ನವದೆಹಲಿ: ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಹಾಗೂ ಮಾರಿಕಣಿವೆ ವನ್ಯಜೀವಿಧಾಮಗಳಲ್ಲಿ ಎನಾರ್‌ಕಾನ್ (ಇಂಡಿಯಾ) ಸಂಸ್ಥೆಯು 201 ಎಕರೆ (80 ಹೆಕ್ಟೇರ್) ಪ್ರದೇಶದಲ್ಲಿ ಅಕ್ರಮವಾಗಿ ಪವನ ವಿದ್ಯುತ್ ಉತ್ಪಾದಿಸಿರುವುದು ಖಚಿತವಾಗಿದೆ. ನಿಯಮ ಉಲ್ಲಂಘಿಸಿರುವುದಕ್ಕೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಸೂಕ್ತ ದಂಡ ವಿಧಿಸಬೇಕು ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯದ ಪ್ರಾದೇಶಿಕ ಕಚೇರಿ ಶಿಫಾರಸು ಮಾಡಿದೆ.
ವನ್ಯಜೀವಿಧಾಮದ 548 ಎಕರೆಯಲ್ಲಿ (221 ಹೆಕ್ಟೇರ್) ಪವನ ವಿದ್ಯುತ್ ಉತ್ಪಾದನೆಯ ಗುತ್ತಿಗೆಯನ್ನು ಮತ್ತೆ 15 ವರ್ಷ ವಿಸ್ತರಿಸಬಹುದು ಎಂದೂ ಶಿಫಾರಸು ಮಾಡಿದೆ. ‘ಕಂಪನಿಯು ಈ ಪ್ರದೇಶದಲ್ಲಿ 100ಕ್ಕೂ ಅಧಿಕ ಪವನ ವಿದ್ಯುತ್ ಉತ್ಪಾದನೆಯ ಪರಿವರ್ತಕಗಳನ್ನು ಅಳವಡಿಸಿದೆ. ಹೊಸದಾಗಿ ಯಾವುದೇ ಮರಗಳನ್ನು ಕಡಿಯದೆ ಅಥವಾ ಹೊಸದಾಗಿ ಅರಣ್ಯ ನಾಶ ಮಾಡದೆ ಪವನ ವಿದ್ಯುತ್ ಉತ್ಪಾದಿಸುವ ಈ ಯೋಜನೆಯು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಅನುಕೂಲ ಮಾಡಿಕೊಡಲಿದೆ ಎಂದು ಸಮಜಾಯಿಷಿ ನೀಡಿದೆ. ಜತೆಗೆ, ನಿಯಮಗಳನ್ನು ಉಲ್ಲಂಘಿಸಿ ಪವನ ವಿದ್ಯುತ್ ಉತ್ಪಾದಿಸಲು ಕಂಪೆನಿಗೆ ಅನುವು ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.
ವನ್ಯಜೀವಿಧಾಮದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಪವನ ವಿದ್ಯುತ್ ಉತ್ಪಾದಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅರಣ್ಯ ಸಚಿವಾಲಯವು ಪ್ರಾದೇಶಿಕ ಕಚೇರಿಗೆ ತಾಕೀತು ಮಾಡಿತ್ತು. ಪ್ರಾದೇಶಿಕ ಕಚೇರಿ ಅಧಿಕಾರಿಗಳು ಸ್ಥಳ ತನಿಖೆ ಮಾಡಿ ಸಚಿವಾಲಯಕ್ಕೆ ಇದೇ 18ರಂದು ವರದಿ ಸಲ್ಲಿಸಿದ್ದಾರೆ.
