ADVERTISEMENT

ಸಂಸ್ಕೃತಿ ಸಚಿವರ ಸ್ವಕ್ಷೇತ್ರ ಕಾರ್ಕಳಕ್ಕೆ ಯಕ್ಷಗಾನ ಅಕಾಡೆಮಿ?

ಕೇಂದ್ರ ಕಚೇರಿ ಬೆಂಗಳೂರಿನಲ್ಲೇ ಇರಲಿ: ಯಕ್ಷಗಾನ ಕ್ಷೇತ್ರದ ಪ್ರಮುಖರ ಆಗ್ರಹ

ವರುಣ ಹೆಗಡೆ
Published 28 ಜೂನ್ 2022, 20:38 IST
Last Updated 28 ಜೂನ್ 2022, 20:38 IST
   

ಬೆಂಗಳೂರು:ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿ‌ ಸ್ಥಳಾಂತರ ಪ್ರಸ್ತಾವವು ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಮಂಗಳೂರಿನ ಬದಲು ಕನ್ನಡ ಮತ್ತು ಸಂಸ್ಕೃತಿ ಸಚಿವರ ಸ್ವಕ್ಷೇತ್ರ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಸ್ಥಳಾಂತರಿಸುವ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ.

‘ಕಲೆಯ ಬೆಳವಣಿಗೆಗೆ ಅಕಾಡೆಮಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿಯೇ ಇರಬೇಕು’ ಎನ್ನುವುದು ಅಕಾಡೆಮಿ ಕಾರ್ಯಕಾರಿ ಸಮಿತಿ ಹಾಗೂ ಕಲಾವಿದರ ಆಗ್ರಹ. ಕನ್ನಡ ಮತ್ತು ಸಂಸ್ಕೃತಿಸಚಿವ ವಿ. ಸುನೀಲ್ ಕುಮಾರ್ ಅವರು ತಮ್ಮ ಕ್ಷೇತ್ರಕ್ಕೆ ಅಕಾಡೆಮಿ ಕಚೇರಿ ಸ್ಥಳಾಂತರಿಸಲು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಈ ಹಿಂದೆ ಉಮಾಶ್ರೀ ಅವರು ಇಲಾಖೆ ಸಚಿವರಾಗಿದ್ದಾಗ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸುವಂತೆ ಆದೇಶ ಹೊರಡಿಸಿದ್ದರು.ದಕ್ಷಿಣ ಕನ್ನಡ, ಕರಾವಳಿ ಪ್ರದೇಶದಲ್ಲಿ ಯಕ್ಷಗಾನದ ಕಲಾವಿದರು ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಈ ಆದೇಶ ಹೊರಡಿಸಲಾಗಿತ್ತು. ಆದರೆ, ಸರ್ಕಾರದ ಈ ಕ್ರಮಕ್ಕೆ ಕಲಾವಿದರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಕಾಡೆಮಿಯ ಅಂದಿನ ಅಧ್ಯಕ್ಷ ಎಂ.ಎ.ಹೆಗಡೆ ಹಾಗೂ ಸದಸ್ಯರು ಕೂಡ ಆಕ್ಷೇಪಿಸಿದ್ದರು. ಆದ್ದರಿಂದ ನಂತರ ಅಧಿಕಾರಕ್ಕೆ ಬಂದಸಮ್ಮಿಶ್ರ ಸರ್ಕಾರ, ಸ್ಥಳಾಂತರದ ಆದೇಶವನ್ನು ಹಿಂಪಡೆದಿತ್ತು.

