ADVERTISEMENT

ಪ್ರಕರಣ ವಾಪಸ್‌; ಸಿಎಂ ಆದಿತ್ಯನಾಥ ನಡೆ ಪ್ರಶ್ನಾರ್ಹ ಅಲ್ಲವೇ?: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 15:57 IST
Last Updated 14 ಅಕ್ಟೋಬರ್ 2024, 15:57 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಬೆಂಗಳೂರು: ಉತ್ತರಪ್ರದೇಶ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡೇ ತಮ್ಮ ವಿರುದ್ಧದ ಹಲವು ಪ್ರಕರಣಗಳನ್ನು ವಾಪಸ್‌ ಪಡೆದಿದ್ದಾರೆ. ಹೀಗಿರುವಾಗ, ಕಾಂಗ್ರೆಸ್‌ ಸರ್ಕಾರದ ನಿರ್ಧಾರ ಪ್ರಶ್ನಿಸಲು ಬಿಜೆಪಿಗೆ ನೈತಿಕತೆ ಇದೆಯೇ ಎಂದು ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೂ ಹಲವು ಪ್ರಕರಣಗಳನ್ನು ವಾಪಸ್‌ ಪಡೆಯಲಾಗಿದೆ. ಬಿಜೆಪಿಯದು ಕಾಮಾಲೆ ಕಣ್ಣು. ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಸರ್ಕಾರಗಳು ಮಾಡುವ ಎಲ್ಲ ಕೆಲಸಗಳೂ ಅವರಿಗೆ ಹಳದಿಯಾಗೇ ಕಾಣುತ್ತವೆ ಎಂದು ಟೀಕಿಸಿದರು.

ADVERTISEMENT

ಹುಬ್ಬಳ್ಳಿ ಪ್ರಕರಣ ಅಷ್ಟೇ ಅಲ್ಲ, ರೈತರು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಕೈಗೊಂಡಿದ್ದ ಪ್ರತಿಭಟನೆಯ ಪ್ರಕರಣಗಳನ್ನೂ ಹಿಂಪಡೆಯಲು ಸಂಪುಟ ಸಭೆ ಸಮ್ಮತಿ ನೀಡಿದೆ. 56 ಪ್ರಕರಣಗಳಲ್ಲಿ 43 ಪ್ರಕರಣ ವಾಪಸ್‌ ಪಡೆಯಲು ಒಪ್ಪಿಗೆ ನೀಡಲಾಗಿದೆ. ಆದರೆ, ಹುಬ್ಬಳ್ಳಿ ಪ್ರಕರಣವನ್ನು ಮಾತ್ರ ಹಿಂಪಡೆಯಲಾಗಿದೆ ಅಥವಾ 43 ಪ್ರಕರಣಗಳೂ ಅಲ್ಪಸಂಖ್ಯಾತರಿಗೆ ಸೇರಿವೆ ಎನ್ನುವಂತೆ ಬಿಜೆಪಿ ಅಪಪ್ರಚಾರ ನಡೆಸಿದೆ ಎಂದು ದೂರಿದರು.

ಎಲ್ಲ ಪ್ರಕರಣಗಳನ್ನೂ ವಾಪಸ್‌ ಪಡೆಯಲು ಸಾಧ್ಯವಿಲ್ಲ. ಸುಳ್ಳು ಪ್ರಕರಣಗಳು ಸೇರಿದಂತೆ ಕೆಲ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಸಲ್ಲಿಕೆಯಾದ ಮನವಿಗಳನ್ನು ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿ ರಚಿಸಲಾಗುತ್ತದೆ. ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್, ಸಾಕ್ಷ್ಯ ಸಂಗ್ರಹಣೆಯಲ್ಲಿ ಆದ‌ ಲೋಪದೋಷಗಳನ್ನು ಪರಿಶೀಲಿಸಿ, ವರದಿ ನೀಡಿದ ನಂತರ ಸಂಪುಟಸಭೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

‘ಹುಬ್ಬಳ್ಳಿ ಪ್ರಕರಣದಲ್ಲೂ ಮನವಿ ಕೊಟ್ಟಿದ್ದರು. ಅಷ್ಟೊಂದು ಜನರ ಮೇಲೆ ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ ಎಂದು ಚರ್ಚೆಯಾಗಿ, ವಾಪಸ್ ಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋರ್ಟ್‌ ಒಪ್ಪಿದರಷ್ಟೇ ಪ್ರಕರಣಗಳು ರದ್ದಾಗುತ್ತವೆ’ ಎಂದರು.

ಬಿಜೆಪಿ ಆಪಾದನೆ ಮಾಡಿದ್ದರಿಂದ ರಾಹುಲ್‌ ಖರ್ಗೆ ಅವರು ಸಿದ್ಧಾರ್ಥ ಟ್ರಸ್ಟ್‌‌ಗೆ ಪಡೆದಿದ್ದ ನಿವೇಶನ ವಾಪಸ್ ನೀಡಿದ್ದಾರೆ. ನಿವೇಶನ ಪಡೆಯಲು ಅವರು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ
ಜಿ. ಪರಮೇಶ್ವರ ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.