ADVERTISEMENT

ಶೀಘ್ರ ಲಿಪಿಕಾರರ ತರಬೇತಿ ಸಂಸ್ಥೆ ಆರಂಭ: ಬಿ.ಎಸ್.ಯಡಿಯೂರಪ್ಪ ಭರವಸೆ

72 ನ್ಯಾಯಾಧೀಶರಿಗೆ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 17:22 IST
Last Updated 4 ಜನವರಿ 2020, 17:22 IST
ಪ್ರಶಸ್ತಿ ಸ್ವೀಕರಿಸಿದ ನ್ಯಾಯಾಧೀಶರಾದ (ಎಡದಿಂದ) ನಿರ್ಮಲಾ ಎಂ.ಸಿ (ಉಡುಪಿ), ಮಹಾಂತೇಶ್ ಭೂಸಗೋಳ (ಉಡುಪಿ), ಮೊಹಮ್ಮದ್ ರೋಷನ್ ಷಾ (ಚಾಮರಾಜನಗರ), ಮಾಲಾ ಸಿ. (ಚಿಕ್ಕಬಳ್ಳಾಪುರ), ಭರತ ಯೋಗೀಶ್ ಕರಗುದರಿ (ಪಾವಗಡ), ರಹೀಮ್ ಅಲಿ ಮೌಲಾಸಾಬ್ ನದಾಫ್ (ಬೆಂಗಳೂರು) ಮತ್ತು ಟಿ.ಕೆ ಪ್ರಿಯಾಂಕ (ಹಾಸನ) ಪರಸ್ಪರ ಅಭಿನಂದಿಸಿದರು -ಪ್ರಜಾವಾಣಿ ಚಿತ್ರ
ಪ್ರಶಸ್ತಿ ಸ್ವೀಕರಿಸಿದ ನ್ಯಾಯಾಧೀಶರಾದ (ಎಡದಿಂದ) ನಿರ್ಮಲಾ ಎಂ.ಸಿ (ಉಡುಪಿ), ಮಹಾಂತೇಶ್ ಭೂಸಗೋಳ (ಉಡುಪಿ), ಮೊಹಮ್ಮದ್ ರೋಷನ್ ಷಾ (ಚಾಮರಾಜನಗರ), ಮಾಲಾ ಸಿ. (ಚಿಕ್ಕಬಳ್ಳಾಪುರ), ಭರತ ಯೋಗೀಶ್ ಕರಗುದರಿ (ಪಾವಗಡ), ರಹೀಮ್ ಅಲಿ ಮೌಲಾಸಾಬ್ ನದಾಫ್ (ಬೆಂಗಳೂರು) ಮತ್ತು ಟಿ.ಕೆ ಪ್ರಿಯಾಂಕ (ಹಾಸನ) ಪರಸ್ಪರ ಅಭಿನಂದಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೋರ್ಟ್‌ಗಳಲ್ಲಿಶೀಘ್ರ ಲಿಪಿಕಾರರ ಕೊರತೆ ನೀಗಿಸಲು ನ್ಯಾಯಾಂಗ ಅಕಾಡೆಮಿಯ ಸಹಯೋಗದೊಂದಿಗೆ ಶೀಘ್ರ ಲಿಪಿಕಾರರ ತರಬೇತಿ ಸಂಸ್ಥೆ ಆರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶನಿವಾರ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ, ವಾದ ಮಂಡಿಸಿದ ನ್ಯಾಯಾಧೀಶರು ಹಾಗೂ ವಕೀಲರಿಗೆ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿಯನ್ನು ಪ್ರದಾನ ಮಾಡಿ, ಮಾತನಾಡಿದರು.

‘ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಎಷ್ಟು ಮುಖ್ಯವೋ ಹೈಕೋರ್ಟ್‌ನಲ್ಲೂ ಅಷ್ಟೇ ಪ್ರಧಾನವಾಗಬೇಕು. ಎಲ್ಲ ನ್ಯಾಯಾಧೀಶರೂ ಕನ್ನಡವನ್ನು ಕಲಿತು, ಈ ಭಾಷೆಯಲ್ಲಿಯೇ ಆದೇಶ ಮತ್ತು ತೀರ್ಪು ನೀಡುವಂತಾಗಬೇಕು. ಆಗ ಸಾಮಾನ್ಯ ಕಕ್ಷಿದಾರರೂ ತಮ್ಮ ಪ್ರಕರಣಗಳ ತೀರ್ಪು ಅರ್ಥೈಸಿಕೊಳ್ಳುವುದು ಸುಲಭವಾಗುತ್ತದೆ’ ಎಂದು ಹೇಳಿದರು.

