ADVERTISEMENT

‘ಕೆ.ಎಸ್‌.ಈಶ್ವರಪ್ಪನವರ ಹೋರಾಟ ರಾಜಕೀಯವಲ್ಲವೆ?’

ಈಶ್ವರಾನಂದಪುರಿ ಸ್ವಾಮೀಜಿಗೆ ಸಾಹಿತಿಗಳು, ಬರಹಗಾರರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:59 IST
Last Updated 31 ಡಿಸೆಂಬರ್ 2020, 19:59 IST
ಕೆ.ಎಸ್‌. ಈಶ್ವರಪ್ಪ
ಕೆ.ಎಸ್‌. ಈಶ್ವರಪ್ಪ   

ಬೆಂಗಳೂರು: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಹಿರಿಯ ನಾಯಕರು ಮತ್ತು ರಾಜ್ಯದ ಪ್ರಭಾವಿ ಸಚಿವರೂ ಆಗಿರುವ ಕೆ.ಎಸ್‌. ಈಶ್ವರಪ್ಪ ಅವರೇ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ಎಸ್‌.ಟಿ.) ಪಟ್ಟಿಗೆ ಸೇರಿಸುವಂತೆ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ರಾಜಕೀಯ ಅಲ್ಲವೆ ಎಂದು ಪ್ರೊ. ಎಸ್‌.ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್ ಮತ್ತಿತರ ಸಾಹಿತಿಗಳು, ಬರಹಗಾರರು ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಪ್ರಶ್ನಿಸಿದ್ದಾರೆ.

‘ನಮಗೆ ಸಮಾಜ ಮುಖ್ಯ, ರಾಜಕೀಯ ಮುಖ್ಯವಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ಹಿಂದೆ ರಾಜಕೀಯವಾಗಿ ನಿರ್ಲಕ್ಷ್ಯಕ್ಕೆ ಒಳಗಾದಾಗ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣನ ಹೆಸರನ್ನು ಬಳಸಿಕೊಂಡು ‘ಬ್ರಿಗೇಡ್’ ಕಟ್ಟಿದ್ದರು. ಈಗ ಕುರುಬ ಸಮುದಾಯದ ಎಚ್‌. ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್‌ ಮಂತ್ರಿ ಸ್ಥಾನಕ್ಕೆ ಗೋಗರೆಯುತ್ತಿದ್ದಾರೆ. ಈ ಬಗ್ಗೆ ಸ್ವಾಮೀಜಿ ಏಕೆ ದನಿ ಎತ್ತುತ್ತಿಲ್ಲ? ರಾಜಕೀಯ ಬೇಡವೆಂದೇ’ ಎಂದು ಕೇಳಿದ್ದಾರೆ.

ಹಿಂದುಳಿದ ವರ್ಗಗಳ ಜನರಿಗೆ ಮೀಸಲಾತಿ ನೀಡುವ ಮಂಡಲ್‌ ವರದಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್ ಯಾವ ಪಕ್ಷದವರು? ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಘೋಷಿ
ಸಿದ್ದ ಜಾತಿ ಗಣತಿಯನ್ನು ಮೂಲೆಗೆ ತಳ್ಳಿದ್ದು ಯಾವ ಪಕ್ಷದವರು? ಈಗ ಸಿದ್ಧವಾಗಿರುವ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡದಂತೆ ತಡೆಯುತ್ತಿರುವವರು ಯಾವ ಪಕ್ಷದವರು ಎಂದು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ADVERTISEMENT

‘ರಾಜಕೀಯವಾಗಿ ಬಲಿಷ್ಠವಾಗುತ್ತಿರುವ ಕುರುಬ ಸಮುದಾಯವನ್ನು ವಿಭಜಿಸಲು ಈ ಹೋರಾಟ ರೂಪಿಸಲಾಗುತ್ತಿದೆ. ಬಿಜೆಪಿ ಮತ್ತು ಸಂಘ ಪರಿವಾರದವರು ಕುರುಬರಿಗೆ ಎಸ್‌.ಟಿ. ಸ್ಥಾನಮಾನ ನೀಡುತ್ತಾರೆ ಎನ್ನುವುದು ಭ್ರಮೆ’ ಎಂದು ಹೇಳಿದ್ದಾರೆ.

ಬರಹಗಾರರಾದ ಡಾ.ಮಲ್ಲಿಕಾ ಘಂಟಿ, ಷರೀಫಾ, ರುದ್ರಪ್ಪ ಹನಗವಾಡಿ, ಲಕ್ಷ್ಮಣ ಕೊಡಸೆ ಮತ್ತು ಶರಣಪ್ಪ ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.