ADVERTISEMENT

'ಪೆನ್‌ ಡ್ರೈವ್, ಸಿ.ಡಿ.ಗಿಂತ ತಾಳೆಗರಿ ಮೇಲು'

ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣಕ್ಕೆ ಕರ್ನಾಟಕ ಸರ್ಕಾರ ಸಹಯೋಗ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 6:13 IST
Last Updated 28 ಡಿಸೆಂಬರ್ 2019, 6:13 IST
ಡಿಜಿಟಲೀಕರಣಗೊಂಡಿರುವ ಯಕ್ಷಗಾನ ಪ್ರಸಂಗಗಳನ್ನು ಸಚಿವ ಸಿ.ಟಿ. ರವಿ ಬಿಡುಗಡೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಸ್. ಹೆಗಡೆ ಇದ್ದರು –ಪ್ರಜಾವಾಣಿ ಚಿತ್ರ
ಡಿಜಿಟಲೀಕರಣಗೊಂಡಿರುವ ಯಕ್ಷಗಾನ ಪ್ರಸಂಗಗಳನ್ನು ಸಚಿವ ಸಿ.ಟಿ. ರವಿ ಬಿಡುಗಡೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಸ್. ಹೆಗಡೆ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಿ.ಡಿ, ಪೆನ್‌ ಡ್ರೈವ್‌ಗಳಿಗಿಂತ ತಾಳೆಗರಿಯೇ ಶ್ರೇಷ್ಠ ಎಂಬುದು ಈಗಾಗಲೇ ಸಾಬೀತಾಗಿದೆ. ತಾಳೆಗರಿಗಳಲ್ಲಿನ ಸಾಹಿತ್ಯವು ದೀರ್ಘಕಾಲ ಬಾಳಿಕೆ ಬರುತ್ತವೆ ಎಂಬುದನ್ನು ನಮ್ಮ ಹಿಂದಿನ ತಲೆಮಾರಿನವರು ಅದಾಗಲೇ ಕಂಡುಕೊಂಡಿದ್ದರು’ ಎಂದು ಮುಖ್ಯಮಂತ್ರಿಗಳ ಇ–ಆಡಳಿತ ಸಲಹೆಗಾರ ಬೇಳೂರು ಸುದರ್ಶನ್ನುಡಿದರು.

ಬೆಂಗಳೂರಿನ ಯಕ್ಷವಾಹಿನಿ ಸಹಯೋಗದಲ್ಲಿ ನಯನ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಶುಕ್ರವಾರ ಆಯೋಜಿಸಿದ್ದ 'ಡಿಜಿಟಲೀಕರಣಗೊಂಡ ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಯಕ್ಷಗಾನ ಅಕಾಡೆಮಿಯು 44 ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿರುವುದು ಅಭಿನಂದನಾರ್ಹ' ಎಂದ ಅವರು, ಸಾವಿರಾರು ವರ್ಷಗಳ ಹಿಂದೆ ದಾಖಲಿಸಿದ ತಾಳೆಗರಿ ಗ್ರಂಥಗಳು ಈಗಲೂ ಭದ್ರವಾಗಿವೆ. ಆದರೆ ಡಿವಿಡಿ, ಪೆನ್‌ಡ್ರೈವ್‌ಗಳು ಕೆಲವೇ ವರ್ಷಗಳಲ್ಲಿ ಮಾಸಿಹೋದ ಉದಾಹರಣೆಗಳು ಸಾಕಷ್ಟಿವೆ ಎಂದರು.

