ADVERTISEMENT

ವಿಶ್ವ ಅಂಗವಿಕಲರ ದಿನಾಚರಣೆ| ಕ್ರೀಡಾಂಗಣದಲ್ಲಿ ಮಕ್ಕಳ ಕಲರವ

ಅಂಗವಿಕಲರಿಗೆ ವಿಶೇಷ ಶಕ್ತಿಯಿದೆ, ಕೀಳರಿಮೆ ಬೇಡ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 19:38 IST
Last Updated 3 ಡಿಸೆಂಬರ್ 2022, 19:38 IST
ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಗಾಯನದ ಮೂಲಕ ರಂಜಿಸಿದ ಕಲಾವಿದರು
ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಗಾಯನದ ಮೂಲಕ ರಂಜಿಸಿದ ಕಲಾವಿದರು   

ಬೆಂಗಳೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ವಿಶ್ವ ವಿಕಲಚೇತನರ ದಿನಾಚರಣೆ’ಯಲ್ಲಿ ಅಂಗವಿಕಲ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ರಂಜಿಸಿತು.

ಅಂಗವಿಕಲ ಶಾಲೆಗಳ ಮಕ್ಕಳು ನೃತ್ಯದ ಮೂಲಕ ದಿನಾಚರಣೆಗೆ ಮೆರುಗು ನೀಡಿದರು.

ಮೈಸೂರಿನ ಡಾಟರ್‌ ಆಫ್‌ ಅವರ್‌ ಲೇಡಿ ಮರ್ಸಿ ಸಂಸ್ಥೆಯ ಶ್ರವಣದೋಷವುಳ್ಳ ಮಕ್ಕಳು ಯಶೋದಗಾಥೆ ನೃತ್ಯ ಪ್ರದರ್ಶಿಸಿದ್ದು ಆಕರ್ಷಕವಾಗಿತ್ತು.

ADVERTISEMENT

ರಮಣ ಮಹರ್ಷಿ ಅಂಧ ಮಕ್ಕಳ ಸಂಸ್ಥೆ, ಹ್ಯಾಂಡಿಕ್ಯಾಪ್ಡ್‌ ವೆಲ್‌ಫೇರ್‌ ಅಸೋಸಿಯೇಶನ್‌ ಸಂಸ್ಥೆ, ಮಾತೃ ಅಂಧರ ಸಂಸ್ಥೆಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಪ್ಪಾಳೆಯ ಪ್ರೋತ್ಸಾಹ ಸಿಕ್ಕಿತು.

ಒಳಾಂಗಣ ಕ್ರೀಡಾಂಗಣವು ಮಕ್ಕಳು, ಶಿಕ್ಷಕರು ಹಾಗೂ ಪೋಷಕರಿಂದ ಭರ್ತಿಯಾಗಿತ್ತು. ಕೈಪಿಡಿ, 2023ನೇ ಸಾಲಿನ ‘ಬ್ರೈಲ್‌ ಕ್ಯಾಲೆಂಡರ್‌’, ಸಾಧಕ ಅಂಗವಿಕಲರಿಗೆ ಸನ್ಮಾನ, ಮಹಿಳಾ ಅಂಧ ಕ್ರಿಕೆಟ್‌ ತಂಡದ ಆಟಗಾರರಿಗೆ ಅಭಿನಂದನೆ, ಸಾಧಕ ವಿಕಲಚೇತನ ಸಂಸ್ಥೆ, ವೈಯಕ್ತಿಕ ಹಾಗೂ ವಿಶೇಷ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಅಂಗವಿಕಲ ಮಕ್ಕಳು ಯಾರಿಗೂ ಕಡಿಮೆ ಇಲ್ಲ. ಕೀಳ
ರಿಮೆ ಬಿಟ್ಟು, ಸಾಧನೆ ಮಾಡಬೇಕು. ನೀವು ದೇವರ ಮಕ್ಕಳು. ಬೇರೆಯವರಿಗಿಂತಲೂ ಶಕ್ತಿಶಾಲಿಗಳು. ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ’ ಎಂದರು.

