ADVERTISEMENT

ಶಾಲಾ ವಾಹನಗಳಿಗೆ ‘ಸ್ತ್ರೀರಕ್ಷೆ’

ಮಕ್ಕಳ ಸುರಕ್ಷತೆಗೆ ಮಹಿಳಾ ಸಹಾಯಕರ ನೇಮಕ: ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 0:30 IST
Last Updated 5 ಜನವರಿ 2024, 0:30 IST
   

ಬೆಂಗಳೂರು: ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಬಸ್‌, ಕ್ಯಾಬ್‌, ವ್ಯಾನ್‌ನಂತಹ ಶಾಲಾ ವಾಹನಗಳಲ್ಲಿ ಮಹಿಳಾ ಸಹಾಯಕರನ್ನೇ ನೇಮಿಸಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ, ಮಕ್ಕಳ ರಕ್ಷಣೆಗಾಗಿ ಆದ್ಯತೆ ಮೇರೆಗೆ ಕ್ರಮವಹಿಸುವಂತೆ ಶಾಲಾ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಗಳಿಗೆ ಸೂಚಿಸಿದ್ದಾರೆ. 

ಮಕ್ಕಳನ್ನು ಮನೆಯಿಂದ ಶಾಲೆಗೆ, ಶಾಲೆ ಬಿಟ್ಟ ನಂತರ ಮನೆಗೆ ಸುರಕ್ಷಿತವಾಗಿ ಕರೆತರುವ ಕೆಲಸವನ್ನು ನಿರ್ವಹಿಸಲು ಸಹಾಯಕಿಯರ ಅಗತ್ಯವಿದೆ. ಹಾಗಾಗಿ, ಎಲ್ಲ ಶಾಲೆಗಳೂ ಇದನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ADVERTISEMENT

ಶಾಲಾ ವಾಹನಗಳನ್ನು ನಿರ್ವಹಿಸುವ ಚಾಲಕರು ಮತ್ತು ಸಹಾಯಕರು ಪ್ರತಿದಿನದ ಕೆಲಸ ಆರಂಭದ ಮೊದಲು ಮತ್ತು ಎಲ್ಲ ಮಕ್ಕಳನ್ನು ಮನೆಗಳಿಗೆ ಬಿಟ್ಟ ನಂತರ ಶಾಲೆಗೆ ವಾಪಸ್ ಬಂದು, ಶಾಲಾ ಮುಖ್ಯಸ್ಥರ ಸಮ್ಮುಖದಲ್ಲಿ ಹಾಜರಾತಿ ಪುಸ್ತಕಕ್ಕೆ ಕಡ್ಡಾಯವಾಗಿ ಸಹಿ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.

ಆಯಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಶಾಲೆಗಳಿಗೆ ಭೇಟಿ ನೀಡಿ, ಸುರಕ್ಷತೆಯ ಖಾತ್ರಿಪಡಿಸಬೇಕು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆಡಳಿತ ಮಂಡಳಿಗಳು  ವಿವರಗಳನ್ನು ಪ್ರತಿ ವರ್ಷ ಬಿಇಒಗಳಿಗೆ ನೀಡಬೇಕು ಎಂದು ಹೇಳಿದ್ದಾರೆ.

ಕರ್ನಾಟಕ ಮೋಟಾರು ವಾಹನ ಕಾಯಿದೆ–2012ರ ಪ್ರಕಾರ ಖಾಸಗಿ ಒಪ್ಪಂದದ ವಾಹನಗಳಲ್ಲಿ ಶಾಲಾ
ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ಕುರಿತು ಹೊರಡಿಸಲಾದ ಅಧಿಸೂಚನೆಯಂತೆ ಮಕ್ಕಳ ಸಂಖ್ಯೆಯನ್ನು ನಿರ್ಬಂಧಿಸಬೇಕು. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ಷರತ್ತುಗಳನ್ನು ವಿಧಿಸಲಾಗಿದೆ.

