ADVERTISEMENT

ವಿಶ್ವ ಪುಸ್ತಕ ದಿನ: ಪುಸ್ತಕಗಳ ಸಂಗ್ರಹ, ಮಹತ್ವ ತೆರೆದಿಟ್ಟ ಪುಸ್ತಕ ಪ್ರೇಮಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಏಪ್ರಿಲ್ 2020, 5:56 IST
Last Updated 23 ಏಪ್ರಿಲ್ 2020, 5:56 IST
ಪುಸ್ತಕ ಓದಿನಲ್ಲಿ ತಲ್ಲೀನರಾಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
ಪುಸ್ತಕ ಓದಿನಲ್ಲಿ ತಲ್ಲೀನರಾಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: 'ಪುಸ್ತಕದಷ್ಟು ನಂಬಿಕಸ್ತ ಸ್ನೇಹಿತ ಮತ್ತೊಬ್ಬನ್ನಿಲ್ಲ' ಎಂದು ಅರ್ನೆಸ್ಟ್ ಹೆಮಿಂಗ್‌ವೇ ಪುಸ್ತಕಗಳ ಮಹ್ವದ ಬಗ್ಗೆ ಹೇಳಿದರು. ಸ್ನೇಹಿತನಾಗಿ, ಜ್ಞಾನ ಭಂಡಾರವಾಗಿ, ಕಲ್ಪನೆಗಳಿಗೆ ರೆಕ್ಕೆಗಳನ್ನು ಮೂಡಿಸುವ ಮಾರ್ಗವಾಗಿ ಪುಸ್ತಕಗಳು ನಮ್ಮ ನಿತ್ಯ ಬದುಕಿನೊಂದಿಗೆ ಬೆರೆತು ಹೋಗಿವೆ. ಏಪ್ರಿಲ್‌ 23, ವಿಶ್ವ ಪುಸ್ತಕ ದಿನದಂದು ಜಗತ್ತಿನಾದ್ಯಂತ ಪುಸ್ತಕ ಪ್ರೇಮಿಗಳು ತಮ್ಮ ನೆಚ್ಚಿನ ಪುಸ್ತಕಗಳು, ತಮ್ಮಲ್ಲಿರುವ ಪುಸ್ತಕಗಳ ಸಂಗ್ರಹವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

1995ರಲ್ಲಿ ಯುನೆಸ್ಕೊ ಏಪ್ರಿಲ್‌ 23ರಂದು ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಪುಸ್ತಕ ದಿನ ಆಚರಿಸಲಾಗುತ್ತಿದೆ. ಇತಿಹಾಸ ಮತ್ತು ಭವಿಷ್ಯದ ನಡುವಿನ ಕೊಂಡಿಯಾಗಿ, ಸಂಸ್ಕೃತಿಗಳು ಹಾಗೂ ಪೀಳಿಗೆಗಳ ನಡುವಿನ ಸೇತುವೆಯಾಗಿ ಪುಸ್ತಕಗಳನ್ನು ಪರಿಗಣಿಸಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುಸ್ತಕ ಪ್ರೇಮಿಗಳಿಗೆ ವಿಶ್ವ ಪುಸ್ತಕ ದಿನದ ಶುಭಾಶಯಗಳನ್ನು ಕೋರಿ. ಓದುತ್ತಿರುವ ಪುಸ್ತಕ ಹಾಗೂ ಪುಸ್ತಕಗಳ ಸಂಗ್ರಹದ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

'ನನ್ನ ಮನೆಯಲ್ಲಿ ನನ್ನದೇ ಆದ ಪುಟ್ಟ ಖಾಸಗಿ ಲೈಬ್ರರಿ ಇದೆ. ನೂರಾರು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಸಂಗ್ರಹವಿದೆ. ಈಗ ನಾನು ಓದುತ್ತಿರುವುದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ A Life of Truth in Politics ಪುಸ್ತಕ. ಪುಸ್ತಕ ಮೇಳಗಳಿಗೆ ಹೋಗಿ ನನಗಿಷ್ಟವಾದ ಪುಸ್ತಕಗಳನ್ನು ಖರೀದಿಸುವ ಅಭ್ಯಾಸವೂ ಇದೆ. ಪುಸ್ತಕ ಓದಿದ ನಂತರ ಇಷ್ಟದ ಲೇಖಕರೊಂದಿಗೆ ಚರ್ಚಿಸುವ ಅಭ್ಯಾಸವೂ ಇದೆ. ಬೋಳುವಾರು ಮಹಮದ್ ಅವರ 'ಸ್ವಾತಂತ್ರ್ಯದ ಓಟ' ಕಾದಂಬರಿ ಓದಿದ ನಂತರ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದೆ. ಆರಂಭದಲ್ಲಿ ಅವರು ನಂಬಲು ಸಿದ್ಧರಿರಲಿಲ್ಲ...' ಎಂದು ಪ್ರಕಟಿಸಿಕೊಂಡಿದ್ದಾರೆ.

'ನನ್ನ ಇಡೀ ಬದುಕಿನಲ್ಲಿ ಪುಸ್ತಕಗಳು ಸಾಂತ್ವನದ ಮೂಲವಾಗಿದೆ. ಇಂದಿನ ರೀತಿ ಕಠಿಣ ಸಂದರ್ಭಗಳಲ್ಲಿ ಪುಸ್ತಕಗಳು ಏಕಾಂಗಿತನದ ಭಾವನೆಗಳನ್ನು ತೊಡೆದು ಹಾಕುತ್ತದೆ... ' ಎಂದು ವಿಶ್ವ ಸಂಸ್ಥೆಯ ಮುಖ್ಯಸ್ಥ ಆಂಟೊನಿಯೊ ಗುಟೆರೆಸ್‌ ಟ್ವೀಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.