ಉಡುಪಿ: 'ಮುಂದಿನ ಬಜೆಟ್ ಮಂಡಿಸುವಾಗ ಬಂಟರ ಅಭಿವೃದ್ದಿ ನಿಗಮ ಸ್ಥಾಪನೆಯನ್ನು ಘೋಷಣೆ ಮಾಡುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಇಲ್ಲಿನ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ಏರ್ಪಡಿಸಿದ್ದ ವಿಶ್ವ ಬಂಟರ ಸಮ್ಮೇಳನ 2023 ಅನ್ನು ತೆಂಗಿನ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಕರಾವಳಿ ಪ್ರದೇಶದಲ್ಲಿ ನೆಲೆಸಿದ್ದ ಬಂಟರು ಇತ್ತೀಚಿನ ವರ್ಷದಲ್ಲಿ, ಉದ್ಯಮ ಸ್ಥಾಪಿಸಲು ಹಾಗೂ ಉದ್ಯೋಗ ಹುಡುಕಿ ಜಗತ್ತಿನ ಬೇರೆ ಬೇರೆ ಭಾಗಗಳಿಗೆ ಹೋಗಿದ್ದಾರೆ. ಹಾಗಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಂಟ ಸಮುದಾಯದವರನ್ನು ಜಗತ್ತಿನ ಅನೇಕ ಪ್ರದೇಶಗಳಲ್ಲಿ ನೋಡಲು ಸಾಧ್ಯ' ಎಂದರು.
'ಬಂಟರದು ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆ ಹೊಂದಿದ ಸಮಾಜ. ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಶಿಕ್ಷಣ, ಉದ್ಯಮ, ಕ್ರೀಡೆ, ಹೋಟೆಲ್ ಹಾಗೂ ಇತರ ಉದ್ಯಮ, ಸಿನಿಮಾ ಕ್ಷೇತ್ರಗಳಲ್ಲಿ ಬಂಟ ಜನಾಂಗದ ಬಹಳಷ್ಟು ಸಾಧಕರನ್ನು ನೋಡಲು ಸಾಧ್ಯ. ಎಲ್ಲ ಕ್ಷೇತ್ರಗಳಲ್ಲೂ ಅವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ' ಎಂದರು.
'ಎಲ್ಲೇ ಹೋಗಿ ನೆಲೆಸಿದ್ದರೂ ಕರಾವಳಿಯ ಸಂಸ್ಕೃತಿ, ಪರಂಪರೆಯನ್ನು ಬಂಟರು ಮರೆತಿಲ್ಲ ಎಂಬುದು ಮುಖ್ಯ ಇಬ್ಬರು ಮಂಗಳೂರಿನವರು ಭೇಟಿಯಾದರೆ ತುಳುವಿನಲ್ಲೇ ಮಾತನಾಡುತ್ತಾರೆ. ಅಷ್ಟರ ಮಟ್ಟಿಗೆ ಭಾಷೆಯನ್ನು ಇಲ್ಲಿನವರು ಪ್ರೀತಿಸಿ ಗೌರವಿಸುತ್ತಾರೆ. ಪ್ರತಿಯೊಬ್ಬರೂ ಅವರ ಮಾತೃ ಭಾಷೆಯನ್ನು ಪ್ರೀತಿಸಿ ಗೌರವಿಸಬೇಕು. ಮಾತೃಭಾಷೆಗೆ ಮೊದಲ ಗೌರವ ಸಲ್ಲಬೇಕು' ಎಂದರು.
'ನಾವೆಲ್ಲರೂ ಕನ್ನಡಿಗರು. ಕನ್ನಡ ಭಾಷೆ ಸಂಸ್ಕೃತಿ ಪರಂಪರೆಯನ್ನು ಬೇರೆ ದೇಶಗಳಲ್ಲೂ ಬಿತ್ತಬೇಕು. ಬಂಟರು ಜಗತ್ತಿನ ವಿವಿಧ ಕಡೆ ಕನ್ನಡ ಸಂಘಟನೆಗಳನ್ನು ಕಟ್ಟಿಕೊಂಡು ಈ ನೆಲದ ಸಂಸ್ಕೃತಿ ಪರಂಪರೆ ಪಸರಿಸುತ್ತಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯ' ಎಂದರು.
