ಬೆಂಗಳೂರು: ‘ಆ್ಯಪಲ್’ ಐಪೋನ್‌ಗಳ ಉತ್ಪಾದನಾ ಘಟಕದಲ್ಲಿ ಇತ್ತೀಚೆಗೆ ನಡೆದ ಕಾರ್ಮಿಕರ ದಾಂದಲೆ ಪ್ರಕರಣವನ್ನು ಚೀನಾ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾರಂಭಿಸಿದೆ. ಕೊರೊನಾ ಕಾರಣಕ್ಕೆ ಚೀನಾ ವಿರುದ್ಧ ಮುನಿಸಿಕೊಂಡು ಆ ದೇಶ ತೊರೆಯಲು ಉದ್ದೇಶಿಸಿರುವ ವಿವಿಧ ದೇಶಗಳ ಕಂಪನಿಗಳಿಗೆ ಈ ಘಟನೆಯನ್ನು ಮುಂದಿಟ್ಟುಕೊಂಡು ಎಚ್ಚರಿಕೆ ನೀಡುವ ಪ್ರಯತ್ನವನ್ನೂ ನಡೆಸಿದೆ.
ಚೀನಾ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ಪತ್ರಿಕೆಯೂ ಈ ಕುರಿತ ಪ್ರಚಾರದಲ್ಲಿ ಮುಂಚೂಣಿಯಲ್ಲಿದೆ. ನರಸಾಪುರದಲ್ಲಿರುವ ತೈವಾನ್ ಮೂಲದ ವಿಸ್ಟ್ರಾನ್ ಮತ್ತು ಬಿಡದಿಯ ಟೊಯೊಟಾ ಕಿರ್ಲೋಸ್ಕರ್‌ನಲ್ಲಿ ನಡೆದಿರುವ ಲಾಕ್‌ಔಟ್/ಮುಷ್ಕರವನ್ನು ಪ್ರಧಾನವಾಗಿ ಉಲ್ಲೇಖಿಸಿ ಭಾರತದಲ್ಲಿ ವಿದೇಶಿ ಹೂಡಿಕೆಗೆ ಪೂರಕ ವಾತಾವರಣವಿಲ್ಲ. ಆದ್ದರಿಂದ ಚೀನಾ ತೊರೆಯುವ ವಿಚಾರವನ್ನು ಪುನರ್‌ಪರಿಶೀಲಿಸಬೇಕು ಎಂದು ಹೇಳಿದೆ. ತನ್ನ ಇಂಗ್ಲಿಷ್ ಆವೃತ್ತಿಯ ವೆಬ್‌ಸೈಟನಲ್ಲಿ ಈ ಕುರಿತು ಸರಣಿ ಲೇಖನಗಳನ್ನು ಬರೆಯಲಾರಂಭಿಸಿದೆ.
‘ವಿಸ್ಟ್ರಾನ್ ಉತ್ಪಾದನಾ ಘಟಕದಲ್ಲಿನ ಗಲಭೆ, ಹಿಂಸಾಚಾರ ಉದ್ಯಮಗಳಿಗೆ ಭಾರತದಲ್ಲಿ ಸಂಭಾವ್ಯ ಸವಾಲು ಮತ್ತು ಅಪಾಯದ ಒಂದು ಉದಾಹರಣೆ. ಚೀನಾದಲ್ಲಿ ಕಾರ್ಮಿಕ ಮಾರುಕಟ್ಟೆ ಸುಸ್ಥಿರವಾಗಿದ್ದು, ಯಾವುದೇ ಅಪಾಯವಿಲ್ಲ ಎಂಬುದನ್ನು ಭಾರತಕ್ಕೆ ಹೊರಟು ನಿಂತಿರುವ ಕಂಪನಿಗಳು ಮನಗಾಣಬೇಕು’ ಎಂದು ‘ಗ್ಲೋಬಲ್ ಟೈಮ್ಸ್’ ಲೇಖನವೊಂದರಲ್ಲಿ ಹೇಳಿದೆ.