ಚಾಲಕರಿಗೆ ಪೊಲೀಸ್‌ ಪರಿಶೀಲನೆ ಕಡ್ಡಾಯ

ಆಟೊರಿಕ್ಷಾ ಸೇರಿದಂತೆ ಶಾಲಾ ಮಕ್ಕಳನ್ನು ಕರೆತರುವ ಎಲ್ಲ ಬಗೆಯ ವಾಹನಗಳ ಚಾಲಕರು ಎರಡು ವರ್ಷಗಳಿಗೊಮ್ಮೆ ಪೊಲೀಸರಿಂದ ಪಡೆದ ಸನ್ನಡತೆಯ ಪ್ರಮಾಣಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 

ಶಾಲಾ ವಾಹನಗಳಲ್ಲಿ ಚಾಲಕರು ಹಾಗೂ ವಾಹನಗಳ ಸಹಾಯಕರಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆದ ಪ್ರಕರಣಗಳು ವರದಿಯಾಗಿವೆ. ಈ ಕಾರಣಕ್ಕೆ ಶಾಲಾ ವಾಹನಗಳ ಚಾಲಕರ ಮತ್ತು ಸಹಾಯಕರ ಮಾನಸಿಕ ಸ್ಥಿತಿ ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಪೊಲೀಸ್ ಠಾಣೆಯಿಂದ ನಡತೆ ಪ್ರಮಾಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಎಂದೂ ನಿರ್ದೇಶಿಸಲಾಗಿದೆ.

ಚಾಲಕರು ತಮ್ಮ ಮೇಲೆ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ ಎನ್ನುವ ವಿವರ ಒಳಗೊಂಡ ಸನ್ನಡತೆಯ ಪ್ರಮಾಣಪತ್ರ ಪಡೆಯಬೇಕು. ಚಾಲಕರ ಸನ್ನಡತೆಯ ಪ್ರಮಾಣಪತ್ರಗಳನ್ನು ಆಡಳಿತ ಮಂಡಳಿಗಳು ಎರಡು ವರ್ಷಗಳಿಗೊಮ್ಮೆ ಪಡೆದುಕೊಳ್ಳಬೇಕು.

ಸೂಚನೆಗಳೇನು?

*ವಾಹನಗಳಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ‘ಶಾಲಾ ವಾಹನ ಸುರಕ್ಷತಾ ಸಮಿತಿ’ ರಚಿಸಬೇಕು

*ಸನ್ನಡತೆಯ ಚಾಲಕರನ್ನಷ್ಟೇ ನೇಮಕ ಮಾಡಿಕೊಳ್ಳಬೇಕು

*ಖಾಸಗಿ ಶಾಲೆಗಳ ಪ್ರತಿ ವಾಹನದಲ್ಲೂ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕು

*ಮಕ್ಕಳ ಸುರಕ್ಷತೆಯ ನಿಯಮಗಳನ್ನು ಉಲ್ಲಂಘಿಸಿದರೆ ಶಿಸ್ತುಕ್ರಮ ಜರುಗಿಸಬೇಕು

****

ಶಿಕ್ಷಣ ಇಲಾಖೆಯ ಸುತ್ತೋಲೆ ಸ್ವಾಗತಾರ್ಹ. ಖಾಸಗಿ ಶಾಲೆಗಳಲ್ಲಿ ಚಾಲಕರು ದೀರ್ಘ ಕಾಲ ನಿಲ್ಲುವುದಿಲ್ಲ. ಹಾಗಾಗಿ, ಯಾವುದೇ ವೆಚ್ಚವಿಲ್ಲದೆ ಸನ್ನಡತೆ ಪ್ರಮಾಣಪತ್ರ ನೀಡಬೇಕು

-ಡಿ.ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿ

****

ಚಾಲಕರಿಗೆ ಸನ್ನಡತೆ ಪ್ರಮಾಣಪತ್ರ ಕಡ್ಡಾಯ, ವಾಹನಗಳಲ್ಲಿ ಸಹಾಯಕಿಯರ ನೇಮಕ ಎರಡೂ ವಿಷಯಗಳು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮುಖ್ಯ ನಿರ್ಧಾರಗಳು

-ಅನುಪಮ ರಾಜೇಶ್‌, ಪೋಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.