ADVERTISEMENT

ರಾಜಧಾನಿ ಸೂಕ್ತ:ಸದ್ಯ ಅಕಾಡೆಮಿಯ ಕೇಂದ್ರ ಕಚೇರಿ ಕನ್ನಡ ಭವನದಲ್ಲಿದೆ.ಯಕ್ಷಗಾನದಲ್ಲಿ ಮೂಡಲಪಾಯ, ಬಡಗುತಿಟ್ಟು, ತೆಂಕುತಿಟ್ಟು, ಬಡಾಬಡಗುತಿಟ್ಟು, ತಾಳ ಮದ್ದಳೆ ಸೇರಿ ಹಲವು ಪ್ರಕಾರಗಳಿವೆ. ಎಲ್ಲವೂ ಅಕಾಡೆಮಿ ವ್ಯಾಪ್ತಿಗೆ ಬರುತ್ತವೆ. ಮೂಡಲಪಾಯ ಯಕ್ಷಗಾನ ಪ್ರಕಾರವು ತುಮಕೂರು, ರಾಮನಗರ, ಮೈಸೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಸೇರಿ ಕೆಲವು ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿದೆ. ಹೀಗಾಗಿ, ಆಡಳಿತಾತ್ಮಕ ಹಾಗೂ ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಕಚೇರಿ ಬೆಂಗಳೂರಿನಲ್ಲಿಯೇ ಇರಬೇಕು ಎನ್ನುವುದು ಯಕ್ಷಗಾನದ ಪ್ರಮುಖರ ಅಭಿಮತ.

‘ಯಕ್ಷಗಾನ ಕಲೆ ಕರಾವಳಿಗಷ್ಟೇ ಸೀಮಿತವಾಗದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದೆ.ಕಚೇರಿಯನ್ನು ಕಾರ್ಕಳಕ್ಕೆ ಸ್ಥಳಾಂತರಿಸಿದರೆ ಮೂಡಲ ಪಾಯ ಸೇರಿ ಯಕ್ಷಗಾನದ ಇನ್ನಿತರ ಕಲಾ ಪ್ರಕಾರಗಳಿಗೆ ಅಷ್ಟಾಗಿ ಪ್ರೋತ್ಸಾಹ ಸಿಗುವುದಿಲ್ಲ. ಕೇಂದ್ರ ಕಚೇರಿ ಬೆಂಗಳೂರಿನಲ್ಲೇ ಇರುವುದು ಸೂಕ್ತ’ ಎಂದು ಅಕಾಡೆಮಿಯ ಅಧ್ಯಕ್ಷಮತ್ತು ಸದಸ್ಯರು ಅಭಿಮತ ವ್ಯಕ್ತಪಡಿಸಿದ್ದಾರೆ.

‘ಕಾರ್ಯನಿರ್ವಹಣೆ ಸಮಸ್ಯೆ’

‘ಯಕ್ಷಗಾನದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇದ್ದಲ್ಲಿ ಕಾರ್ಯನಿರ್ವಹಣೆ ಸುಲಭವಾಗಲಿದೆ. ಸ್ಥಳಾಂತರದಿಂದ ಕಲಾವಿದರಿಗೆ ಅಂತಹ ಲಾಭವಾಗದು. ಮೂಡಲಪಾಯದ ಕಲಾವಿದರು ಬೆಂಗಳೂರಿನ ಸುತ್ತಮುತ್ತ ಇದ್ದಾರೆ. ವೃತ್ತಿಪರ ಮೇಳಗಳು ಇಲ್ಲಿಗೆ ಬಂದು ಪ್ರದರ್ಶನ ನೀಡುತ್ತಿವೆ. ಯಕ್ಷಗಾನ ಕಲೆಯನ್ನು ಒಂದು ಪ್ರದೇಶಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಈ ಹಿಂದೆ ಕೂಡ ಇಂತಹ ಪ್ರಯತ್ನಗಳು ನಡೆದಿದ್ದವು. ಕಲಾವಿದರ ವಿರೋಧದಿಂದ
ಆಗ ಸ್ಥಳಾಂತರ ಪ್ರಕ್ರಿಯೆ ಸ್ಥಗಿತವಾಗಿತ್ತು’ ಎಂದು ಅಕಾಡೆಮಿ ಸದಸ್ಯ ಶ್ರೀನಿವಾಸ ಸಾಸ್ತಾನ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.