‘ಕೆಳಗೆ ಬೀಳುವ ವ್ಯಕ್ತಿಗಳ ಮೇಲಕ್ಕೆತ್ತುವುದೇ ಮಾನವ ಧರ್ಮ. ಪರಸ್ಪರ ಸಹಾಯದಿಂದ ಬದುಕು ನಡೆಸಬೇಕು’ ಎಂದರು.

‘ಸವಾಲು ಎದುರಿಸುವ ವಿಶೇಷ ಶಕ್ತಿ ಹಾಗೂ ಸ್ಥೈರ್ಯವನ್ನು ಅಂಗವಿಕಲರಿಗೆ ದೇವರು ನೀಡಿದ್ದಾನೆ. ಆತ್ಮವಿಶ್ವಾಸದಿಂದ ಇರಬೇಕು. ಛಲ ಮತ್ತು ನಂಬಿಕೆ ಇರಬೇಕು’ ಎಂದು ಹೇಳಿದರು.

ರಾಜ್ಯದಲ್ಲಿ ಅಂದಾಜು 50 ಲಕ್ಷದಷ್ಟು ಅಂಗವಿಕಲರಿದ್ದು, ಪ್ರತಿಯೊಬ್ಬ ಕನ್ನಡಿಗ ಅವರಿಗೆ ನೆರವು ನೀಡ
ಬೇಕು. ಈ ಮಕ್ಕಳನ್ನು ಬೆಳೆಸುವ ಪ್ರತಿಜ್ಞೆ ತೆಗೆದುಕೊಳ್ಳಬೇಕು’ ಎಂದರು.

ಸಚಿವ ಹಾಲಪ್ಪ ಆಚಾರ್‌ ಮಾತನಾಡಿ, ‘ಅಂಗವಿಕಲರಿಗೆ ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ನೆರವು ನೀಡಲಾಗುತ್ತಿದೆ. ಅವರಿಗೂ ಸಮಾನ ಅವಕಾಶಗಳು ಲಭಿಸಬೇಕು ಎಂಬುದು ಸರ್ಕಾರದ ಉದ್ದೇಶ’ ಎಂದರು.

ಶಾಸಕ ರಿಜ್ವಾನ್‌ ಅರ್ಷದ್‌ ಅವರು, ‘ಮನಸ್ಸಿನಲ್ಲಿ ಕೀಳರಿಮೆ ಬಿಡಬೇಕು. ಅಂಗವಿಕಲರದ್ದು ಹೋರಾಟದ ಬದುಕು. ಆತ್ಮವಿಶ್ವಾಸದಿಂದ ಬದುಕಿ. ಅಂಗವಿಕಲ ಮಕ್ಕಳಿಗೆ ನೆರವು ಕಲ್ಪಿಸುವುದು ಎಲ್ಲರ ಜವಾಬ್ದಾರಿ’ ಎಂದು ಸಲಹೆ ನೀಡಿದರು.

ಸಂಸದ ಪಿ.ಸಿ.ಮೋಹನ್‌, ಸಚಿವ ಆರ್‌.ಅಶೋಕ್‌ ಹಾಜರಿದ್ದರು.

