ಬೆಂಗಳೂರು: ‘ಹಾಸನದ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಬಳಿ ಬಂದೂಕು ಇರುವುದಾಗಿ ಹೇಳಿ, ಕೊಲೆ ಬೆದರಿಕೆಯೊಡ್ಡಿ, ನನ್ನ ನಗ್ನ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡಿದ್ದಲ್ಲದೇ, ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ದೂರು ನೀಡಿದ್ದಾರೆ. ಈ ದೂರು ಆಧಾರದಲ್ಲಿ ಪ್ರಜ್ವಲ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಐಪಿಸಿ ಸೆಕ್ಷನ್ 376 –2 ಎನ್ (ಮಹಿಳೆ ಮೇಲೆ ಬಲವಂತದಿಂದ ನಿರಂತರ ಅತ್ಯಾಚಾರ), ಐಪಿಸಿ 506 (ಜೀವ ಬೆದರಿಕೆ), 354–ಎ (ಲೈಂಗಿಕ ಕಿರುಕುಳ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಆರೋಪಿ ಪ್ರಜ್ವಲ್ ವಿರುದ್ಧ ಸಿಐಡಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಐಪಿಸಿ 376 –2 ಎನ್ ಪ್ರಕರಣಕ್ಕೆ ಕನಿಷ್ಠ 10 ವರ್ಷ ಜೈಲು ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.
ಸಂತ್ರಸ್ತೆಯ ದೂರು: ‘ಜನಸೇವೆ ಮಾಡುವ ನಾನು, ಜನರ ಕೆಲಸಗಳನ್ನು ಮಾಡಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿ ಶಾಸಕ ಹಾಗೂ ಸಂಸದರ ಬಳಿ ಆಗಾಗ ಹೋಗಿ ಬರುತ್ತಿದ್ದೆ. ಕೆಲ ವರ್ಷಗಳ ಹಿಂದೆಯಷ್ಟೇ ಸಂಸದ ಪ್ರಜ್ವಲ್ ಕಚೇರಿ ಹಾಗೂ ಕ್ವಾರ್ಟರ್ಸ್‌ಗೆ ಹೋಗಿದ್ದೆ. ಮೊದಲ ದಿನ ಹೋದಾಗ ಸಂಸದ ಕೆಲಸ ನಿಮಿತ್ತ ಸ್ಥಳದಿಂದ ಹೊರಟು ಹೋಗಿದ್ದರು. ಮರುದಿನ ಬರುವಂತೆ ಹೇಳಿದ್ದರು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
‘ಮರುದಿನ ಸಂಸದ ಪ್ರಜ್ವಲ್ ಕ್ವಾರ್ಟರ್ಸ್‌ಗೆ ಹೋಗಿದ್ದೆ. ಅಲ್ಲಿದ್ದ ಪ್ರಜ್ವಲ್ ಕಡೆಯವರು ನನ್ನನ್ನು ಮೊದಲ ಮಹಡಿಗೆ ಕಳುಹಿಸಿದ್ದರು. ಅಲ್ಲಿಯೂ ಕೆಲ ಮಹಿಳೆಯರು ಇದ್ದರು. ಸ್ಥಳಕ್ಕೆ ಬಂದಿದ್ದ ಪ್ರಜ್ವಲ್, ಇತರೆ ಮಹಿಳೆಯರನ್ನು ಮಾತನಾಡಿಸಿ ವಾಪಸು ಕಳುಹಿಸಿದ್ದರು. ನಾನು ಒಬ್ಬಳೇ ಉಳಿದುಕೊಂಡಿದ್ದೆ. ಎಲ್ಲರೂ ಹೋದ ನಂತರ, ನನ್ನ ಕೈ ಹಿಡಿದಿದ್ದ ಪ್ರಜ್ವಲ್, ಮಹಡಿಯ ಕೊಠಡಿಗೆ ಎಳೆದೊಯ್ದಿದ್ದರು. ಕೊಠಡಿ ಬಾಗಿಲು ಹಾಕಿಕೊಂಡು ಒಳಗಿನಿಂದ ಲಾಕ್ ಮಾಡಿದ್ದರು’ ಎಂದೂ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ನನ್ನ ಪತಿ ಬಗ್ಗೆಯೂ ಮಾತನಾಡಿದ್ದ ಪ್ರಜ್ವಲ್, ನಂತರ, ನನಗೆ ಬಟ್ಟೆ ಬಿಚ್ಚುವಂತೆ ಹಾಗೂ ಮಂಚದ ಮೇಲೆ ಮಲಗುವಂತೆ ಒತ್ತಾಯಿಸಿದ್ದರು. ಅದಕ್ಕೆ ಒಪ್ಪದಿದ್ದಾಗ, ‘ನನ್ನ ಬಳಿ ಬಂದೂಕು ಇದೆ. ನಾನು ಹೇಳಿದಂತೆ ಕೇಳದಿದ್ದರೆ, ನಿನ್ನನ್ನು ಹಾಗೂ ನಿನ್ನ ಪತಿಯನ್ನು ಮುಗಿಸುತ್ತೇನೆ’ ಎಂದು ಬೆದರಿಸಿದ್ದರು. ನಾನು ಅವರಿಂದ ಬಿಡಿಸಿಕೊಳ್ಳಲು ಯತ್ನಿಸಿದ್ದೆ. ಆದರೆ, ಅವರು ಕೈಗಳನ್ನು ಬಿಗಿಯಾಗಿ ಹಿಡಿದಿದ್ದರು. ನಂತರ, ನನ್ನ ಬಟ್ಟೆಗಳನ್ನು ಒತ್ತಾಯದಿಂದ ಬಿಚ್ಚಿಸಿದ್ದರು. ‘ಜೋರಾರಿ ಕೂಗುತ್ತೇನೆ’ ಎಂದಾಗ, ತಮ್ಮ ಮೊಬೈಲ್ ತೆಗೆದು ನಗ್ನವಾಗಿರುವಾಗ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದರು. ಅದೇ ವಿಡಿಯೊವನ್ನು ನನಗೆ ತೋರಿಸಿ, ‘ನಾನು ಹೇಳಿದಂತೆ ನೀನು ಕೇಳದಿದ್ದರೆ, ವಿಡಿಯೊವನ್ನು ಎಲ್ಲರಿಗೂ ತೋರಿಸಿ ನಿನ್ನ ಮರ್ಯಾದೆ ಕಳೆಯುತ್ತೇನೆ. ನಿನ್ನ ಗಂಡನನ್ನೂ ಮುಗಿಸುತ್ತೇನೆ’ ಎಂದೂ ಪ್ರಜ್ವಲ್ ಬ್ಲ್ಯಾಕ್‌ಮೇಲ್ ಮಾಡಿದ್ದರು’ ಎಂಬುದಾಗಿಯೂ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ವಿಡಿಯೊ ಮುಂದಿಟ್ಟುಕೊಂಡು ಪ್ರಜ್ವಲ್ ನನ್ನನ್ನು ಒತ್ತಾಯದಿಂದ ತಮ್ಮ ಕ್ವಾರ್ಟರ್ಸ್‌ಗೆ ಪದೇ ಪದೇ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ. ಜೊತೆಗೆ, ಆಗಾಗ ವಿಡಿಯೊ ಕರೆ ಮಾಡಿ ಬಟ್ಟೆ ಬಿಚ್ಚುವಂತೆಯೂ ಪೀಡಿಸಿದ್ದರು. ವಿಡಿಯೊ ಬ್ಲ್ಯಾಕ್‌ಮೇಲ್ ಹಾಗೂ ಪತಿಯನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದರಿಂದ, ಪ್ರಜ್ವಲ್ ಹೇಳಿದಂತೆ ಇಷ್ಟು ದಿನ ಕೇಳಿದ್ದೆ. ಇದೀಗ, ಪ್ರಜ್ವಲ್ ವಿರುದ್ಧ ಎಸ್‌ಐಟಿ ತನಿಖೆ ನಡೆಯುತ್ತಿದೆ. ಹೀಗಾಗಿ, ಎಸ್‌ಐಟಿ ಎದುರು ಹಾಜರಾಗಿ ಹೇಳಿಕೆ ಕೊಟ್ಟು, ದೂರು ನೀಡುತ್ತಿದ್ದೇನೆ. ನನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ಮಹಿಳೆ ಒತ್ತಾಯಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಯಾವುದೇ ದೇಶದಲ್ಲಿದ್ದರೂ ಹಿಡಿದು ತರುತ್ತೇವೆ. ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಕೇಂದ್ರ ಸರ್ಕಾರ ಪ್ರಜ್ವಲ್ ರಕ್ಷಣೆ ಮಾಡುತ್ತಿದೆಸಿದ್ದರಾಮಯ್ಯ , ಮುಖ್ಯಮಂತ್ರಿ
‘ಪೆನ್‌ಡ್ರೈವ್ ವಿಡಿಯೊದಲ್ಲಿ ಇದ್ದಾರೆ’ ಎನ್ನಲಾದ ಸಂತ್ರಸ್ತೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ನಾಲ್ಕು ಜಿಲ್ಲೆಗಳ ಪೊಲೀಸರ ವಿಶೇಷ ತಂಡಗಳು ಹುಡುಕಾಟ ನಡೆಸುತ್ತಿವೆ. ಇದರ ಬೆನ್ನಲ್ಲೇ, ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಎಸ್‌ಐಟಿ ಅಧಿಕಾರಿಗಳು ಶುಕ್ರವಾರ ಲುಕ್‌ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಿದ್ದಾರೆ
‘ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಪ್ರಜ್ವಲ್ ಬಲವಂತದಿಂದ ಅತ್ಯಾಚಾರ ಎಸಗಿದ್ದಾರೆ’ ಎಂಬ ಆರೋಪವಿದೆ. ಪೆನ್‌ಡ್ರೈವ್ ನಲ್ಲಿದ್ದ ಕೃತ್ಯದ ವಿಡಿಯೊ ಗಮನಿಸಿದ್ದ ಸಂತ್ರಸ್ತೆಯ ಮಗ, ತಾಯಿ ಅಪಹರಣದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸಿಂಧನೂರು: ‘ಪ್ರಜ್ವಲ್ ಪ್ರಕರಣದಲ್ಲಿ ಎಲ್ಲ ಮಾಹಿತಿಯೂ ನಿಮ್ಮ ಬಳಿ ಇದ್ದರೂ ಏಪ್ರಿಲ್ 21ರವರೆಗೂ ಸುಮ್ಮನಿದ್ದುದು ಏಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೂ ಎಸ್‌ಐಟಿ ವಿಚಾರಣೆಗೆ ಒಳಪಡಿಸಬೇಕು. ಅವರ ಬಳಿ ಯಾವ ದಾಖಲೆಗಳಿವೆ ಎಂಬುದನ್ನು ತಿಳಿಯಬೇಕು’ ಎಂದು ಆಗ್ರಹಿಸಿದರು.
‘ಮೇ 7ರಂದು ಮತದಾನ ಮುಗಿದ ಮೇಲೆ ಈ ಪ್ರಕರಣ ಎಲ್ಲಿಗೆ ಹೋಗಿ ಮುಟ್ಟುತ್ತೆ? ನಿಮಗೆ ಬೇಕಿರುವುದು ಮೇ 7ರಂದು ನಡೆಯುವ ಮತದಾನ ಮತ್ತು ಜನರನ್ನು ದಿಕ್ಕು ತಪ್ಪಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದು. ಅಷ್ಟೇ ಅಲ್ಲವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.