ಬೆಂಗಳೂರು: ಬೇರೆ ಬೇರೆ ಇಲಾಖೆಗಳಲ್ಲಿ ವಿಲೀನಗೊಂಡಿರುವ ವೃತ್ತಿ ಶಿಕ್ಷಣ ಇಲಾಖೆಯ ನೌಕರರ ಕಾಯಂ ಪೂರ್ವ ಸೇವೆಯನ್ನು ಪರಿಗಣಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಣಕಾಸು ಇಲಾಖೆ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಭರವಸೆ ನೀಡಿದರು.
‘ವೃತ್ತಿ ಶಿಕ್ಷಣ ಇಲಾಖೆಯಲ್ಲಿ 10ಕ್ಕೂ ಹೆಚ್ಚು ವರ್ಷಗಳು ಸೇವೆ ಸಲ್ಲಿಸಿರುವ ಶಿಕ್ಷಕರನ್ನು ನ್ಯಾಯಾಲಯದ ಆದೇಶದ ಮೇರೆಗೆ ಕಾಯಂಗೊಳಿಸಲಾಗಿತ್ತು. ವೃತ್ತಿ ಆಧಾರಿತ ಕೋರ್ಸ್‌ಗಳಲ್ಲಿ 5 ವರ್ಷಗಳು ಸೇವೆ ಸಲ್ಲಿಸಿದ್ದ ಅರೆಕಾಲಿಕ ನೌಕರರನ್ನು 2011ರಲ್ಲಿ ವಿಶೇಷ ಕಾಯ್ದೆ ಜಾರಿಗೊಳಿಸುವ ಮೂಲಕ ಕಾಯಂಗೊಳಿಸಲಾಯಿತು. ಅವರ ಒಟ್ಟು ಸೇವಾವಧಿ, ಜ್ಯೇಷ್ಠತೆ, ರಜೆ, ಪಿಂಚಣಿಗೆ ಸಂಬಂಧಿಸಿದ ಅಂಶಗಳನ್ನು ಈ ಕಾಯ್ದೆಯಲ್ಲಿ ಪರಿಗಣಿಸಿರಲಿಲ್ಲ. ಹಾಗಾಗಿ ಅವರು ಈಗ ಪಿಂಚಣಿಯಿಂದ ವಂಚಿತರಾಗಿದ್ದಾರೆ’ ಎಂದು ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.
‘ವೃತ್ತಿ ಆಧಾರಿತ ಕೋರ್ಸುಗಳ ಅರೆಕಾಲಿಕ ನೌಕರರ ಸೇವೆಯ ವಿಲೀನವು ಒಂದು ಸಲದ ಕ್ರಮದ ರೂಪದಲ್ಲಿ ಜಾರಿಯಾಗಿತ್ತು. ಈ ಸಲುವಾಗಿ ಜಾರಿಗೊಳಿಸಿದ ವಿಶೇಷ ಕಾಯ್ದೆಯನ್ನು ತಿದ್ದುಪಡಿ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಹಾಗಾಗಿ ಈ ನೌಕರರಿಗೆ ಪಿಂಚಣಿ ನೀಡುವ ಉದ್ದೇಶದಿಂದ ಹಿಂದಿನ ಅರ್ಹತೆಯನ್ನು ಪರಿಗಣಿಸಲು ಅವಕಾಶವಿಲ್ಲ’ ಎಂದು ಸಚಿವ ನಾಗೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.