ಪವನ ವಿದ್ಯುತ್ ಉತ್ಪಾದನೆಯ ಗುತ್ತಿಗೆಯನ್ನು ಮತ್ತೆ 15 ವರ್ಷಗಳಿಗೆ ನವೀಕರಿಸಬೇಕು ಎಂದು ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ನಿಗಮವು (ಕೆಆರ್‌ಇಡಿಎಲ್) ರಾಜ್ಯ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಉಲ್ಲಂಘನೆಗೆ ಗುತ್ತಿಗೆ ಪಡೆದ ಕಂಪೆನಿಗೆ (ವಿಂಡ್ ವರ್ಲ್ಡ್ ಇಂಡಿಯಾ ಲಿಮಿಟೆಡ್) ದಂಡ ವಿಧಿಸುವ ಷರತ್ತುಗಳೊಂದಿಗೆ ರಾಜ್ಯ ಸರ್ಕಾರವು ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಬಳಿಕ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸೆಪ್ಟೆಂಬರ್ 23ರಂದು ನಡೆದ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾವನೆ ಕುರಿತು ಚರ್ಚಿಸಲಾಗಿತ್ತು. ’ಸಚಿವಾಲಯದ ಪ್ರಾದೇಶಿಕ ಕಚೇರಿಯು ಸ್ಥಳ ಪರಿಶೀಲನೆಯ ವರದಿ ಸಲ್ಲಿಸಬೇಕು. ನಿಯಮ ಉಲ್ಲಂಘನೆಯ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿ ನಿರ್ದೇಶನ ನೀಡಿತ್ತು.
‘ಪವನ ವಿದ್ಯುತ್ ಉತ್ಪಾದಿಸಲು ಕಂಪನಿಗೆ 221 ಹೆಕ್ಟೇರ್ ಪ್ರದೇಶವನ್ನು ಗುತ್ತಿಗೆಗೆ ನೀಡಲಾಗಿತ್ತು. ಆದರೆ, ಕಂಪನಿಯು ಮಂಜೂರಾದ ಜಾಗ ಬಿಟ್ಟು ಅದರ ಆಚೆಗಿನ 45.27 ಹೆಕ್ಟೇರ್‌ನಲ್ಲಿ (112 ಎಕರೆ) ನಿರಂತರವಾಗಿ ವಿದ್ಯುತ್ ಉತ್ಪಾದಿಸಿದೆ. ಅಲ್ಲದೇ, 35 ಹೆಕ್ಟೇರ್‌ನಲ್ಲಿ ಭೂಬಳಕೆಯ ಬದಲಾವಣೆ ಮಾಡಲಾಗಿದೆ. ಇದು ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಸ್ಪಷ್ಟ ಉಲ್ಲಂಘನೆ’ ಎಂದು ಪ್ರಾದೇಶಿಕ ಕಚೇರಿಯು ವರದಿಯಲ್ಲಿ ಉಲ್ಲೇಖಿಸಿದೆ.
ಈಗ ಇಡೀ ಯೋಜನೆಯು ವನ್ಯಜೀವಿಧಾಮದೊಳಗೆ ಬರುತ್ತಿದೆ. ಹೀಗಾಗಿ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಪಡೆದು ಕಾಡುಪ್ರಾಣಿಗಳ ಸಂರಕ್ಷಣಾ ಕಾರ್ಯಗಳನ್ನು ನಡೆಸಬೇಕು ಎಂದು ಸೂಚಿಸಿದೆ.
ಮುಖ್ಯಾಂಶಗಳು
*ಜೋಗಿಮಟ್ಟಿ ವನ್ಯಜೀವಿಧಾಮದಲ್ಲಿ ಪವನ ವಿದ್ಯುತ್ ಯೋಜನೆ
*ಸ್ಥಳ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದ ಕೇಂದ್ರ ಪರಿಸರ ಸಚಿವಾಲಯ
*ಪ್ರಾದೇಶಿಕ ಕಚೇರಿಯಿಂದ ಸಚಿವಾಲಯಕ್ಕೆ ವರದಿ ಸಲ್ಲಿಕೆ
*ಅಕ್ರಮಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು
ಕ್ರಮಕ್ಕೆ ಶಿಫಾರಸು
* ಜೋಗಿಮಟ್ಟಿ ವನ್ಯಜೀವಿಧಾಮದಲ್ಲಿ ಪವನ ವಿದ್ಯುತ್ ಯೋಜನೆ
* ಸ್ಥಳ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದ ಕೇಂದ್ರ ಪರಿಸರ ಸಚಿವಾಲಯ
* ಪ್ರಾದೇಶಿಕ ಕಚೇರಿಯಿಂದ ಸಚಿವಾಲಯಕ್ಕೆ ವರದಿ ಸಲ್ಲಿಕೆ
* ಅಕ್ರಮಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.