ADVERTISEMENT

ಯಕ್ಷಗಾನದ ಹಿರಿಯ ಭಾಗವತ ನೆಬ್ಬೂರು ನಿಧನ

​ಪ್ರಜಾವಾಣಿ ವಾರ್ತೆ
Published 11 ಮೇ 2019, 8:33 IST
Last Updated 11 ಮೇ 2019, 8:33 IST
ನೆಬ್ಬೂರು ನಾರಾಯಣ ಭಾಗವತರು
ನೆಬ್ಬೂರು ನಾರಾಯಣ ಭಾಗವತರು   

ಶಿರಸಿ: ಬಡಗುತಿಟ್ಟಿನ ಭಾಗವತಿಕೆಯಲ್ಲಿ ದೊಡ್ಡ ಹೆಸರಾಗಿದ್ದ ನೆಬ್ಬೂರ ನಾರಾಯಣ ಭಾಗವತ (82) ಶನಿವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಸಂಸ್ಥಾಪಕ ಕೆರೆಮನೆ ಶಿವರಾಮ ಹೆಗಡೆಯವರ ಗರಡಿಯಲ್ಲಿ ಬೆಳೆದ ನೆಬ್ಬೂರರು, ಹಿರಿಯ ಕಲಾವಿದರ ಒಡನಾಟದಲ್ಲಿ, ಅಭ್ಯಾಸ ಮಾಡುತ್ತ ಮುಂದೆ, ಕೆರೆಮನೆ ಮೇಳದ ಪ್ರಧಾನ ಭಾಗವತರಾಗಿ ಸುಮಾರು 50 ವರ್ಷಗಳ ಕಾಲ ಉತ್ತರ ಕನ್ನಡ, ದಕ್ಷಿಣ ಕನ್ನಡ ಭಾಗದಲ್ಲಿ ಅನೇಕ ಆಖ್ಯಾನಗಳ ಯಶಸ್ವಿ ಪ್ರದರ್ಶನಕ್ಕೆ ಕಾರಣರಾದವರು.

ಪ್ರಸಿದ್ಧ ಕಲಾವಿದರಾಗಿದ್ದ ಕೆರೆಮನೆ ಶಂಭು ಹೆಗಡೆ ಮತ್ತು ನೆಬ್ಬೂರು ಭಾಗವತರು ಅನ್ಯೋನ್ಯ ಸ್ನೇಹವಾಗಿತ್ತು. ಕೆರೆಮನೆ ಮೇಳದ ಜೊತೆಗೆ ವಿದೇಶಕ್ಕೂ ಹೋಗಿ, ಅಲ್ಲಿ ಅವರ ಭಾಗವತಿಕೆ ಇಂಪನ್ನು ಉಣಬಡಿಸಿದ್ದರು. ಅವರು ನಿಧಾನ ಲಯದಲ್ಲಿ ಹಾಡುವ ಪದ್ಯಗಳ ಸೊಗಸು ಆಸ್ವಾದಿಸಿದವರಿಗೇ ಗೊತ್ತು.

ADVERTISEMENT

ಸಿದ್ದಾಪುರ ತಾಲ್ಲೂಕು ನೆಬ್ಬೂರಿನ ಗಣಪಿ ಮತ್ತು ದೇವರು ಹೆಗಡೆ ದಂಪತಿಯ ನಾಲ್ವರು ಮಕ್ಕಳಲ್ಲಿ ನಾರಾಯಣ ಎರಡನೆಯವರು. ದೇವರು ಹೆಗಡೆಯವರು ಶ್ರೀಮಂತಿಕೆಯಲ್ಲಿ ಜನಿಸಿ ಬಡತನವನ್ನು ಉಂಡವರು. ಕುಟುಂಬದ ಬಡತನದಿಂದಾಗಿ ನಾರಾಯಣ ಭಾಗವತರು ನಾಲ್ಕನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿದರು. ಸಮೀಪದ ಆಡಳ್ಳಿ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದಿದ ನಂತರ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಶಿರಸಿ ಅಥವಾ ಕುಮಟಾಕ್ಕೆ ಹೋಗಬೇಕಾಗಿತ್ತು.

