ಬೆಂಗಳೂರು: ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದ ಮಹಿಳೆಯನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ ಥಳಿಸಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಘಟನೆಯ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ತೀವ್ರ ಅಸಮಾಧಾನ ದಾಖಲಿಸಿದೆ. ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಮಂಗಳವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಈ ಪ್ರಕರಣವನ್ನು ಮುಕ್ತ ನ್ಯಾಯಾಲಯದಲ್ಲಿ ಪ್ರಸ್ತಾಪಿಸಿತು.
‘ಒಂದೆಡೆ, ದೇಶವು 76ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಇಂತಹ ಘಟನೆ ನಡೆದಿರುವುದು ನಮ್ಮೆಲ್ಲರ ಅಂತಃಕರಣವನ್ನು ಕಲಕಿ, ತಲೆತಗ್ಗಿಸುವಂತೆ ಮಾಡಿದೆ. ಇದೊಂದು ಹೃದಯ ಮಿಡಿಯುವ ಆಘಾತಕಾರಿ ಘಟನೆ’ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದೆ.
ಸಂತ್ರಸ್ತೆಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸಂತೈಸುತ್ತಿರುವ ಚಿತ್ರವು ಮಂಗಳವಾರದ (ಡಿ.12) ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ಉಲ್ಲೇಖಿಸಿದ ನ್ಯಾಯಪೀಠ, ‘ಈ ವಿಷಯದಲ್ಲಿ ‘ಪ್ರಜಾವಾಣಿ’ಯಂತಹ ದಿನಪತ್ರಿಕೆ ತನ್ನ ಸೂಕ್ಷ್ಮತೆ ಮೆರೆದಿದೆ. ಆದರೆ, ಇನ್ನುಳಿದಂತೆ ಹಲವು ಮಾಧ್ಯಮ ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಅತ್ಯಂತ ಬೇಜವಾಬ್ದಾರಿ ಮತ್ತು ಅಸೂಕ್ಷ್ಮತೆಯಿಂದ ನಡೆದುಕೊಂಡಿವೆ’ ಎಂದು ಚಾಟಿ ಬೀಸಿದೆ.
‘ಸಂತ್ರಸ್ತೆಯ ವೈಯಕ್ತಿಕ ಘನತೆಯನ್ನು ಕಾಪಾಡಬೇಕಿದೆ’ ಎಂದ ನ್ಯಾಯಪೀಠ, ‘ಇನ್ನು ಮುಂದೆ ರಾಷ್ಟ್ರೀಯ, ರಾಜ್ಯ ಮತ್ತು ಯಾವುದೇ ಸ್ತರದ ಮಾಧ್ಯಮಗಳು ಸಂತ್ರಸ್ತೆಯ ಸಂದರ್ಶನ ಅಥವಾ ವಿಡಿಯೊಗ್ರಾಫ್ ಪ್ರಸಾರ ಮಾಡಬಾರದು’ ಎಂದು ನಿರ್ದೇಶಿಸಿತು. ಈಗಾಗಲೇ ಮಾಡಿದ್ದರೆ ಅವುಗಳನ್ನು ತೆಗೆದುಹಾಕುವಂತೆಯೂ ತಾಕೀತು ಮಾಡಿತು.
‘ಸುದ್ದಿ ಪ್ರಸಾರ ಮಾಡುವುದಕ್ಕೆ ಮಾಧ್ಯಮಗಳ ಮೇಲೆ ನಿಷೇಧ ಹೇರುತ್ತಿಲ್ಲ’ ಎಂದ ನ್ಯಾಯಪೀಠ, ‘ನ್ಯಾಯಾಲಯ, ಮಾಧ್ಯಮದ ಸ್ವಾತಂತ್ರ್ಯವನ್ನು ಯಾವತ್ತೂ ಮನ್ನಿಸುತ್ತದೆ’ ಎಂದು ಸ್ಪಷ್ಟಪಡಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 14ರಂದು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರಿಗೆ ನಿರ್ದೇಶಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.