ಕಲಬುರ್ಗಿ: ‘ಮಗ ಸೇನೆಗೆ ಸೇರಿ 17 ವರ್ಷಗಳಾಗಿವೆ. ನಮ್ಮ ಮನೆಯವರು (ಪತಿ) ಕೂಡ 32 ವರ್ಷ ಸೇನೆಯಲ್ಲಿದ್ದರು. ಮದುವೆಯಾದ ದಿನದಿಂದ ಇಂದಿನವರೆಗೂ ಆತಂಕದಲ್ಲೇ ಬದುಕು ಸಾಗಿದೆ....’
‘ನನಗೆ ಇಬ್ಬರು ಮಕ್ಕಳು. ಇಬ್ಬರದ್ದೂ ಮದುವೆಯಾಗಿದೆ. ಪತಿ ಏಳು ವರ್ಷಗಳ ಹಿಂದೆ ನಿಧನರಾದರು. ಅಂದಿನಿಂದ ಕುಟುಂಬಕ್ಕೆ ಸೇನೆಯಲ್ಲಿರುವ ಮಹದೇವನ ದುಡಿಮೆಯೇ ಆಧಾರ. ಪತಿ ವಿಠೋಬಾ ಅವರಲ್ಲಿ ದೇಶಪ್ರೇಮ ಉತ್ಕಟವಾಗಿತ್ತು. ಅವರ ನೆರಳಲ್ಲೇ ಬೆಳೆದ ಮಹದೇವ ಕೂಡ ಸೇನೆಯನ್ನು ಸೇರುವ ಇಂಗಿತ ವ್ಯಕ್ತಪಡಿಸಿದ. ಬೇಡವೆಂದರೂ ಕೇಳದೆ ಸೇನೆಗೆ ಸೇರಿದ’.
‘ಸದ್ಯ ಜಮ್ಮುವಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಆರು ತಿಂಗಳಿಗೆ ಒಮ್ಮೆ ಬಂದು ಹೋಗುತ್ತಾನೆ. ತಂದೆಯಂತೆ ಅವನಲ್ಲೂ ದೇಶಪ್ರೇಮ ರಕ್ತಗತವಾಗಿದೆ. ರಜೆ ಮುಗಿಸಿ ಆತ ಹೊರಟು ನಿಂತರೆ ಮನಸ್ಸು ಭಾರವಾಗುತ್ತದೆ. ಭಯ, ಆತಂಕ ಶುರುವಾಗುತ್ತದೆ. ಆದಾಗ್ಯೂ ಎಲ್ಲವನ್ನೂ ನುಂಗಿಕೊಂಡು ಪ್ರೀತಿಯಿಂದಲೇ ಹರಸಿ ಕಳುಹಿಸುತ್ತೇನೆ. ಮಗನಿಗೆ ಮದುವೆಯಾಗಿ ಆರು ತಿಂಗಳ ಮಗಳಿದ್ದಾಳೆ’.
‘ಕೆಲವೊಮ್ಮೆ ಇದ್ದಕ್ಕಿದ್ದಂತೆ ಮಗನ ನೆನಪಾಗುತ್ತದೆ. ಆತನಿಗೆ ಕರೆ ಮಾಡಿದರೆ ಎಷ್ಟೋ ಬಾರಿ ಸ್ವೀಕರಿಸುವುದಿಲ್ಲ. ಒಮ್ಮೊಮ್ಮೆ ನಾಟ್ ರೀಚೇಬಲ್ ಆಗಿರುತ್ತದೆ. ಒಂದೊಮ್ಮೆ ಕರೆ ಸ್ವೀಕರಿಸಿದರೂ ಆ ಬಳಿಕ ತಾನೇ ಮಾಡುವುದಾಗಿ ಹೇಳುತ್ತಾನೆ. ಅಂತಹ ಗಳಿಗೆಗಳಲ್ಲಿ ದುಃಖ ಉಮ್ಮಳಿಸಿ ಬರುತ್ತದೆ. ಇದನ್ನು ಯಾರಲ್ಲೂ ಹೇಳಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಅಳುವವರ ಮುಂದೆ ಅಳುತ್ತೇವೆ, ನಗುವವರ ಮುಂದೆ ನಗುತ್ತೇವೆ. ಇಷ್ಟೇಲ್ಲಾ ನೋವುಗಳ ನಡುವೆಯೂ ಮಗ ದೇಶ ಕಾಯಲು ಹೋಗಿದ್ದಾನೆ ಎಂಬ ಹೆಮ್ಮೆನಮ್ಮದು’ ಎಂದು ತಮ್ಮನ್ನು ತಾವೇ ಸಮಾಧಾನಗೊಳಿಸಿಕೊಳ್ಳುತ್ತಾರೆ ತಾಯಿ ರಮಲಾಬಾಯಿ ವಿಠೋಬಾ ಜಾಧವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.