ADVERTISEMENT

ಕನ್ನಡ ನಾಡಿನ ಗಟ್ಟಿ ದನಿ ಚಂಪಾ: ಡಾ. ಗೊ.ರು. ಚನ್ನಬಸಪ್ಪ

ನುಡಿನ ನಮನ ಕಾರ್ಯಕ್ರಮ– ಸಮಗ್ರ ಸಾಹಿತ್ಯ ಸಂಪುಟ ಪ್ರಕಟಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 5:29 IST
Last Updated 24 ಜನವರಿ 2022, 5:29 IST
ಪ್ರೊ. ಚಂದ್ರಶೇಖರ ಪಾಟೀಲ ಅವರ ಭಾವಚಿತ್ರಕ್ಕೆ ಅಖಿಲ ಭಾರತ ಶರಣ ಸಾಹಿತ್ ಪರಿಷತ್‌ ಗೌರವ ಸಲಹೆಗಾರ ಡಾ. ಗೊ.ರು. ಚನ್ನಬಸಪ್ಪ ಪುಷ್ಪ ನಮನ ಸಲ್ಲಿಸಿದರು
ಪ್ರೊ. ಚಂದ್ರಶೇಖರ ಪಾಟೀಲ ಅವರ ಭಾವಚಿತ್ರಕ್ಕೆ ಅಖಿಲ ಭಾರತ ಶರಣ ಸಾಹಿತ್ ಪರಿಷತ್‌ ಗೌರವ ಸಲಹೆಗಾರ ಡಾ. ಗೊ.ರು. ಚನ್ನಬಸಪ್ಪ ಪುಷ್ಪ ನಮನ ಸಲ್ಲಿಸಿದರು   

ಬೆಂಗಳೂರು: 'ಕನ್ನಡ ನಾಡಿನ ದಿಟ್ಟ ಮತ್ತು ಗಟ್ಟಿ ದನಿಯಾಗಿದ್ದ ಚಂಪಾ ಅವರ ಬದುಕು ಬಂಡಾಯದಿಂದ ಕೂಡಿತ್ತು‘ ಎಂದು ಅಖಿಲ ಭಾರತ ಶರಣ ಸಾಹಿತ್ ಪರಿಷತ್‌ನ ಗೌರವ ಸಲಹೆಗಾರ ಡಾ. ಗೊ.ರು. ಚನ್ನಬಸಪ್ಪ ಸ್ಮರಿಸಿದರು.

ಬೆಂಗಳೂರು ನಗರ ಜಿಲ್ಲೆ ಶರಣ ಸಾಹಿತ್ಯ ಪರಿಷತ್‌ ಮತ್ತು ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನ ಲಂಡನ್‌ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪ್ರೊ. ಚಂದ್ರಶೇಖರ ಪಾಟೀಲ ಅವರ ನುಡಿ–ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ’ಚಂಪಾ ಅವರ ಸಮಗ್ರ ಸಾಹಿತ್ಯ ಸಂಪುಟವನ್ನು ಪ್ರಕಟಿಸಬೇಕು‘ ಎಂದು ಹೇಳಿದರು.

’ಚಂಪಾ ಮಾತು ತೀಕ್ಷ್ಣ ಮತ್ತು ಹಾಸ್ಯದಿಂದ ಕೂಡಿರುತ್ತಿದ್ದವು. ಜತೆಗೆ, ಉಲ್ಲಾಸದಿಂದ ಕೂಡಿರುತ್ತಿದ್ದವು. ವ್ಯವಸ್ಥೆ ಸುಧಾರಣೆಯಾಗಬೇಕು ಎನ್ನುವ ಬಗ್ಗೆ ಕಾಳಜಿ ಇತ್ತು. ಕಟುವಾದರೂ ಸತ್ಯವಾದನ್ನು ಹೇಳಿ ಜನರ ಅಭಿಮಾನಕ್ಕೆ ಪಾತ್ರರಾಗಿದ್ದರು‘ ಎಂದು ನೆನಪಿಸಿಕೊಂಡರು.