ಆ್ಯಪಲ್ ಮರಳಿ ಬನ್ನಿ: ‘ಆ್ಯಪಲ್ ಕಂಪನಿ ಭಾರತ ಬಿಟ್ಟು ಮರಳಿ ಚೀನಾಕ್ಕೆ ಬನ್ನಿ’ ಎಂಬ ಆನ್‌ಲೈನ್ ಆಂದೋಲನವನ್ನು ಅಲ್ಲಿನ ನೆಟ್ಟಿಗರು ಆರಂಭಿಸಿದ್ದಾರೆ. ಕೋಲಾರ ಜಿಲ್ಲೆ ನರಸಾಪುರ ಘಟಕದಲ್ಲಿ ನಡೆದ ದಾಂದಲೆ ಮತ್ತು ಭಾರತೀಯ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ಶೇರ್ ಮಾಡಿ, ಮರಳಿ ಚೀನಕ್ಕೆ ಬರುವಂತೆ ಆ್ಯಪಲ್ ಕಂಪನಿಗೆ ಮನವಿ ಮಾಡಿದ್ದಾರೆ.
‘ಆ್ಯಪಲ್ ತನ್ನ ಐಫೋನ್ ತಯಾರಿಕಾ ಪ್ರಮುಖ ಕೇಂದ್ರವನ್ನು ಚೀನಾದಲ್ಲಿಯೇ ಸ್ಥಾಪಿಸಬೇಕು. ಕೈಗಾರಿಕಾ ಘಟಕಗಳ ಹೂಡಿಕೆಗೆ ಚೀನಾ ಅತ್ಯಂತ ಸುರಕ್ಷಿತ ತಾಣ. ದುಂಡಾವರ್ತಿ, ಕೈಗಾರಿಕಾ ಘಟಕಗಳನ್ನು ನಾಶ ಮಾಡುವುದು ಮತ್ತು ಬೆಂಕಿ ಹಾಕುವ ಪ್ರಕರಣಗಳು ನಮ್ಮಲ್ಲಿ ಇಲ್ಲವೇ ಇಲ್ಲ’ ಎಂಬುದಾಗಿ ಚೀನಾದ ಸಾಮಾಜಿಕ ಜಾಲತಾಣ ‘ಸಿನಾ ವೈಬೊ’ದಲ್ಲಿ ಇಲ್ಫಿ ಎಂಬುವರು ಹೇಳಿದ್ದಾರೆ. ‘ಮೂವ್ ಟು ಚೀನಾ, ಚೀನಾ ವೆಲ್‌ಕಮ್ಸ್ ಯೂ’ ಎಂದು ಇನ್ನೊಬ್ಬ ಜಾಲತಾಣಿಗ ಫಂಗ್‌ಚುನ್‌ಚುನ್ ತಿಳಿಸಿದ್ದಾರೆ.
ಭಾರತದಲ್ಲಿ ಕಾರ್ಮಿಕ ವಲಯದಲ್ಲಿ ಹಿಂಸೆ, ಕೊರೊನಾ ಸೋಂಕು ಪರಿಸ್ಥಿತಿಯಿಂದ ಉತ್ಪಾದಕತೆ ಮೇಲೆ ಪ್ರಹಾರ ಬೀಳಲಿದೆ. ಭಾರತದ ಉತ್ಪಾದಕತೆ ಸಾಮರ್ಥ್ಯ, ಐಫೋನ್ ಪೂರೈಕೆ ಸರಪಳಿ ಹಾಳುಗೆಡವಿದ ಕಾರಣ ಈ ಕಂಪನಿ ಅಲ್ಲದೆ, ಇನ್ನೂ ಹಲವು ಕಂಪನಿಗಳು ಮರಳಿ ಚೀನಾಗೆ ಬರಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ‘ಗ್ಲೋಬಲ್ ಟೈಮ್ಸ್ ’ಹೇಳಿಕೊಂಡಿದೆ.
ಭಾರತದಲ್ಲಿ ಕಾರ್ಮಿಕರ ವೆಚ್ಚ ಅತಿ ಕಡಿಮೆ ಇದೆ. ಆದರೆ ಉತ್ಪಾದನಾ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಉತ್ಪಾದನಾ ಗುಣಮಟ್ಟವೂ ಕೆಳಮಟ್ಟದ್ದಾಗಿದೆ ಎಂದು ಬೀಜಿಂಗ್‌ನ ಸ್ವತಂತ್ರ ವಿಶ್ಲೇಷಕ ಲಿಯು ಡಿಂಗ್‌ಡಿಂಗ್ ಆ ಪತ್ರಿಕೆಗೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.