ADVERTISEMENT

‘ಗ್ಯಾರಂಟಿ’ ಯೋಜನೆ ಫಲವಾಗಿ ಕಾಂಗ್ರೆಸ್‌ನತ್ತ ಮಹಿಳೆಯರು: ಅಲ್ಕಾ ಲಂಬಾ

ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಲ್ಕಾ ಲಂಬಾ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 14:46 IST
Last Updated 17 ಅಕ್ಟೋಬರ್ 2024, 14:46 IST
ಅಲ್ಕಾ ಲಂಬಾ
ಅಲ್ಕಾ ಲಂಬಾ   

ಬೆಂಗಳೂರು: ಒಂದೇ ತಿಂಗಳಲ್ಲಿ 2.50 ಲಕ್ಷ ಮಹಿಳೆಯರು ಆನ್‌ಲೈನ್‌ ಮೂಲಕ ಕಾಂಗ್ರೆಸ್‌ ಸದಸ್ಯತ್ವ ಪಡೆದಿದ್ದಾರೆ. ಡಿಸೆಂಬರ್‌ ಒಳಗೆ 10 ಲಕ್ಷ ಸದಸ್ಯತ್ವದ ಗುರಿ ತಲುಪುತ್ತೇವೆ ಎಂದು ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಲ್ಕಾ ಲಂಬಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕರ್ನಾಟಕದಲ್ಲಿ 30 ಸಾವಿರ, ತೆಲಂಗಾಣದಲ್ಲಿ 50 ಸಾವಿರ ಮಹಿಳೆಯರು ಕಾಂಗ್ರೆಸ್‌ ಸದಸ್ಯತ್ವ ಪಡೆದಿದ್ದಾರೆ. ಗ್ಯಾರಂಟಿ ಯೋಜನೆ ಸೇರಿದಂತೆ ಕಾಂಗ್ರೆಸ್‌ ಸರ್ಕಾರಗಳು ಕೊಟ್ಟ ಮಾತಿನಂತೆ ನಡೆದುಕೊಂಡಿವೆ. ಹಾಗಾಗಿ, ಅಧಿಕ ಸಂಖ್ಯೆಯ ಮಹಿಳೆಯರು ಪಕ್ಷದತ್ತ ಒಲವು ತೋರುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಎಲ್ಲ ರಾಜ್ಯಗಳಲ್ಲೂ ಮಹಿಳಾ ನಾಯಕತ್ವ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಮಹಿಳಾ ಮೀಸಲಾತಿ ಕಾನೂನು ಜಾರಿಗೆ ಹೋರಾಟ ಮುಂದುವರಿಯಲಿದೆ. ಕಾನೂನು ಜಾರಿಯಾದರೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಗಳು ದೊರಕಲಿವೆ ಎಂದರು.

ADVERTISEMENT

ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸೌಮ್ಯಾರೆಡ್ಡಿ ಮಾತನಾಡಿ, ಶಕ್ತಿ ಯೋಜನೆ ಜಾರಿಯ ನಂತರ ಗ್ರಾರ್ಮೆಂಟ್ಸ್‌ ಸೇರಿದಂತೆ ಉದ್ಯಮವಲಯಗಳಲ್ಲಿ ಮಹಿಳಾ ಕೆಲಸಗಾರರ ಸಂಖ್ಯೆ ಹೆಚ್ಚಿದೆ. ಬಡ ಜನರ ಜೀವನಮಟ್ಟ ಸುಧಾರಿಸುತ್ತಿದೆ ಎಂದು ಹೇಳಿದರು.

ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ ಯಂತ್ರ

ಋತುಚಕ್ರದ ವೇಳೆ ಅಗತ್ಯವಿರುವ 10 ಸ್ಯಾನಿಟರಿ ಪ್ಯಾಡ್ ಖರೀದಿಸಲೂ ಗ್ರಾಮೀಣ ಮಹಿಳೆಯರು ಕಷ್ಟಪಡುತ್ತಿದ್ದಾರೆ. ಸ್ವಚ್ಛತೆಯ ಕೊರತೆಯಿಂದಾಗಿ ಕೆಲ ಮಹಿಳೆಯರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಅಲ್ಕಾ ಲಂಬಾ ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣ ಮಹಿಳೆಯರ ಸ್ಥಿತಿಗತಿ ಕುರಿತು ಕಾಂಗ್ರೆಸ್‌ ಮಹಿಳಾ ಘಟಕ ಸಮೀಕ್ಷೆ ನಡೆಸಿದೆ. ಮಹಿಳಾ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ ನೀಡಲು ಸ್ಯಾನಿಟರಿ ಪ್ಯಾಡ್‌ ಎಲ್ಲರಿಗೂ ದೊರಕುವಂತೆ ಮಾಡಲು ಅಭಿಯಾನವನ್ನೇ ರೂಪಿಸಿದ್ದೇವೆ. ಮಹಿಳಾ ಕಾಂಗ್ರೆಸ್‌ ಸದಸ್ಯರಿಗೆ ಸ್ಯಾನಿಟರಿ ಪ್ಯಾಡ್‌ ತಯಾರಿಸುವ ಯಂತ್ರ ನೀಡಲಾಗುತ್ತಿದೆ. ಅವರು ಉತ್ಪಾದಿಸುವ ಪ್ಯಾಡ್‌ಗಳನ್ನು ಉಚಿತವಾಗಿ ಪ್ರತಿ ಹಳ್ಳಿಯಲ್ಲೂ ವಿತರಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.