರಿಂದ ಹೊಸ ಕಾನೂನು ತರಲು ಯೋಚಿಸಲಾಗಿದೆ’ ಎಂದರು.

ADVERTISEMENT

ಹುಕ್ಕಾ ಬಾರ್‌ಗಳ ನಿಯಂತ್ರಣಕ್ಕೆ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಹೇಳಿದೆ. ಈಗ ಹೊಸ ಕಾನೂನು ರೂಪಿಸದಿದ್ದರೆ ಬಿಗಿ ಕ್ರಮ ಕೈಗೊಳ್ಳವುದು ಅಸಾಧ್ಯ ಎಂದು ತಿಳಿಸಿದರು.

ಕೋರಮಂಗಲದ ಹುಕ್ಕಾ ಬಾರ್‌ ಒಂದರಲ್ಲಿ ಅಕ್ಟೋಬರ್‌ 19ರಂದು ಅಗ್ನಿ ಅವಘಡ ಸಂಭವಿಸಿತ್ತು. ಅಲ್ಲಿ ಎಲ್‌ಪಿಜಿ ಸಿಲಿಂಡರ್‌ ಸಂಗ್ರಹ ಸೇರಿದಂತೆ ಕಾನೂನು ಉಲ್ಲಂಘನೆ ಕಂಡುಬಂದಿತ್ತು. ಈ ರೀತಿಯ ಅವಘಡಗಳನ್ನು ತಪ್ಪಿಸಲು ನಿಯಂತ್ರಣ ಕ್ರಮ ಅಗತ್ಯ ಎಂದರು.

ಬಿಜೆಪಿಯ ಎಸ್‌. ಸುರೇಶ್ ಕುಮಾರ್‌ ಮಾತನಾಡಿ, ‘ಹುಕ್ಕಾ ಸೇದುವುದು ಸಿಗರೇಟು ಸೇದುವುದಕ್ಕಿಂತ 200 ಪಟ್ಟು ಹೆಚ್ಚು ಹಾನಿಕಾರಕ ಎಂಬುದು ಅಧ್ಯಯನಗಳಲ್ಲಿ ಸಾಬೀತಾಗಿದೆ. ಪಂಜಾಬ್‌, ರಾಜಸ್ಥಾನ, ತಮಿಳುನಾಡು ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಹುಕ್ಕಾ ಸೇವನೆ ನಿಷೇಧಿಸಲಾಗಿದೆ. ರಾಜ್ಯದಲ್ಲೂ ಅಂತಹ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರೂ ಹುಕ್ಕಾ ಬಾರ್‌ ನಿಷೇಧದ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.