ADVERTISEMENT

’ಚಂಪಾ ಅವರನ್ನು ಹಲವರು ಧರ್ಮ ವಿರೋಧಿ ಎಂದು ಬಿಂಬಿಸಿದ್ದರು. ಆದರೆ, ಅವರು ಪುರೋಹಿತಶಾಹಿ ವ್ಯವಸ್ಥೆ ಹೊಂದಿರುವ ಮತ್ತು ಅರ್ಥ ಇಲ್ಲದ ಆಚರಣೆಗಳಿರುವ ಧರ್ಮವನ್ನು ವಿರೋಧಿಸಿದ್ದರು. ಜೀವನ ಧರ್ಮವನ್ನು ಅವರು ಸದಾ ಪ್ರೀತಿಸುತ್ತಿದ್ದರು‘ ಎಂದು ನುಡಿದರು.

ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಮಾತನಾಡಿ, ‘ರಾಜಕೀಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪಲ್ಲಟಗಳಿಗೆ ಚಂಪಾ ಸದಾ ಪ್ರತಿಕ್ರಿಯಿಸುತ್ತಿದ್ದರು. ಪರಂಪರೆ ಕಟ್ಟಿದ ಚೇತನ ಚಂಪಾ ಅವರು, ಪಾಠ ಮಾಡಿದ್ದು ಇಂಗ್ಲಿಷ್‌ನಲ್ಲಿ. ಆದರೆ ಬರೆದಿದ್ದು ಕನ್ನಡ ಸಾಹಿತ್ಯ‘ ಎಂದು ನೆನಪಿಸಿಕೊಂಡರು.

’ಚಂಪಾ ಅವರಲ್ಲಿ ಜಗಳಗಂಟ ಗುಣವಿತ್ತು. ಹಲವಾರು ಸಾಹಿತಿಗಳ ಜತೆ ಜಗಳವಾಡಿದ್ದಾರೆ. ಈ ಜಗಳದ ಹಿಂದೆ ಪ್ರೀತಿ ಇತ್ತೇ ಹೊರತು ದ್ವೇಷ ಇರಲಿಲ್ಲ‘ ಎಂದು ಹೇಳಿದರು.

’ನಿಮ್ಮ ಪಾದದ ದೂಳಿ ಹಣೆಯ ಮೇಲಿರಲಿ. ಆದರೆ, ಕಣ್ಣಿನಲ್ಲಿ ಬೀಳದಿರಲಿ ಎಂದು ಬೇಂದ್ರೆ ಅವರ ಕುರಿತು ಚಂಪಾ ಬರೆದಿದ್ದರು. ಇದು ಹಿರಿಯರ ಬಗ್ಗೆ ಅವರ ಹೊಂದಿದ್ದ ಗೌರವವಾಗಿತ್ತು. ಜತೆಗೆ, ಹಿರಿಯರು ಹೇಳಿದ್ದೆಲ್ಲವೂ ಶ್ರೇಷ್ಠವಲ್ಲ ಎನ್ನುವುದನ್ನು ಸಹ ಬಿಂಬಿಸುತ್ತಿತ್ತು‘ ಎಂದು ನೆನಪಿಸಿದರು.

ಪತ್ರಕರ್ತ ಜಿ.ಎನ್‌. ಮೋಹನ್‌ ಮಾತನಾಡಿ, ’ಚಂಪಾ ಅವರಲ್ಲಿ ಪ್ರತಿಭಟನಾ ಗುಣವಿತ್ತು. ಮನುಷ್ಯನಲ್ಲಿ ಜಗಳಗಂಟ ಗುಣ ಇಲ್ಲದಿದ್ದರೆ ಅಪ್ರಸ್ತುತವಾಗಬಹುದು. ಇಂದು ಸಾಹಿತ್ಯ ಲೋಕಕ್ಕೆ ಜಗಳಗಂಟತನ ಶೂನ್ಯ ಆವರಿಸಿಕೊಂಡಿದೆ‘ ಎಂದರು.

ರಂಗಕರ್ಮಿ ಕೆ.ವಿ. ನಾಗರಾಜಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.