ADVERTISEMENT

ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಸಾಧ್ಯವೇ ಇಲ್ಲ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 8:28 IST
Last Updated 20 ಆಗಸ್ಟ್ 2024, 8:28 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಂಗಳೂರು: ‘ಡಿ.ಕೆ. ಶಿವಕುಮಾರ್‌ ಅವರು ನಮ್ಮ ಪಕ್ಷದ ಮುಖ್ಯಸ್ಥರು. ಚಿಕ್ಕೋಡಿ, ಬೆಳಗಾವಿ, ಬೆಳಗಾವಿ ಗ್ರಾಮಾಂತರ ಜಿಲ್ಲೆಗೆ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಬೇಕಿದೆ. ಹೊಸ ಅಧ್ಯಕ್ಷರ ಪಟ್ಟಿ ಕಳುಹಿಸುವಂತೆ ಅವರು ಹೇಳಿದ್ದರು. ಆ ಬಗ್ಗೆ ಚರ್ಚಿಸಲು ಸೋಮವಾರ ಸಂಜೆ ಅವರನ್ನು ಭೇಟಿ ಮಾಡಿದ್ದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. 

ಡಿ.ಕೆ. ಶಿವಕುಮಾರ್‌ ಜೊತೆ ರಹಸ್ಯವಾಗಿ ಮಾತುಕತೆ ನಡೆಸಿದ ಬಗ್ಗೆ ಸುದ್ದಿಗಾರರ ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

‘ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರ ಬದಲಾವಣೆ ಸಾಧ್ಯವೇ ಇಲ್ಲ. ನೂರಕ್ಕೆ ನೂರು ಅವರೇ ಮುಂದುವರೆಯುತ್ತಾರೆ’ ಎಂದೂ ಹೇಳಿದರು.

ADVERTISEMENT

‘ಸಿದ್ದರಾಮಯ್ಯ ಅವರನ್ನು ಕುಗ್ಗಿಸುವ ಕೆಲಸವನ್ನು ಬಿಜೆಪಿ –ಜೆಡಿಎಸ್‌ನವರು ಮಾಡುತ್ತಿದ್ದಾರೆ.  ಸಿದ್ದರಾಮಯ್ಯ ಅವರನ್ನು ಕುಗ್ಗಿಸಿದರೆ ಸರ್ಕಾರವನ್ನು ಬೀಳಿಸಬಹುದೆಂಬ ಲೆಕ್ಕಾಚಾರದಲ್ಲಿ ಹೀಗೆ ಮಾಡುತ್ತಿದ್ದಾರೆ. ನಮ್ಮ ಪಕ್ಷ  ಮುಖ್ಯಮಂತ್ರಿ ಬೆನ್ನಿಗೆ ಗಟ್ಟಿಯಾಗಿ ನಿಂತಿದೆ. ಹೈಕಮಾಂಡ್‌ ಕೂಡಾ ಅವರ ಜೊತೆಯಿದೆ. ಹೀಗಾಗಿ ಅವರನ್ನು ಬದಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು. 

‘ಸಿದ್ದರಾಮಯ್ಯ ಅವರ ಮೇಲಿನ ಯಾವುದೇ ಆರೋಪ ಸಾಬೀತಾಗಿಲ್ಲ. ಬೇಕಾದರೆ ತನಿಖೆ ಆಗಲಿ. ಆದರೆ, ಸಿದ್ದರಾಮಯ್ಯ ಅವರನ್ನು ಬಿಜೆಪಿ ಗುರಿ ಮಾಡಿದೆ. ಬಿಜೆಪಿಯವರ ವರ್ತನೆ ನೋಡಿದರೆ ಇದು ಗೊತ್ತಾಗುತ್ತದೆ. ಮುಡಾ ವಿಷಯದಲ್ಲಿ ನಾವು ಕಾನೂನು ಹಾಗೂ ರಾಜಕೀಯ ಹೋರಾಟ ‌ಮಾಡುತ್ತೇವೆ’ ಎಂದರು.

‘ಸಿದ್ದರಾಮಯ್ಯ ಅವರಿಗೆ ತೊಂದರೆಯಾದರೆ ತೆಲಂಗಾಣ ಸರ್ಕಾರವೂ ಹೋಗಲಿದೆ. ಅಲ್ಲಿಯ ಸರ್ಕಾರವನ್ನು ತೆಗೆಯುವ ಪ್ರಯತ್ನ ನಡೆಯಲಿದೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಉಳಿಸಿಕೊಳ್ಳಲೇಬೇಕು. ಸರ್ಕಾರ ಬೀಳಿಸಲು ಬಿಜೆಪಿಗೆ ಅವಕಾಶ ನೀಡಬಾರದು. ಹೀಗಾಗಿ ಸಿದ್ದರಾಮಯ್ಯ ಅವರು ಬೆನ್ನಿಗೆ ಹೈಕಮಾಂಡ್‌ ಇನ್ನಷ್ಟು ಗಟ್ಟಿಯಾಗಿ ನಿಲ್ಲಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.