ವಿದ್ಯಾರ್ಥಿಯಾಗಿದ್ದಾಗಲೇ ಅವರಿಗೆ ಯಕ್ಷಗಾನದಲ್ಲಿ ಆಸಕ್ತಿ ಹುಟ್ಟಿತು. ಸೋಗೆ ಗುಡಿಸಲಿನ ಆಡಳ್ಳಿ ಶಾಲೆಯಲ್ಲಿ ಶಿವಾನಂದ ಹೆಗಡೆ ಎನ್ನುವವರು ಮಕ್ಕಳಿಗೆ ಅಕ್ಷರ ಕಲಿಸುತ್ತಿದ್ದರು. ನಂತರ ಆಡಳ್ಳಿ ಶಾಲೆಯು ಜಿಲ್ಲಾ ಬೋರ್ಡ್ ಶಾಲೆಯಾಗಿ ರೂಪುಗೊಂಡಿತು. ಅದಕ್ಕೆ ಶಿಕ್ಷಕರಾಗಿ ಬಂದಿದ್ದ ಗೋಕರ್ಣದ ಸುಬ್ರಾಯ ಬಸ್ತೀಕರ್ ಅವರು ನಾರಾಯಣ ಭಾಗವತರಲ್ಲಿ ಯಕ್ಷಗಾನ ಆಸಕ್ತಿ ಬೆಳೆಯಲು ಕಾರಣದಾದರು. ಅವರು, ಮಕ್ಕಳ ತಂಡವನ್ನು ಕಟ್ಟಿ ನಾಟಕ, ಆಟ, ತಾಳಮದ್ದಳೆ ತರಬೇತಿ ನೀಡಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ತಾಳಮದ್ದಳೆಯಲ್ಲಿ ಶ್ರೀಕೃಷ್ಣ ಸಂಧಾನದ ವಿದುರ, ಅತಿಕಾಯ ಕಾಳಗದ ಸುಗ್ರೀವ, ಭೀಷ್ಮಪರ್ವದ ಧರ್ಮರಾಯ ಮೊದಲಾದ ಪಾತ್ರಗಳನ್ನು ನೆಬ್ಬೂರರು ನಿರ್ವಹಿಸಿದ್ದರು. ಆಗ ನಾರಾಯಣ ಭಾಗವತರನ್ನು ಮಾಸ್ತರರು, ನಾಣಿ ಎಂದು ಕರೆಯುತ್ತಿದ್ದರಂತೆ. ಆ ಹೆಸರು ಕೊನೆಯ ತನಕವೂ ಇತ್ತು. ಸ್ಥಳೀಯವಾಗಿ ಅವರನ್ನು ನಾಣಿ ಭಾಗವತರು ಎಂದೇ ಕರೆಯುತ್ತಿದ್ದರು.

ನೆಬ್ಬೂರು ಭಾಗವತರು (ಬಲದಲ್ಲಿರುವವರು) ಶಂಭು ಹೆಗಡೆ ಅವರ ಜೊತೆಗಿದ್ದ ಚಿತ್ರ

ಕೆರೆಮನೆ ತಂಡದೊಂದಿಗೆ ಹಲವಾರು ಬಾರಿ ವಿದೇಶ ಪ್ರವಾಸ ಮಾಡಿದ್ದ ನೆಬ್ಬೂರು ಭಾಗವತರು ಮೊದಲಬಾರಿಗೆ 1984ರಲ್ಲಿ ಬಹ್ರೈನ್‌ಗೆ ತೆರಳಿದ್ದರು.ಕೆರೆಮನೆ ಶಿವಾನಂದ ಹೆಗಡೆ ಅವರ ನೇತೃತ್ವದಲ್ಲಿ ಅಮೆರಿಕ, ಲಂಡನ್, ನೇಪಾಳ, ಚೀನಾ, ಫ್ರಾನ್ಸ್, ಸ್ಪೇನ್, ಬಾಂಗ್ಲಾ, ಸಿಂಗಪೂರ್, ಬರ್ಮಾ, ಲಾವೋಸ್ ಮೊದಲಾದ ದೇಶಗಳಿಗೆ ತೆರಳಿ ಅಲ್ಲಿನ ಪ್ರೇಕ್ಷಕರನ್ನು ತಮ್ಮ ಗಾನಸುಧೆಯಲ್ಲಿ ತೇಲಾಡಿಸಿದರು.

ಸಂದ ಪ್ರಶಸ್ತಿಗಳು:1996ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, 2002ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, 2006ರಲ್ಲಿ ಶೇಣಿ ಪ್ರಶಸ್ತಿ, ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ. ‘ಯಕ್ಷಗಾನ ಪ್ರಪಂಚದಲ್ಲಿ ಖ್ಯಾತ ರಂಗನಟರಾಗಿ ರಂಜಿಸಿದ ಕೆರೆಮನೆ ಶಿವರಾಮ ಹೆಗಡೆಯವರ ಪ್ರಶಸ್ತಿ, ತಾಳಮದ್ದಳೆ ಕ್ಷೇತ್ರದಲ್ಲಿ ಬೆಳೆದು ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರಶಸ್ತಿ ಇವೆರಡೂ ನನ್ನ ಬದುಕಿನ ಆಸ್ತಿಗಳು’ ಎಂದು ನೆಬ್ಬೂರರು ಯಾವಾಗಲೂ ಹೇಳಿಕೊಳ್ಳುತ್ತಿದ್ದರು.

ನೆಬ್ಬೂರರ ಬದುಕು ಮತ್ತು ಹಾಡುಗಾರಿಕೆಯನ್ನು ಉಡುಪಿ ಯಕ್ಷಗಾನ ಕಲಾರಂಗ ಸಂಸ್ಥೆಯು ಚಿತ್ರೀಕರಿಸಿ ದಾಖಲಿಸಿದೆ. ಡಾ.ಜಿ.ಎಸ್.ಭಟ್ಟ ಸಂಪಾದಿಸಿದ ನೆಬ್ಬೂರರ ಆತ್ಮಕಥನ ‘ನೆಬ್ಬೂರಿನ ನಿನಾದ’ 2007ರಲ್ಲಿ ಪ್ರಕಟಗೊಂಡಿದೆ. ಕೆರೆಮನೆ ಶಂಭು ಹೆಗಡೆಯವರು ‘ನಿನಾದದ ನಿಷ್ಕರ್ಷೆ’ ಎಂಬ ತಲೆಬರಹದಡಿ ನೆಬ್ಬೂರರ ಬಗೆಗೆ ಈ ಆತ್ಮಕಥನದಲ್ಲಿ ಅನಿಸಿಕೆಯನ್ನು ಬರೆದಿದ್ದರು.

ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಜತೆ ನೆಬ್ಬೂರರು (ಎಡದಲ್ಲಿರುವವರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.