ADVERTISEMENT

ತವರೂರಿನತ್ತ ಕಾರ್ಮಿಕರ ಹೆಜ್ಜೆ

ಲೈನ್‌ಮನೆಗಳು ಖಾಲಿ ಖಾಲಿ, ತುರ್ತು ಚಿಕಿತ್ಸೆಯ ರೋಗಿಗಳಿಗೂ ಸಂಕಷ್ಟ

ಆದಿತ್ಯ ಕೆ.ಎ
Published 28 ಆಗಸ್ಟ್ 2018, 19:30 IST
Last Updated 28 ಆಗಸ್ಟ್ 2018, 19:30 IST
ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಆಗಿರುವ ರಸ್ತೆಗಳಲ್ಲಿ ಜೆಸಿಬಿ ಬಳಸಿ ಮಣ್ಣು ತೆರವು ಮಾಡಲಾಗುತ್ತಿದೆ
ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಆಗಿರುವ ರಸ್ತೆಗಳಲ್ಲಿ ಜೆಸಿಬಿ ಬಳಸಿ ಮಣ್ಣು ತೆರವು ಮಾಡಲಾಗುತ್ತಿದೆ   

ಮಡಿಕೇರಿ: ಕೊಡಗಿನಲ್ಲಿ ಮಹಾಮಳೆ ಸೃಷ್ಟಿಸಿದ ಅನಾಹುತಕ್ಕೆ ಕೊನೆಯೇ ಇಲ್ಲವಾಗಿದೆ. ಕಾಫಿ ತೋಟಗಳಲ್ಲಿ ಕೂಲಿಮಾಡಿ ಬದುಕು ರೂಪಿಸಿಕೊಂಡಿದ್ದ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದು, ಭವಿಷ್ಯದ ಚಿಂತೆಯಲ್ಲಿದ್ದಾರೆ.

ಕೆಲಸ ಅರಸಿ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಗುಳೆ ಬಂದಿದ್ದ ಕಾರ್ಮಿಕರು ಭೂಕುಸಿತ, ಮಹಾಮಳೆಗೆ ನಲುಗಿದ್ದು, ತವರಿಗೆ ಮರಳುತ್ತಿದ್ದಾರೆ. ಸದಾ ಚಟುವಟಿಕೆಯ ತಾಣವಾಗಿರುತ್ತಿದ್ದ ಕಾಫಿ ತೋಟದ ‘ಲೈನ್‌ಮನೆ’ಗಳು ಈಗ
ಖಾಲಿ ಖಾಲಿ.

ಕಾಫಿ, ಕಾಳುಮೆಣಸು, ಏಲಕ್ಕಿ ಪ್ರಧಾನ ವಾಣಿಜ್ಯ ಬೆಳೆಗಳು. ಬಾಳೆಯೂ ರೈತರ ಬಾಳು ಬೆಳಗಿತ್ತು. ಗಾಳಿ, ಮಳೆಗೆ ಬಹುತೇಕ ಬೆಳೆಗಳು ನೆಲಕಚ್ಚಿವೆ. ಕೆಲಸಕೊಟ್ಟು, ಅನ್ನ ನೀಡಿ ಕಾರ್ಮಿಕರ ಬದುಕಿಗೆ ನೆರವಾಗುತ್ತಿದ್ದ ಮಾಲೀಕರೇ ಸಂಕಷ್ಟಕ್ಕೆ ಸಿಲುಕಿರುವುದು ಕಾರ್ಮಿಕರನ್ನೂ ಅತಂತ್ರರಾಗುವಂತೆ ಮಾಡಿದೆ.

ADVERTISEMENT

ನೆಲೆ ಕಳೆದುಕೊಂಡಿರುವ ಕೆಲವು ಕಾರ್ಮಿಕರು ಪರಿಹಾರ ಕೇಂದ್ರ ಸೇರಿದ್ದಾರೆ. ಮಕ್ಕಂದೂರು, ಇಗ್ಗೊಡ್ಲು, ತಂತಿಪಾಲ, ಮುಕ್ಕೋಡ್ಲು, ಹಮ್ಮಿಯಾಲ, ಗಾಳಿಬೀಡು, ಕಾಲೂರು, ಮಾಂದಲ್‌ಪಟ್ಟಿ, ಹೆಮ್ಮೆತಾಳ, ಮೊಣ್ಣಂಗೇರಿ ಭಾಗಗಳಲ್ಲಿ ಭೂಕುಸಿತದಿಂದ ತೋಟಗಳೇ ಸರ್ವನಾಶ ಆಗಿವೆ. ಎಸ್ಟೇಟ್‌ ಮಾಲೀಕರು ನೆಂಟರ ಮನೆ ಸೇರಿದ್ದಾರೆ.

