ಬೆಂಗಳೂರು: ‘ಯಶಸ್ವಿನಿ ಯೋಜನೆ ಅಡಿಯಲ್ಲಿ ಜನವರಿ ತಿಂಗಳಲ್ಲೇ ಒಂದು ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಚಿಕಿತ್ಸೆ ಪಡೆದಿದ್ದಾರೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
‘27 ಜಿಲ್ಲೆಗಳಲ್ಲಿನ 127 ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಈ ಫಲಾನುಭವಿಗಳು ಚಿಕಿತ್ಸೆ ಪಡೆದಿದ್ದಾರೆ. ಜನವರಿ ಅಂತ್ಯದವರೆಗೆ 30 ಲಕ್ಷ ಮಂದಿಯನ್ನು ಯಶಸ್ವಿನಿ ಯೋಜನೆ ಅಡಿಯಲ್ಲಿ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳುವ ಗುರಿ ನಿಗದಿಪಡಿಸಲಾಗಿತ್ತು. ಆದರೆ, 33.10 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದು, ಗುರಿ ಮೀರಿ ಸಾಧನೆ ಮಾಡಲಾಗಿದೆ. ಸದಸ್ಯರ ನೋಂದಣಿ ಕಾರ್ಯ ಇನ್ನೂ ಮುಂದುವರಿದಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಈ ಯೋಜನೆ ಅಡಿ ಇದುವರೆಗೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಸರ್ಕಾರಿ ಜಿಲ್ಲಾ ಆಸ್ಪತ್ರೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಸೇರಿದಂತೆ 474 ನೆಟ್‌ವರ್ಕ್ ಆಸ್ಪತ್ರೆಗಳು ಟ್ರಸ್ಟ್‌ನಲ್ಲಿ ನೋಂದಾಯಿಸಿಕೊಂಡಿವೆ. ಜನವರಿ 1ರಿಂದಲೇ ಫಲಾನುಭವಿಗಳಿಗೆ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಹೃದಯ ಸಂಬಂಧಿ ಕಾಯಿಲೆ, ಕಿವಿ, ಮೂಗು, ಗಂಟಲು, ನರ, ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಸೇರಿದಂತೆ ಹಲವು ರೋಗಗಳಿಗೆ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಸದಸ್ಯರು ಯೂನಿಕ್ ಐಡಿ ಸಂಖ್ಯೆಯುಳ್ಳ ಪ್ಲ್ಯಾಸ್ಟಿಕ್ ಕಾರ್ಡ್ ಹಾಜರುಪಡಿಸಿ 1,650 ಚಿಕಿತ್ಸೆಗಳನ್ನು ನಗದುರಹಿತವಾಗಿ ಪಡೆಯಬಹುದಾಗಿದೆ’ ಎಂದು ತಿಳಿಸಿದ್ದಾರೆ.
‘ಚಿಕಿತ್ಸೆ ದರಗಳನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಹಿಂದಿನ ಯಶಸ್ವಿನಿ ಯೋಜನೆಯಡಿ ಚಿಕಿತ್ಸೆ ದರ ಹೆಚ್ಚಿದ್ದಲ್ಲಿ ಆ ದರ ಅಥವಾ ಪ್ರಸ್ತುತ ಯೋಜನೆಗೆ ಪರಿಗಣಿಸಿರುವ ಆಯುಷ್ಮಾನ ಭಾರತ ಚಿಕಿತ್ಸೆ ದರಗಳು ಹೆಚ್ಚಿದ್ದಲ್ಲಿ ಅವುಗಳನ್ನು ಪರಿಗಣಿಸಬಹುದು. ಅಂದರೆ, ಯಾವ ಯೋಜನೆಯಲ್ಲಿ ಹೆಚ್ಚಿನ ದರ ಇರುತ್ತದೆಯೋ ಆ ದರವನ್ನು ಪರಿಗಣಿಸಿ ಆಸ್ಪತ್ರೆಗಳ ಬಿಲ್‌ಗಳನ್ನು ಪಾವತಿಸಲಾಗುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.