ADVERTISEMENT

World Heart Day | ಸಾರ್ವಜನಿಕ ಸ್ಥಳದಲ್ಲೂ ಹೃದಯ ಚಿಕಿತ್ಸೆ

ಎಇಡಿ ಸಾಧನ ಖರೀದಿ ಪ್ರಕ್ರಿಯೆ ನಡೆಸುತ್ತಿರುವ ಆರೋಗ್ಯ ಇಲಾಖೆ * ಸಿಬ್ಬಂದಿಗೆ ನಿರ್ವಹಣೆ ಬಗ್ಗೆ ತರಬೇತಿ

ವರುಣ ಹೆಗಡೆ
Published 29 ಸೆಪ್ಟೆಂಬರ್ 2023, 0:30 IST
Last Updated 29 ಸೆಪ್ಟೆಂಬರ್ 2023, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಹಠಾತ್ ಹೃದಯಾಘಾತದಿಂದ ಸಂಭವಿಸುತ್ತಿರುವ ಮರಣಗಳನ್ನು ತಡೆಯಲು ಮುಂದಾಗಿರುವ ಆರೋಗ್ಯ ಇಲಾಖೆ, ರಾಜ್ಯದಾದ್ಯಂತ ಬಸ್ ನಿಲ್ದಾಣಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿಯೂ ‘ಆಟೊಮೇಟೆಡ್ ಎಕ್ಸ್‌ಟರ್ನಲ್ ಡಿಫೈಬ್ರಿಲ್ಲೇಟರ್ಸ್’ (ಎಇಡಿ) ಸಾಧನಗಳನ್ನು ಶೀಘ್ರದಲ್ಲಿಯೇ ಅಳವಡಿಸಲಿದೆ. 

ವ್ಯಕ್ತಿಗೆ ಹೃದಯಾಘಾತವಾದ 90 ನಿಮಿಷಗಳಲ್ಲಿ ತುರ್ತು ಚಿಕಿತ್ಸೆ ಅಗತ್ಯ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 96 ಸಾವಿರ ಮಂದಿ ಹಠಾತ್ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಆದ್ದರಿಂದ ಹೃದಯಾಘಾತ ಸಂಭವಿಸಿದ ನಿಗದಿತ ಅವಧಿಯೊಳಗೆ ಚಿಕಿತ್ಸೆ ಒದಗಿಸಲು ‘ಸ್ಟೆಮಿ’ (ಹೃದಯ ಸ್ನಾಯುವಿನ ಸೋಂಕು ನಿವಾರಣೆ) ಯೋಜನೆ ಜಾರಿಗೊಳಿಸಿರುವ ಇಲಾಖೆ, ಈ ಯೋಜನೆಯಡಿ ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ನ್ಯಾಯಾಲಯ, ಶಾಪಿಂಗ್ ಮಾಲ್‌ಗಳು ಸೇರಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ ಸಾಧನ ಅಳವಡಿಸಲು ಮುಂದಾಗಿದೆ. ಈ ಸಾಧನ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ನಿಗದಿತ ಸ್ಥಳದಲ್ಲಿನ ಸಿಬ್ಬಂದಿಗೆ ಸಾಧನಗಳ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗುತ್ತದೆ. 

ADVERTISEMENT

‘ಸ್ಟೆಮಿ’ ಯೋಜನೆಯಡಿ ಮೊದಲ ಹಂತದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಘಟಕವನ್ನು ಕಾರ್ಯಾಚರಣೆಯ ಕೇಂದ್ರಗಳನ್ನಾಗಿ ಬಳಸಿಕೊಂಡು, ಆಸ್ಪತ್ರೆಗಳಲ್ಲಿ ಸೇವೆ ನೀಡಲಾಗುತ್ತಿದೆ. ಸದ್ಯ10 ಜಿಲ್ಲಾ ಆಸ್ಪತ್ರೆಗಳು, 24 ತಾಲ್ಲೂಕು ಆಸ್ಪತ್ರೆಗಳು, 10 ಜನರಲ್ ಆಸ್ಪತ್ರೆಗಳು ಮತ್ತು ಒಂದು ಉಪ ಜಿಲ್ಲಾ ಆಸ್ಪತ್ರೆ ಸ್ಪೋಕ್ (ಜಾಲ) ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಈ ಆಸ್ಪತ್ರೆಗಳಲ್ಲಿ ಎಇಡಿ ಸಾಧನ ಸೇರಿ ಸ್ಟೆಮಿ ಕಿಟ್‌ ಅಳವಡಿಸಲಾಗಿದೆ. ನಿಂತು ಹೋದ ಎದೆ ಬಡಿತವನ್ನು ಪುನರಾರಂಭಿಸಲು ಇದು ಸಹಕಾರಿಯಾಗಲಿದೆ. ಯೋಜನೆಯಡಿ ಎದೆನೋವು ಕಾಣಿಸಿಕೊಂಡ 56,484 ಮಂದಿಗೆ ಹಾಗೂ ಹೃದಯಾಘಾತಕ್ಕೆ ಒಳಗಾದ 877 ಮಂದಿಗೆ ಚಿಕಿತ್ಸೆ ಒದಗಿಸಲಾಗಿದೆ. 

