ಬೆಳಗಾವಿ: ‘ಪತಿಯೂ 28 ವರ್ಷ ಸೈನ್ಯದಲ್ಲಿದ್ದು ದೇಶ ಸೇವೆ ಮಾಡಿದ್ದಾರೆ. ಮಗನೂ ಸೇನೆ ಸೇರಿದ್ದಾನೆ. ವಿಜೃಂಭಣೆಯಿಂದ ಅವನ ಮದುವೆ ಮಾಡಿದ್ದೆವು. ಹಸೆಮಣೆ ಏರಿದ ನಾಲ್ಕೇ ದಿನಗಳಲ್ಲೇ ಸೈನ್ಯದಿಂದ ಕರೆ ಬಂತು. ಕೂಡಲೇ ಹೊರಟ. ಅವನ ದೇಶಭಕ್ತಿ ಕಂಡು ಹೆಮ್ಮೆಯಾಯಿತು... ಹೆತ್ತ ಕರುಳಲ್ಲವೇ, ವಾತ್ಸಲ್ಯ ಇರುತ್ತದೆ. ದುಃಖವೂ ಆಗುತ್ತದೆ. ಆದರೆ, ಭಾರತ ಮಾತೆಯ ಸೇವೆಗೆ ಹೋಗಿದ್ದಾನೆ ಎನ್ನುವ ಹೆಮ್ಮೆ ದುಃಖವನ್ನು ಮರೆಸುತ್ತದೆ...’
ಚಿಕ್ಕೋಡಿ ತಾಲ್ಲೂಕು ಮಲಿಕವಾಡದ ಸೈನಿಕ, ಏರ್‌ಮನ್ ರಾಜೇಂದ್ರ ಶ್ರೀಕಾಂತ ಸುತಾರ ಅವರ ತಾಯಿ ಸುನೀತಾ ಅವರ ಮನದಾಳದ ಮಾತುಗಳಿವು. ‘ನಮಗಿರುವುದು ಒಬ್ಬನೇ ಮಗ. ಮಗಳ ಮದುವೆಯಾಗಿದೆ. ತಂದೆಯಂತೆ ಮಗನಿಗೂ ದೇಶ ಸೇವೆಯ ಹಂಬಲ. ತಾನಾಗಿಯೇ ಸೈನ್ಯ ಸೇರಿದ್ದಾನೆ. ಪತಿ ಶ್ರೀಕಾಂತ ಸುತಾರ ನಿವೃತ್ತರಾದ ಮರುದಿನವೇ ಮಗನಿಗೆ ಏರ್‌ಫೋರ್ಸ್‌ನಲ್ಲಿ ಉದ್ಯೋಗದ ಆರ್ಡರ್ ಬಂತು. 2012ರಿಂದ ಲಕ್ನೋ, ಗೋರಖ್‌ಪುರ ಮೊದಲಾದ ಕಡೆ ಕೆಲಸ ಮಾಡಿ, ಈಗ ಜಮ್ಮುವಿನಲ್ಲಿದ್ದಾನೆ. ನನ್ನೊಂದಿಗೆ ಇಲ್ಲದಿದ್ದರೇನಂತೆ, ಭಾರತ ಮಾತೆ ರಕ್ಷಣೆಗಾಗಿ ಕಳುಹಿಸಿದ್ದೇವೆ’.
‘ಅಪ್ಪ– ಅಮ್ಮ, ಪತ್ನಿ ಕಡೆ ಯೋಚಿಸದೇ, ಸೈನ್ಯಕ್ಕೆ ಹೊರಟ ಆತನ ಧೈರ್ಯವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಸೊಸೆಯೂ ಸಹಕರಿಸಿದ್ದಾಳೆ. ಮಗ ಸುರಕ್ಷಿತವಾಗಿ ಬರಲೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ನಮ್ಮ ಸೈನಿಕರು ದಾಳಿ ನಡೆಸಿ, ಉಗ್ರರನ್ನು ಕೊಂದು ಬುದ್ಧಿ ಕಲಿಸಿದ್ದನ್ನು ಕಂಡು ಖುಷಿಯಾಯಿತು’ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.