ADVERTISEMENT

ಮನೆ-ಮನೆಗೆ ಗಾಂಧಿ ಸಿದ್ಧಾಂತ ತಲುಪಿಸುತ್ತೇವೆ: ಎಚ್.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 6:04 IST
Last Updated 5 ನವೆಂಬರ್ 2024, 6:04 IST
ಎಚ್.ಕೆ.ಪಾಟೀಲ
ಎಚ್.ಕೆ.ಪಾಟೀಲ   

ಬೆಳಗಾವಿ: 'ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಗರದಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಮೂಲಕ ಗಾಂಧಿ ಅವರ ತತ್ವಗಳನ್ನು ಇನ್ನಷ್ಟು ಪ್ರಚುರಪಡಿಸುತ್ತೇವೆ. ಮನೆ-ಮನೆಗೆ ಗಾಂಧೀಜಿ ಸಿದ್ಧಾಂತ ತಲುಪಿಸುತ್ತೇವೆ' ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಗಾಂಧಿವಾದಿಗಳು ಹಾಗೂ ಹಿರಿಯರ ಜತೆ ಸಮಗ್ರವಾಗಿ ಚರ್ಚಿಸಿ, ಅಧಿವೇಶನದ ಇತಿಹಾಸ ಮರು ಸೃಷ್ಟಿಸುತ್ತೇವೆ' ಎಂದರು.

'ಅಧಿವೇಶನಕ್ಕೆ ಸಾಕ್ಷಿಯಾದ ಸ್ಥಳಗಳಿಗೆ ಇಂದು ಭೇಟಿ ನೀಡಿ, ವಿಸ್ತೃತವಾಗಿ ಚರ್ಚಿಸಿದ ನಂತರ, ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುತ್ತೇವೆ' ಎಂದು ತಿಳಿಸಿದರು.

ADVERTISEMENT

'ಅಕ್ಟೋಬರ್ 2ರಿಂದ ಒಂದು ವರ್ಷದವರೆಗೆ ಶತಮಾನೋತ್ಸವ ವರ್ಷ ಆಚರಿಸಲಾಗುವುದು. ಬೆಳಗಾವಿಯಲ್ಲೇ ವಿಧಾನಮಂಡಲ ಜಂಟಿ ಅಧಿವೇಶನ ನಡೆಸಲು ಹಾಗೂ ಆ ಕಾರ್ಯಕ್ರಮಕ್ಕೆ ಅಮೆರಿಕದ‌ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಕರೆಯಿಸಲು ಉದ್ಧೇಶಿಸಲಾಗಿದೆ. ಈ ಸಂಬಂಧ ಒಬಾಮಾ ಅವರಿಗೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ' ಎಂದರು.

'ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗೆ ರಾಜ್ಯ ಸರ್ಕಾರ ₹25 ಕೋಟಿ ರೂಪಾಯಿ ನೀಡಲಿದೆ. ಅಗತ್ಯಬಿದ್ದರೆ ಹೆಚ್ಚುವರಿ ಅನುದಾನವನ್ನೂ ನೀಡಲಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಮಿತಿ ಗೌರವ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ, ಎನ್.ಆರ್.ವಿಶುಕುಮಾರ್, ಶಾಸಕ ಆಸಿಫ್ ಸೇಠ್ ಇದ್ದರು.

ಇಲ್ಲಿಂದ ಬೆಳಗಾವಿಯ ವೀರಸೌಧ, ತಾಲ್ಲೂಕಿನ ಹುದಲಿ ಮತ್ತಿತರ ಸ್ಥಳಗಳಿಗೆ ಈ ಸಮಿತಿ ಭೇಟಿ‌ ಕೊಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.