ADVERTISEMENT

ವಿಶ್ವ ಅಂಗಾಂಗ ದಿನ: ಮೂತ್ರಪಿಂಡಕ್ಕಾಗಿ 4,388 ಮಂದಿ ನೋಂದಣಿ

ವಿಶ್ವ ಅಂಗಾಂಗ ದಿನದ ಪ್ರಯುಕ್ತ ಆರೋಗ್ಯ ಇಲಾಖೆಯಿಂದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 21:23 IST
Last Updated 12 ಆಗಸ್ಟ್ 2022, 21:23 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಬೆಂಗಳೂರು: ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯಡಿ (ಸೊಟ್ಟೊ) ರಾಜ್ಯದಲ್ಲಿ ಮೂತ್ರಪಿಂಡಕ್ಕೆ 4,388 ಹಾಗೂ ಯಕೃತ್ತಿಗಾಗಿ 1,153 ಮಂದಿ ಹೆಸರು ನೋಂದಾಯಿಸಿ, ಅಂಗಾಂಗಕ್ಕಾಗಿ ಎದುರು ನೋಡುತ್ತಿದ್ದಾರೆ.

ವಿಶ್ವ ಅಂಗಾಂಗ ದಾನದ ಪ್ರಯುಕ್ತ ಆರೋಗ್ಯ ಇಲಾಖೆಯು ಶನಿವಾರ ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಈ ಮೊದಲು ಜೀವಸಾರ್ಥಕತೆ ಹೆಸರಿನಿಂದ ನೋಂದಾಯಿಸಲಾಗಿದ್ದ ಸೊಟ್ಟೊ, ಅಂಗಾಂಗ ದಾನಕ್ಕೆ ಉತ್ತೇಜನ ನೀಡುವುದು ಹಾಗೂ ಮೃತ ದಾನಿಗಳಿಂದ ಅಂಗಾಂಗ ಒದಗಿಸುವ ಕಾರ್ಯವನ್ನು ಮಾಡುತ್ತಿದೆ.

ಅಂತಿಮ ಹಂತದ ಅಂಗಾಂಗ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಂಸ್ಥೆ ನೆರವಾಗುತ್ತಿದೆ. ಈ ಸಂಸ್ಥೆಯಡಿ ಹೃದಯಕ್ಕಾಗಿ 92 ಮಂದಿ, ಶ್ವಾಸಕೋಶಕ್ಕಾಗಿ 36 ಮಂದಿ, ಹೃದಯ ಮತ್ತು ಶ್ವಾಸಕೋಶಕ್ಕೆ 22 ಮಂದಿ, ಯಕೃತ್ತು ಮತ್ತು ಮೂತ್ರಪಿಂಡಕ್ಕೆ 31 ಮಂದಿ, ಮೂತ್ರಪಿಂಡ ಹಾಗೂ ಮೇದೋಜೀರಕ ಗ್ರಂಥಿಗೆ 17 ಮಂದಿ ಹೆಸರು ನೋಂದಾಯಿಸಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ADVERTISEMENT

ಕೋವಿಡ್‌ನಿಂದಾಗಿ 2020ರಲ್ಲಿ 35 ಮಂದಿ ಮಾತ್ರ ಅಂಗಾಂಗ ದಾನ ಮಾಡಿದ್ದರು. 2021ರಲ್ಲಿ ಈ ಸಂಖ್ಯೆ 70ಕ್ಕೆ ಏರಿಕೆಯಾಗಿತ್ತು. ಈ ವರ್ಷ 81 ಮಂದಿ ಅಂಗಾಂಗಗಳನ್ನು ನೀಡಿದ್ದಾರೆ. ಆರು ವರ್ಷಗಳಲ್ಲಿ 448 ಮಂದಿ ಅಂಗಾಂಗ ದಾನ ಮಾಡಿದ್ದಾರೆ. 662 ಮೂತ್ರಪಿಂಡ, 374 ಯಕೃತ್ತು, 133 ಹೃದಯ ಪಡೆದು, ನೋಂದಾಯಿತ ರೋಗಿಗಳಿಗೆ ಒದಗಿಸಲಾಗಿದೆ.

ಮಿದುಳು ನಿಷ್ಕ್ರಿಯಗೊಂಡ ಬಳಿಕ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಅಂಗಾಂಗವನ್ನು ದಾನವಾಗಿ ಪಡೆಯಲಾಗುತ್ತದೆ. ಅಂಗಾಂಗ ದಾನಕ್ಕೆ ವಯಸ್ಸಿನ ಮಿತಿಯಿಲ್ಲ. ಒಬ್ಬ ದಾನಿಯು 8 ಜೀವಗಳನ್ನು ಉಳಿಸಬಹುದು. ಹೃದಯ, ಎರಡು ಮೂತ್ರಪಿಂಡಗಳು, ಪಿತ್ತಜನ
ಕಾಂಗ, ಮೇದೋಜೀರಕ ಗ್ರಂಥಿ, ಸಣ್ಣ ಕರುಳು ಮತ್ತು ಶ್ವಾಸಕೋಶಗಳನ್ನು ದಾನ ಮಾಡಬಹುದು. ಅದೇ ದಾನಿ ಅಂಗಾಂಶ ದಾನದ ಮೂಲಕ 50ಕ್ಕೂ ಹೆಚ್ಚು ಜನರಿಗೆ ನೆರವಾಗಬಹುದು. ಚರ್ಮ, ಮೂಳೆಗಳು, ಅಸ್ಥಿರಜ್ಜುಗಳು, ಹೃದಯದ ಕವಾಟಗಳು ಮತ್ತು ಕಾರ್ನಿಯಾಗಳನ್ನು ದಾನ ಮಾಡಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.