ಸಾಧಕರಿಗೆ ಪ್ರಶಸ್ತಿ

ಚಿಕ್ಕಬಳ್ಳಾಪುರದ ವೆಂಕಟೇಶ್‌, ಚಿತ್ರದುರ್ಗದ ರಾಧಾ, ಬೆಂಗಳೂರಿನ ಕೆ.ಗೋಪಿನಾಥ್‌, ಶಿವಮೊಗ್ಗದ ಎಸ್‌.ಜ್ಯೋತಿ, ದಾವಣಗೆರೆಯ ಅನಿತಾ ಎಚ್‌. ಪಾಟೀಲ್‌, ಶಿವಮೊಗ್ಗದ ಸಿ.ಆರ್‌.ಶಿವಕುಮಾರ್‌, ಉಡುಪಿಯ ರಾಜಶೇಖರ್‌ ಪಿ. ಶಾಮರಾವ್, ಬಾಗಲಕೋಟೆಯ ಬಸವರಾಜ ತಮ್ಮಣ್ಣಪ್ಪ ಹೊರಡ್ಡಿ, ಧಾರವಾಡದ ನಿಧಿ ಶಿವರಾಮ ಸುಲ್ಲಾಖೆ, ಬೆಳಗಾವಿಯ ಸುರಜ, ಗದಗದ ತುಳಸಮ್ಮ ಜಿ. ಕೆಲೂರ, ಕೊಪ್ಪಳದ ಶಿವನಗೌಡ, ಕಲಬುರಗಿಯ ಸಿದ್ಧರಾಮ, ಕೊಪ್ಪಳದ ಸಿದ್ಧಲಿಂಗಮ್ಮ, ಬೀದರ್‌ ಬಾಬುರಾವ ಅವರಿಗೆ ವೈಯಕ್ತಿಕ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಸ್ತೆ, ವೃತ್ತಕ್ಕೆ ಅಂಗವಿಕಲ ಸಾಧಕರ ಹೆಸರಿಡಲು ಅಶ್ವಿನಿ ಅಂಗಡಿ ಆಗ್ರಹ

‘ರಸ್ತೆ, ಪ್ರಮುಖ ವೃತ್ತಕ್ಕೆ ಸಾಧಕರ ಹೆಸರು ಇಡಲಾಗುತ್ತಿದೆ. ಅದರಂತೆ ಸಾಧಕ ಅಂಗವಿಕಲರ ಹೆಸರನ್ನೂ ಪರಿಗಣಿಸಬೇಕು’ ಎಂದು ವಿಶ್ವಸಂಸ್ಥೆಯ ಯುವ ಸಾಧಕಿ ಪ್ರಶಸ್ತಿ ಪುರಸ್ಕೃತರಾದ ಅಶ್ವಿನಿ ಅಂಗಡಿ ಕೋರಿದರು.

ಬಸ್‌ನಿಲ್ದಾಣ, ಉದ್ಯಾನಗಳಲ್ಲಿ ಮಹಿಳೆ, ಪುರುಷರಿಗೆ ಪ್ರತ್ಯೇಕ ಶೌಚಾಲಯವಿದೆ. ಅದೇ ಅಂಗವಿಕಲರಿಗೆ ಅನುಕೂಲ ಆಗುವ ಶೈಲಿಯಲ್ಲಿ ಶೌಚಾಲಯ ನಿರ್ಮಿಸಬೇಕು ಎಂದು ಕೋರಿದರು.

‘ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಮ್ಮೆಯಿದೆ. ಅನುಕಂಪದ ಬದಲಿಗೆ ಅವಕಾಶ ನೀಡಿದ್ದಕ್ಕೆ ಲಂಡನ್‌ಗೂ ತೆರಳಲು ಸಾಧ್ಯವಾಗಿತ್ತು. ದುಬೈನಲ್ಲಿ ನಡೆದಿದ್ದ ಸಮ್ಮೇಳನದಲ್ಲಿ 104 ದೇಶಗಳ ಪ್ರತಿನಿಧಿಗಳಿಂದ ಮೆಚ್ಚುಗೆ ಗಳಿಸಿದ್ದೆ. ಬೇರೆ ರಾಜ್ಯಕ್ಕಿಂತ ಕರ್ನಾಟಕದಲ್ಲಿ ಅಂಗವಿಕಲ ಮಕ್ಕಳಿಗೆ ಹೆಚ್ಚಿನ ಸೌಲಭ್ಯಗಳಿದ್ದು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.