ADVERTISEMENT

'ತಾಳೆ ಓಲೆಗಳ ಮೇಲೆ ಲೇಸರ್ ಮುದ್ರಣ ಮಾಡುವ ತಂತ್ರಜ್ಞಾನ ಈಗಾಗಲೇ ಅಭಿವೃದ್ಧಿಯಾಗಿದೆ. ತಂತ್ರಜ್ಞಾನವನ್ನು ಚೆನ್ನಾಗಿ ಬಳಸಿದರೆ, ಪರಂಪರೆಯ ಜ್ಞಾನವನ್ನೂ ಉಪಯೋಗಿಸಿದರೆ, ದೀರ್ಘಕಾಲ ಬಾಳಿಕೆಯ ತಾಳೆ ಓಲೆಗಳಲ್ಲೇ ಪ್ರಸಂಗಗಳನ್ನು ಬರೆಯುವುದು ಕೂಡ ಸಾಧ್ಯವಾಗಬಹುದು' ಎಂದು ಬೇಳೂರು ಸುದರ್ಶನ ಅವರು ಅಭಿಪ್ರಾಯಪಟ್ಟರು.' ಅಲ್ಲದೆ, ಕನ್ನಡದ ತಂತ್ರಜ್ಞಾನ, ತಂತ್ರಾಂಶಗಳು ಹೇಗೆ ಬೇಕು, ಕನ್ನಡ ನೆಲದ ಸಂಸ್ಕೃತಿ ರಕ್ಷಣೆ ದೃಷ್ಟಿಯಿಂದ ಯಾವ ರೀತಿಯ ಕೆಲಸಗಳನ್ನು ಮಾಡಬೇಕು ಎಂಬುದರಕುರಿತಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಇ–ಆಡಳಿತ ಇಲಾಖೆ ಸಹಯೋಗದಲ್ಲಿ ಮೈಸೂರಿನಲ್ಲಿ ಮುಂದಿನ ವಾರ ಕಮ್ಮಟ ನಡೆಯುತ್ತಿದೆ ಎಂಬ ಮಾಹಿತಿಯನ್ನೂ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ‘ಡಿಜಿಟಲೀಕರಣ ವಿಚಾರದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಉತ್ತಮ ಕೆಲಸ ಮಾಡಿದೆ. ಇದು ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಮಾರ್ಗವಾಗಿದೆ’ ಎಂದರು.

ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ, ‘ಶಿಶು ಸಾಹಿತ್ಯ, ಮಹಿಳಾ ಸಾಹಿತ್ಯವನ್ನು ಗಂಭೀರ ಸಾಹಿತ್ಯವೆಂದು ಪರಿಗಣಿಸುವ ಹಾಗೆ ಯಕ್ಷಗಾನ ಸಾಹಿತ್ಯವನ್ನು ಸಾಹಿತ್ಯದ ವಸ್ತುವಾಗಿ ನೋಡುತ್ತಿಲ್ಲ. ಯಾವ ಪ್ರಕಾರದ ಸಾಹಿತ್ಯಕ್ಕೂ ಯಕ್ಷಗಾನ ಸಾಹಿತ್ಯ ಕಡಿಮೆ ಇಲ್ಲ. ಪೌರಾಣಿಕ ಕಥೆಗಳನ್ನು ತನ್ನದೇ ಶೈಲಿಯಲ್ಲಿ ಜನರನ್ನು ಯಕ್ಷಗಾನಗಳು ಮುಟ್ಟಿಸುತ್ತಿವೆ’ ಎಂದು ಹೇಳಿದರು.

‘ಕಾಲ ಬದಲಾದಂತೆ ವ್ಯವಸ್ಥೆಗೆ ತಕ್ಕಂತೆ ಹೊಂದಿಕೊಳ್ಳಬೇಕು. ನಾನು ಬರೆದ ಹಲವು ಯಕ್ಷಗಾನ ಪ್ರಸಂಗಗಳ ಕೃತಿಗಳು ಗೆದ್ದಲುತಿಂದು ಹಾಳಾಗಿ ಹೋಗಿವೆ. ಸಂರಕ್ಷಿಸುವ ನಿಟ್ಟಿನಲ್ಲಿ 44 ಪ್ರಸಂಗಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ 200 ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣ ಮಾಡುವ ಗುರಿ ಇದೆ’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ, ಯಕ್ಷವಾಹಿನಿ, ಬೆಂಗಳೂರು ಅಧ್ಯಕ್ಷ ಡಾ.ಆನಂದರಾಮ ಉಪಾಧ್ಯ, ಡಿಜಿಟಲೀಕರಣ ಯೋಜನೆಯ ರೂವಾರಿ ನಟರಾಜ ಉಪಾಧ್ಯ, ಯಕ್ಷಗಾನ ಅಕಾಡೆಮಿ ಸದಸ್ಯ ರಮೇಶ್ ಬೇಗಾರು ಹಾಗೂ ಇತರರು ಉಪಸ್ಥಿತರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿ ತುಳಸಿ ಹೆಗಡೆ ಅವರು 'ಪಂಚಪಾವನ ಕಥಾ' ಯಕ್ಷ ರೂಪಕವನ್ನು ಪ್ರಸ್ತುತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.