ರಾಯಚೂರು: 'ಒಳ ಮೀಸಲಾತಿ ವಿಷಯದಲ್ಲಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗದು. ಇದು ಇಡೀ ರಾಜ್ಯ ಸಂಬಂಧಿಸಿದ್ದಾಗಿರುವ ಕಾರಣ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿದ ನಂತರವೇ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
'ಕಾಂತರಾಜು ಆಯೋಗದ ವರದಿಯನ್ನು ಈಗಾಗಲೇ ಸ್ವೀಕರಿಸಲಾಗಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ವರದಿಯಲ್ಲಿ ಸಣ್ಣ ಪುಟ್ಟ ದೋಷಗಳಿದ್ದರೆ ಅದನ್ನು ಸರಿಪಡಿಸುವ ಬಗ್ಗೆಯೂ ಪರಿಶೀಲಿಸಲಾಗುವುದು' ಎಂದು ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.
'ರಾಜ್ಯದ ಕಾಂಗ್ರೆಸ್‌ನ ವಿವಿಧ ನಾಯಕರು ಪಕ್ಷದ ವರಿಷ್ಠರೊಂದಿಗೆ ಚರ್ಚಿಸುವುದು ಸಹಜ. ಸತೀಶ ಜಾರಕಿಹೊಳಿಯವರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹಜವಾಗಿ ಭೇಟಿಯಾಗಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ' ಎಂದು ತಿಳಿಸಿದರು.
'ವಿರೋಧಪಕ್ಷಗಳು, ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ರಾಜೀನಾಮೆ ಕೇಳುತ್ತಿದ್ದಾರೆ. ಅವರು ಕೇಳಿದ ತಕ್ಷಣ ರಾಜೀನಾಮೆ ಕೊಡಲು ಸಾಧ್ಯವಿಲ್ಲ. ಮುಡಾ ಪ್ರಕರಣದ ವಸ್ತುಸ್ಥಿತಿಯನ್ನು ಜನರ ಮುಂದಿಡುವ ಕೆಲಸ ಮಾಡುತ್ತೇನೆ' ಎಂದು ತಿಳಿಸಿದರು.
'ಜಿ.ಟಿ.ದೇವೇಗೌಡ ಅವರು ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿದ್ದಾರೆ. ಮುಡಾದ ಸದಸ್ಯರೂ ಆಗಿದ್ದಾರೆ. ಅವರು ಸತ್ಯ ಹೇಳಿದ್ದಾರೆ. ಮುಡಾ ಪ್ರಕರಣ ಮುಂದಿಟ್ಟುಕೊಂಡು ವಿರೋಧ ಪಕ್ಷದವರು ಪಾದಯಾತ್ರೆ ನಡೆಸುವುದು ಬೇಡ ಎಂದವರಲ್ಲಿ ಜಿ. ಟಿ. ದೇವೇಗೌಡರು ಒಬ್ಬರು' ಎಂದು ಹೇಳಿದರು.
'ನನ್ನ ರಾಜೀನಾಮೆ ಕೇಳುವ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ವಿರುದ್ಧವೂ ಜಮೀನು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಆಗಿದೆ. ಹೀಗಾಗಿ ಮೊದಲು ಅವರು ಮೊದಲು ರಾಜೀನಾಮೆ ನೀಡಲಿ' ಎಂದು ಸವಾಲು ಹಾಕಿದರು.
'ತುಂಗಭದ್ರಾ ಜಲಾಶಯದಲ್ಲಿ 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಪ್ರಸ್ತುತ 102 ಟಿಎಂಸಿ ನೀರು ಸಂಗ್ರಹವಿದೆ. ಸುಮಾರು 30 ಟಿಎಂಸಿ ನೀರಿಗೆ ಆಗುವಷ್ಟು ಹೂಳು ತುಂಬಿರುವುದರಿಂದ ಕೆಳಭಾಗದ ರೈತರಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕಾಲುವೆ ಕೆಳಭಾಗದ ರೈತರಿಗೆ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ' ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.