'ಬಂಟರದು ಜಾತ್ಯತೀತ ಸಮುದಾಯ. ಜಾತಿ ಧರ್ಮ, ಭಾಷೆ ಎಂದು ತಾರತಮ್ಯ ಮಾಡದೆಯೇ ಎಲ್ಲರನ್ನೂ ಮನುಷ್ಯರಂತೆ ನೋಡುವ ಪ್ರವೃತ್ತಿ ಹೊಂದಿದವರು. ನಾವು ಮೊದಲು ಮನುಷ್ಯರನ್ಜು ಪ್ರೀತಿಸುವುದನ್ನು, ಗೌರವಿಸುವುದನ್ನು ಕಲಿತುಕೊಳ್ಳಬೇಕಿದೆ. ದ್ವೇಷಿಸುವ ಪ್ರವೃತ್ತಿ ಒಳ್ಳೆಯದಲ್ಲ. ಮನುಷ್ಯತ್ವ ಮೊದಲು, ಬದುಕು ಆಮೇಲೆ. ವಿಶ್ವಮಾನವರಾಗಿ ಹುಟ್ಟಿದವರು ಸಮಾಜದ ಪ್ರಭಾವದಿಂದ ಅಲ್ಪಮಾನವರಾಗುತ್ತಾರೆ ಎಂದು ಕುವೆಂಪು ಹೇಳಿದ್ದಾರೆ. ಎಲ್ಲರೂ ವಿಶ್ವಮಾನವರಾಗಲು ಸಾಧ್ಯ ಆಗದೇ ಇರಬಹುದು. ಆದರೆ ಆ ದಾರಿಯಲ್ಲಿ ಸಾಗಲು ಪ್ರಾಮಾಣಿಕ ಪ್ರಯತ್ನಮಾಡಬೇಕು. ಇದು ಅತ್ಯಂತ ಅವಶ್ಯ' ಎಂದರು.
'ಜಗತ್ತಿನ ಅನೇಕ ಭಾಗಗಳಲ್ಲಿ ಬದುಕು ನಡೆಸುವ ಬಂಟರ ಅಲ್ಲಿನ ಜನರ ಸ್ನೇಹ, ಪ್ರೀತಿ ಗಳಿಸಿದ್ದಾರೆ. ಇದೂ ನಿಮ್ಮ ಜಾತ್ಯತೀತ ವ್ಯಕ್ತಿತ್ವಕ್ಕೆ ಕನ್ನಡಿ. ಈ ಸಮ್ಮೇಳನದಲ್ಲಿ ಬಂಟರ ಅಭಿವೃದ್ಧಿ ಮತ್ತು ಸಂಘಟನೆ ಬಗ್ಗೆ ಚರ್ಚಿಸುವಾಗ ಇಂತಹ ವಿಚಾರಗಳ ಬಗ್ಗೆಯೂ ಚರ್ಚಿಸಿ' ಎಂದು ಸಲಹೆ ನೀಡಿದರು.
ಕರ್ನಾಟಕ ಸರ್ಕಾರ ಮತ್ತು ಕನ್ನಡ ಜನತೆ ಪರವಾಗಿ ಸಮ್ಮೇಳನದ ಯಶಸ್ಸಿಗೆ ಶುಭ ಹಾರೈಸುವುದಾಗ ಮುಖ್ಯಮಂತ್ರಿ ತಿಳಿಸಿದರು.
ತೆಂಗಿನ ಹಿಂಗಾರ ಅರಳಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 'ಬಂಟ ಸಮುದಾಯಕ್ಕೆ ಬಹಳಷ್ಟು ಹತ್ತಿರ ಆಗಿದ್ದೇನೆ. ಸಂಸ್ಕೃತಿ, ಕಲೆಯಲ್ಲಿ ನಿಮ್ಮ ಸಮಾಜಕ್ಕೆ ಇರುವ ಆಸಕ್ತಿ ನೋಡಿ ಮಂತ್ರಮುಗ್ಧಳಾಗಿದ್ದೇನೆ. ದೇಶಕ್ಕೆ ರಾಜ್ಯಕ್ಕೆ ಬಂಟರು ಗುರುತರ ಕಾಣಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ, ಕಲೆ, ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ವಿಶ್ವದಲ್ಲೇ ಬಂಟ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಶ್ಲಾಘನೀಯ' ಎಂದರು.
'ಹೃದಯ ಶ್ರೀಮಂತಿಕೆ ಮರೆವ, ಆತಿಥ್ಯಕ್ಕೆ ಹೆಸರಾದ ಸಮಾಜ ನಿಮ್ಮದು. ಹೊಟೆಲ್ ಉದ್ಯಮವನ್ನು ಯಶಸ್ವಿಯಾಗಿ ನಿರ್ವಹಿಸುವುದರಲ್ಲಿ ಬಂಟರು ನಿಸ್ಸೀಮರು. ಭಗವಂತನ ಕೃಪಾಶೀರ್ವಾದ ನಿಮ್ಮ ಮೇಲಿದೆ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡುತ್ತೀರಿ. ಎಲ್ಲರನ್ನು ಒಟ್ಟಿಗೆ ಕರೆದೊಯ್ತುತ್ತೀರಿ. ಸಮಾವೇಶದ ಉದ್ದೇಶ ಈಡೇರಲಿ' ಎಂದು ಹಾರೈಸಿದರು.
ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, 'ನಿಮ್ಮೆಲ್ಲರ ಸೋದರನಾಗಿ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದೇನೆ. ಬಂಟರ ಪ್ರೀತಿ ವಿಶ್ವಾಸಕ್ಕೆ ಕಟ್ಟುಬಿದ್ದು ಇಲ್ಲಿಗೆ ಬಂದಿದ್ದೇನೆ' ಎಂದರು..