ಎರಡನೇ ಹಂತದಲ್ಲಿ ಅಳವಡಿಕೆ: ಯೋಜನೆಯಡಿ ಎರಡನೇ ಹಂತದಲ್ಲಿ 41 ಆಸ್ಪತ್ರೆಗಳು ಸೇರ್ಪಡೆಯಾಗಲಿವೆ. ಈ ಹಂತದಲ್ಲಿಯೇ ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ ಸಾಧನ ಅಳವಡಿಕೆ ಮಾಡಲಾಗುತ್ತದೆ. ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ತಕ್ಷಣ ಈ ಸಾಧನದ ಮೂಲಕ ತುರ್ತು ಚಿಕಿತ್ಸೆ ನೀಡಿ, ಪ್ರಕರಣದ ಗಂಭೀರತೆ ಆಧಾರದಲ್ಲಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ₹ 5 ಕೋಟಿಗೆ ಅನುಮೋದನೆ ದೊರೆತಿದೆ. ವ್ಯಕ್ತಿಗೆ ತಲಾ ₹ 25 ಸಾವಿರ ಮೌಲ್ಯದ ಚುಚ್ಚುಮದ್ದುಗಳನ್ನೂ ಉಚಿತವಾಗಿ ಯೋಜನೆಯಡಿ ಬರುವ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತದೆ. ‌

‘ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಸ್ ನಿಲ್ದಾಣಗಳು ಸೇರಿ ವಿವಿಧೆಡೆ ಎಇಡಿ ಸಾಧನ ಅಳವಡಿಸಲಾಗುತ್ತದೆ. ಅಲ್ಲಿನ ಸಿಬ್ಬಂದಿ ಸಾಧನ ನಿರ್ವಹಿಸುತ್ತಾರೆ. ಜೀವಸಾರ್ಥಕತೆ ಸಂಸ್ಥೆ ಮೂಲಕ ತರಬೇತಿ ನೀಡಲಾಗುತ್ತದೆ. ಮುಂದಿನ ತಿಂಗಳು ತರಬೇತಿ ಪ್ರಾರಂಭವಾಗುವ ಸಾಧ್ಯತೆಯಿದೆ’ ಎಂದು ಇಲಾಖೆಯ ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪನಿರ್ದೇಶಕ ಡಾ.ಜಿ. ಶ್ರೀನಿವಾಸ್ ತಿಳಿಸಿದರು.

ಹಠಾತ್ ಹೃದಯಾಘಾತಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆ ಒದಗಿಸಲು ಸಾರ್ವಜನಿಕ ಸ್ಥಳಗಳಲ್ಲಿಯೂ ಎಇಡಿ ಸಾಧನ ಅಳವಡಿಸಲಾಗುವುದು. ಹೆಚ್ಚಿನ ಚಿಕಿತ್ಸೆಯನ್ನು ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತದೆ.

-ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

20 ಮಂದಿ ಹೃದಯ ದಾನ

ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಸೊಟ್ಟೊ) ಅಡಿ ಅಂಗಾಂಗ ವೈಫಲ್ಯಕ್ಕೆ ಒಳಗಾದವರಿಗೆ ಅಂಗಾಂಗ ಒದಗಿಸಲಾಗುತ್ತಿದೆ. ಸಂಸ್ಥೆಯು ಈ ವರ್ಷ ಮಿದುಳು ನಿಷ್ಕ್ರಿಯಗೊಂಡವರಲ್ಲಿ 134 ದಾನಿಗಳಿಂದ 347 ಅಂಗಾಂಗಗಳನ್ನು ಸಂಗ್ರಹಿಸಿದೆ. 20 ಮಂದಿ ಮಾತ್ರ ಹೃದಯ ದಾನ ಮಾಡಿದ್ದಾರೆ. ಕಳೆದ ವರ್ಷ 151 ಮಂದಿಯಿಂದ 403 ಅಂಗಾಂಗಗಳನ್ನು ಸಂಗ್ರಹಿಸಲಾಗಿತ್ತು. 38 ಮಂದಿಯಿಂದ ಹೃದಯವನ್ನು ದಾನವಾಗಿ ಪಡೆಯಲಾಗಿತ್ತು.

ಹೃದಯಾಘಾತಕ್ಕೆ ಕಾರಣಗಳು

*ಅನಾರೋಗ್ಯಕರ ಆಹಾರ ಪದ್ಧತಿ

*ಜೀವನಶೈಲಿಯಲ್ಲಿನ ಬದಲಾವಣೆ

*ಮದ್ಯಪಾನ ಧೂಮಪಾನದಂತಹ ವ್ಯಸನ

*ಮಾನಸಿಕ ಒತ್ತಡ

*ಪರಿಸರದಲ್ಲಿನ ಮಾಲಿನ್ಯ ಹೃದಯಾಘಾತದ ಲಕ್ಷಣಗಳು

*ಹಠಾತ್ ಎದೆನೋವು ಉಸಿರಾಟದಲ್ಲಿ ತೊಂದರೆ

*ಅತಿಯಾದ ಬೆವರು

*ಅಜೀರ್ಣ ವಾಂತಿ

*ಹಸಿವಾಗದಿರುವುದು

*ದವಡೆಯಲ್ಲಿ ನೋವು 

*ನಿದ್ರಾಹೀನತೆ ಸಮಸ್ಯೆ 

*ತಾತ್ಕಾಲಿಕ ಪ್ರಜ್ಞಾಹೀನತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.