ADVERTISEMENT

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ನಮ್ಮ ಧಾರ್ಮಿಕ ಕ್ರಿಯೆಗಳೂ ನಮಗೆ ಅರ್ಥವಾಗುವ ಭಾಷೆಯಲ್ಲಿರಬೇಕು. ದೇವರ ಪ್ರಾರ್ಥನೆ ಕೂಡಾ ಸುಲಭ ಸಂವಹನವಾದಾಗ ಅದೊಂದು ಅರ್ಥಪೂರ್ಣ ಕ್ರಿಯೆ ಎನಿಸುತ್ತದೆ. ಇದಕ್ಕೆ ಬಸವಣ್ಣನವರ ವಚನಗಳೇ ಸಾಕ್ಷಿ.ಕೋರ್ಟ್‌ಗಳಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಗೊತ್ತಾಗಲಾರದ ಪರಿಸ್ಥಿತಿಯಿದೆ. ಒಂದಕ್ಕೊಂದು ಸಂಬಂಧವಿಲ್ಲದ ನಡವಳಿಕೆ ಎಂದು ಕಕ್ಷಿದಾರ ಭಾವಿಸುವ ಸ್ಥಿತಿಯಿದೆ. ಇದು ದುರ್ದೈವದ ಸಂಗತಿ’ ಎಂದರು.

‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಬಾರದ ಅಧಿಕಾರಿಗಳೇ ಇರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಪಿತ್ರಾರ್ಜಿತ ಆಸ್ತಿ, ಮಾನ ಮರ್ಯಾದೆಗಳನ್ನು ಅಡವಿಟ್ಟಿದ್ದೇವೆ ಎಂಬುದು ಕೋರ್ಟ್‌ಗಳ ಡಿಕ್ರಿ ಆಗುವವರೆಗೆ ಅವರಿಗೆ ಗೊತ್ತಾಗಲಾರದಂಥ ದುಃಸ್ಥಿತಿ ಇದೆ.ಕನಿಷ್ಠ ಪಕ್ಷ ಹಳ್ಳಿಗಳಲ್ಲಾದರೂ ಬ್ಯಾಂಕ್‌ಗಳಲ್ಲಿ ಕನ್ನಡ ಬರುವ ಅಧಿಕಾರಿಗಳನ್ನು ನೇಮಿಸಬೇಕು. ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಬೇಕು’ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ 2017-18ನೇ ಸಾಲಿನಲ್ಲಿ 35 ನ್ಯಾಯಾಧೀಶರು, 10 ಸರ್ಕಾರಿ ಅಭಿಯೋಜಕರು, 20 ವಕೀಲರಿಗೆ ಹಾಗೂ 2018-19ನೇ ಸಾಲಿನಲ್ಲಿ 37 ನ್ಯಾಯಾಧೀಶರಿಗೆ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕಾರ್ಯದರ್ಶಿ ಕೆ. ಮುರಳೀಧರ ಉಪಸ್ಥಿತರಿದ್ದರು.

‘ಪ್ರಾದೇಶಿಕ ಭಾಷೆಗಳಿಗೆ ಮಾರಕ’

‘ಪ್ರಾಥಮಿಕ ಶಿಕ್ಷಣ ಭಾಷಾ ನೀತಿ ಪಾಲಕರ ವಿವೇಚನೆಗೆ ಬಿಟ್ಟ ಆಯ್ಕೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಮರು ಪರಿಶೀಲನೆಗೆ ಅರ್ಜಿ ಹಾಕಬೇಕಿದೆ. ಈ ಕುರಿತಂತೆ ಸರ್ಕಾರ ಚಿಂತನೆ ನಡೆಸಲಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪು ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಭವಿಷ್ಯದಲ್ಲಿ ಮಾರಕವಾಗಲಿದೆ’ ಎಂದುಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಕಳವಳ ವ್ಯಕ್ತಪಡಿಸಿದರು.

‘ಇಂದು ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳು ವೈದ್ಯರಿಂದ ಪಡೆಯುವ ಔಷಧೋಪಚಾರ, ಸಲಹೆಗಳು ಇಂಗ್ಲಿಷ್‌ನಲ್ಲಿರುವುದು ರೋಗಿಗಳಿಗೆ ಸಮಸ್ಯೆಯಾಗಿದೆ’ ಎಂದರು.

***

ಕನ್ನಡದಲ್ಲಿ ತೀರ್ಪು ನೀಡಲು ಹೈಕೋರ್ಟ್‌ನಲ್ಲಿ ಶೀಘ್ರ ಲಿಪಿಕಾರರ ಕೊರತೆ ಇದೆ. ಶೀಘ್ರ ಲಿಪಿಕಾರರಿಗೆ ತರಬೇತಿ ನೀಡುವ ಖಾಸಗಿ ಸಂಸ್ಥೆಗಳು ಮುಚ್ಚಿಹೋಗಿವೆ. ಶೀಘ್ರ ಲಿಪಿಕಾರರ ತರಬೇತಿ ಕೇಂದ್ರ ಆರಂಭಿಸಬೇಕು
– ಕೆ.ಎನ್. ಫಣೀಂದ್ರ, ಹೈಕೋರ್ಟ್ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.