'ಅಭಿವೃದ್ಧಿ ಹೊಂದಿದ ಕರ್ನಾಟಕ, ಬಲಿಷ್ಠ ಭಾರತ ನಿರ್ಮಾಣ ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಶೋಷಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರನ್ನು ಕೂಡಿಕೊಂಡು ಹೋಗುವ ಸಮಾಜ ಬಂಟರದು. ಕರಾವಳಿಯಲ್ಲಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ನಿಮ್ಮಲ್ಲಿದೆ ' ಎಂದರು.
ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ' ಬಂಟರ ಅಭಿವೃದ್ಧಿ ನಿಗಮ ಮಂಜೂರು ಮಾಡಬೇಕು' ಎಂದು ಕೋರಿದರು.
'ನೋಡಲಿಕ್ಕೆ ಬಂಟ ಸಮುದಾಯದಲ್ಲಿ ದೊಡ್ಡಜನರೇ ಇರುವಂತೆ ಕಾಣುತ್ತದೆ. ಸಮಾಜದಲ್ಲಿ ಶ್ರೀಮಂತರು ಶೇ. 20 ರಷ್ಟು ಇರಬಹುದು. ಶೇ 60 ಬಂಟರು ಬಡವರು. ಇಲ್ಲದವರಿಗೆ ಉಳ್ಳವರು ದೇಣಿಗೆ ನೀಡಿ, ಬಡವರನ್ನು ಮೇಲೆತ್ತುವ ಕೆಲಸಮಾಡುತ್ತಿದ್ದೇವೆ. ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಿದರೆ ಸಮಾಜದ ಬಡವರಿಗೆ ಅನುಕೂಲ ಆಗಲಿದೆ' ಎಂದರು.
'ಬಂಟರು ಎಲ್ಲ ಸಮಾಜದವರನ್ನು ಪ್ರೀತಿಸುವವರು. ನಮಗೆ ಎಲ್ಲ ಸಮಾಜದವರ ಪ್ರೀತಿ ಸಿಗುತ್ತಿದೆ. ವಾಲ್ಮೀಕಿ ಜಯಂತಿಯ ನಡುವೆಯೂ ಮುಖ್ಯಮಂತ್ರಿಯವರು ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅವರಿಗೆ ಧನ್ಯವಾದ' ಎಂದರು.
ಬಾರ್ಕೂರು ಭಾರ್ಗವ ಮಹಾಸಂಸ್ಥಾನದ ವಿಶ್ವ ಸಂತೋಷ ಭಾರತಿ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಶಾಸಕರಾದ ಯಶಪಾಲ್ ಸುವರ್ಣ, ಅಶೋಕ್ ಕುಮಾರ್ ರೈ, ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಉದ್ಯಮಿ ಕೆ.ಪ್ರಕಾಶ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ, ಪ್ರಧಾನ ಕಾರ್ಯದರ್ಶಿಮಿಥುನ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಉದ್ಯಮಿಗಳಾದ ಪಿ.ವಿ.ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ, ಪ್ರವೀಣ್ ಬೋಜ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಶಶಿಧರ ಶೆಟ್ಟಿ ಬರೋಡ, ವಕ್ವಾಡಿ ಪ್ರವೀಣ್ ಶೆಟ್ಟಿ, ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ಐವನ್ ಡಿಸೋಜ, ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ, ದೇವಿಪ್ರಸಾದ ಶೆಟ್ಟಿ ಮತ್ತಿತರರು ಇದ್ದರು. ಪ್ರಖ್ಯಾತ ಶೆಟ್ಟಿ ಪ್ರಾರ್ಥನೆ ಹಾಡಿದರು. ಒಕ್ಕೂಟದ ಅಧೀನದ 150 ಕ್ಕೂ ಹೆಚ್ಚು ಬಂಟರ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಿದ್ದರಾಮಯ್ಯ ಅವರಿಗೆ ಏಲಕ್ಕಿ ಮಾಲೆ, ಗುಲಾಬಿ ಬಣ್ಣದ ಪೇಟ ತೊಡಿಸಿ, ಬೆಳ್ಳಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ನಿಕಲೆಗ್ ಎನ್ನ ನಮಸ್ಕಾರ. ಎಂಚ ಉಲ್ಲರ್' ಎಂದು ತುಳುವಿನಲ್ಲಿ ಹೇಳುವ ಮೂಲಕ ಸಿದ್ದರಾಮಯ್ಯ ಭಾಷಣ ಆರಂಭಿಸಿದರು. ಅವರು ತುಳುವಿನಲ್ಲಿ ಮಾತನಾಡುವಾಗ ಸಭೆಯಲ್ಲಿ ಹರ್ಷೋದ್ಗಾರ ಮೊಳಗಿತು. ತುಳು ಬರಲ್ಲ ಬರೆದುಕೊಟ್ಟಿದ್ದಾರೆ ಎಂದಾಗ ಮತ್ತೆ ಚಪ್ಪಾಳೆಯ ಅಲೆ ಎದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.