ADVERTISEMENT

‘ಯಶಸ್ವಿನಿ’ ವಂಚನೆ ಹಣ ದೋಚುವ ಜಾಲ: ಫೌಂಡೇಷನ್ ವಿರುದ್ಧ ದೂರು

ಸಂತೋಷ ಜಿಗಳಿಕೊಪ್ಪ
Published 1 ಮಾರ್ಚ್ 2023, 23:00 IST
Last Updated 1 ಮಾರ್ಚ್ 2023, 23:00 IST
   

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಯಶಸ್ವಿನಿ ಯೋಜನೆ’ಯ ಹೆಸರಿನಲ್ಲಿ ಹಣ ಪಡೆದು ವಂಚಿಸುತ್ತಿರುವ ಜಾಲ ಸಕ್ರಿಯವಾಗಿದ್ದು, ಇದರ ವಿರುದ್ಧ ‘ಯಶಸ್ವಿನಿ ಆರೋಗ್ಯ ರಕ್ಷಣಾ ಟ್ರಸ್ಟ್‌’ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಠಾಣೆ ಮೆಟ್ಟಿಲೇರಿದ್ದಾರೆ.

ಯೋಜನೆಗೆ ಅರ್ಹರಾದ ಸಹಕಾರ ಸಂಘಗಳ ಸದಸ್ಯರಿಗೆ ಕಾರ್ಡ್‌ ವಿತರಿಸುವ ಹೊಣೆಯನ್ನು ಸರ್ಕಾರದ ಟ್ರಸ್ಟ್‌ಗೆ ವಹಿಸಲಾಗಿದೆ. ಯೋಜನೆ ಹೆಸರನ್ನು ದುರುಪಯೋಗಪಡಿಸಿಕೊಂಡಿರುವ ಕೆಲ ವ್ಯಕ್ತಿಗಳು ಮತ್ತು ಸಂಸ್ಥೆಗಳು, ಅಕ್ರಮವಾಗಿ ಜಾಹೀರಾತು ನೀಡಿ ಕಾರ್ಡ್‌ ವಿತರಣೆ ಹೆಸರಿನಲ್ಲಿ ಜನರನ್ನು ವಂಚಿಸುತ್ತಿರುವ ಬಗ್ಗೆ ಸಿಇಒ ಎಂ. ವೆಂಕಟಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಯಶಸ್ವಿನಿ ಕಾರ್ಡ್‌ ವಿತರಿಸುವ ಭರವಸೆ ನೀಡಿ ವಂಚಿಸುತ್ತಿರುವವರನ್ನು ಪತ್ತೆ ಮಾಡುವಂತೆ ಪೊಲೀಸರನ್ನು ಕೋರಿದ್ದಾರೆ.

ADVERTISEMENT

‘ಯಶಸ್ವಿನಿ ಯೋಜನೆಹೆಸರಿನಲ್ಲಿ ವಂಚನೆ ಆಗುತ್ತಿರುವ ಬಗ್ಗೆ ವೆಂಕಟಸ್ವಾಮಿ ಅವರು ಫೆ. 18ರಂದು ದೂರು ನೀಡಿದ್ದಾರೆ. ‘ವಿಸ್ಡ್‌ಂ ಪಿಯರಲ್ ಫೌಂಡೇಷನ್’ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಫೌಂಡೇಷನ್ ಆಡಳಿತ ಮಂಡಳಿಯಲ್ಲಿ ಯಾರೆಲ್ಲ ಇದ್ದಾರೆ? ಯಾವ ರೀತಿ ವಂಚನೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಈದ್ಗಾ ಮಸೀದಿ ವಿಳಾಸದಲ್ಲಿ ಜಾಹೀರಾತು: ‘2022ರ ನ.1ರಿಂದ ರಾಜ್ಯದಲ್ಲಿ ಯಶಸ್ವಿನಿ ಯೋಜನೆ ಜಾರಿಯಾಗಿದ್ದು, 2023ರ ಜನವರಿ 1ರಿಂದ ನೋಂದಣಿಯಾದ ಸದಸ್ಯರಿಗೆ ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದು ಸಿಇಒ ವೆಂಕಟಸ್ವಾಮಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕಾರ್ಡ್‌ ಬಳಸಿ ಆರೋಗ್ಯ ಸೇವೆ ?

‘ವಿಸ್ಡ್‌ಂ ಪಿಯರಲ್ ಫೌಂಡೇಷನ್ ವತಿಯಿಂದ ಜನರಿಗೆ ಯಶಸ್ವಿನಿ ಕಾರ್ಡ್‌ ವಿತರಿಸಿರುವ ಮಾಹಿತಿ ಇದೆ. ಅದೇ ಕಾರ್ಡ್‌ ಬಳಸಿಕೊಂಡು ಕೆಲವರು, ಆರೋಗ್ಯ ಸೇವೆ ಪಡೆದುಕೊಂಡಿರುವುದು ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಲವರನ್ನು ಈಗಾಗಲೇ ವಿಚಾರಣೆ ಮಾಡಲಾಗಿದೆ. ಕೃತ್ಯದಲ್ಲಿ ಹಲವು ಅಧಿಕಾರಸ್ಥರೂ ಭಾಗಿಯಾಗಿರುವ ಶಂಕೆ ಇದ್ದು, ನೋಟಿಸ್ ನೀಡಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಫೌಂಡೇಷನ್‌ ನೀಡುತ್ತಿದ್ದ ಕಾರ್ಡ್‌ಗಳು ಅಸಲಿಯೋ ಅಥವಾ ನಕಲಿಯೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.