ಕೆಲಸ ಸ್ಥಗಿತ: ಕಾಫಿ ತೋಟಗಳಲ್ಲಿ ವರ್ಷವಿಡೀ ಕೆಲಸ ಇರುತ್ತದೆ. ಕಳೆ ತೆಗೆಯುವುದು, ಕೀಟನಾಶಕ ಸಿಂಪಡಣೆ, ರಸಗೊಬ್ಬರ ಹಾಕುವುದು, ಕಾಫಿ ಕೊಯ್ಲು, ಮರ ಕಪಾತು – ಹೀಗೆ ಕಾರ್ಮಿಕರಿಗೆ ಕೈತುಂಬ ಕೆಲಸ. ಕಳೆದೆರಡು ತಿಂಗಳಿಂದ ವಿಪರೀತ ಮಳೆ; ತೋಟದಲ್ಲಿ ಮರಗಳೂ ಧರೆಗುರುಳುತ್ತಿದ್ದವು. ಹೀಗಾಗಿ, ಕೆಲಸವನ್ನೇ ನಿಲ್ಲಿಸಲಾಗಿತ್ತು. ತೋಟದ ಕೆಲಸ ಸ್ಥಗಿತವಾದರೆ ಗಿಡಗಳ ಸುಧಾರಣೆಗೆ ನಾಲ್ಕು ವರ್ಷವೇ ಬೇಕು ಎಂದು ಇಗ್ಗೊಡ್ಲು ಗ್ರಾಮದ ಕಾರ್ಯಪ್ಪ ತಮ್ಮ ತೋಟದ ಸ್ಥಿತಿ ಕಂಡು ಮರುಗಿದರು.

‘ನಾಲ್ಕು ವರ್ಷಗಳಿಂದ ಮಕ್ಕಂದೂರು ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದೆವು. ಮಳೆಗಾಲದಲ್ಲೂ ಕೆಲಸ ಇರುತಿತ್ತು. ಆದರೆ, ಈ ಬಾರಿ ಸಂಕಷ್ಟಕ್ಕೆ ಸಿಲುಕಿಕೊಂಡೆವು. ಊರಲ್ಲಿ ಬರ ಪರಿಸ್ಥಿತಿಯಿದ್ದ ಕಾರಣ ಇಲ್ಲಿಗೆ ಬಂದಿದ್ದೆವು. ಇಲ್ಲಿ ಹಣಕ್ಕೆ ಸಮಸ್ಯೆ ಆಗಿರಲಿಲ್ಲ. ಆದರೆ, ಈ ವರ್ಷ ತೋಟಗಳಲ್ಲಿ ಕೊಯ್ಲು ಮಾಡಲೂ ಕಾಫಿ ಹಣ್ಣು ಇಲ್ಲ. ಗಿಡಗಳು ಬರಿದಾಗಿವೆ. ಬೇಸಿಗೆಯಲ್ಲಿ ಕೂಲಿ ಕೆಲಸ ಸಿಗುವ ನಂಬಿಕೆಯೂ ಇಲ್ಲ’ ಎಂದು ದಾವಣಗೆರೆ ಜಿಲ್ಲೆ ಮಲೇಬೆನ್ನೂರಿಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಹೊರಟು ನಿಂತಿದ್ದ ಈರಯ್ಯ ಅಳಲು ತೋಡಿಕೊಂಡರು.

ನೂರಾರು ಚಾಲಕರ ಬದುಕು ಅತಂತ್ರ

ಮಡಿಕೇರಿ: ನೂರಾರು ಮಂದಿ ಬಾಡಿಗೆಯ ಜೀಪು, ಕಾರು ಓಡಿಸಿ ಬದುಕು ಸಾಗಿಸುತ್ತಿದ್ದರು. ಮಾಂದಲ್‌ಪಟ್ಟಿ, ಭಾಗಮಂಡಲ, ತಲಕಾವೇರಿ, ದುಬಾರೆ, ಹಾರಂಗಿ, ಮಲ್ಲಳ್ಳಿ, ಅಬ್ಬಿ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದರು. ಕಳೆದ 15 ದಿನಗಳಿಂದ ಜೀಪು ಚಾಲಕರ ಸುಳಿವಿಲ್ಲ.

ಕಾಲೂರು, ಜೋಡುಪಾಲ, ಗಾಳಿಬೀಡು, ಮದೆನಾಡು, ತಾಳತ್ತಮನೆ ಹಲವು ಯುವಕರು ಸಾಲ ‍ಪಡೆದು ಜೀಪು ಖರೀದಿಸಿದ್ದರು. ಈಗ ದಿಕ್ಕು ತೋಚದಾಗಿದೆ. ಚಾಲಕರಿಗೆ ಭವಿಷ್ಯದ ಚಿಂತೆ ಕಾಡುತ್ತಿದೆ.

ಉತ್ತಮ ಮಳೆ ಸುರಿಯುವ ನಿರೀಕ್ಷೆ

ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದ್ದು, ರಾಜ್ಯದ ಕರಾವಳಿ ಒಳನಾಡಿನಲ್ಲಿ ಸಾಧಾರಣ ಮಳೆ ಬಿದ್ದಿದೆ.

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.