ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಬಿಜೆಪಿಯ ಕೆಲ ನಾಯಕರು ದಿನಕ್ಕೊಂದು ರೀತಿ ನೀಡುತ್ತಿರುವ ಆಕ್ಷೇಪಾರ್ಹ ಹೇಳಿಕೆಗಳು ಕಾಂಗ್ರೆಸ್ ಪಕ್ಷವನ್ನು ರೊಚ್ಚಿಗೆಬ್ಬಿಸಿದ್ದು, ಸೋಮವಾರದಿಂದ ಆರಂಭವಾಗುವ ವಿಧಾನಮಂಡಲದ ಅಧಿವೇಶನದಲ್ಲಿ ಬಿರುಗಾಳಿ ಎಬ್ಬಿಸುವುದು ನಿಶ್ಚಿತವಾಗಿದೆ.
‘ಶಾಸಕ ಯತ್ನಾಳ್ ತಮ್ಮ ಹೇಳಿಕೆಗಳ ಬಗ್ಗೆ ಕ್ಷಮೆ ಕೇಳದಿದ್ದರೆ ಸದನ ನಡೆಯಲು ಬಿಡುವುದಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
‘ಹೇಳಿಕೆಗಳಿಗೆ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಕಲಾಪ ನಡೆಯಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಬೆದರಿಕೆ ಹಾಕಿದ್ದಾರೆ. ಹೇಗೆ ನಡೆಯಲು ಬಿಡುವುದಿಲ್ಲ ಎಂಬುದನ್ನು ನಾವೂ ನೋಡುತ್ತೇವೆ. ಸದನದಲ್ಲಿ ತಕರಾರು ಮಾಡಿದರೆ ನಾವೂ ಸುಮ್ಮನಿರುವುದಿಲ್ಲ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿ ಸವಾಲು ಹಾಕಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಉತ್ತರ ನೀಡಲಿದ್ದಾರೆ. ಆದರೆ, ಇದಕ್ಕೆ ಕಾಂಗ್ರೆಸ್ ಪಕ್ಷ ಅವಕಾಶ ನೀಡುವ ಸಾಧ್ಯತೆ ಇಲ್ಲ. ‘ಉತ್ತರ ನೀಡುವುದಕ್ಕೂ ಮೊದಲು ಯತ್ನಾಳ್ ಕ್ಷಮೆ ಕೇಳಬೇಕು’ ಎಂದು ಆ ಪಕ್ಷದ ನಾಯಕರು ಪಟ್ಟು ಹಿಡಿಯುವ ಸಾಧ್ಯತೆ ಇದೆ.
‘ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕಿಸ್ತಾನದ ಏಜೆಂಟ್’ ಎಂದು ಯತ್ನಾಳ್ ನೀಡಿದ್ದ ಹೇಳಿಯ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯದ ಹಲವೆಡೆ ಪ್ರತಿಭಟನೆಗಳೂ ನಡೆದಿವೆ. ಆದರೆ, ಯತ್ನಾಳ್ ಅವರನ್ನು ಬೆಂಬಲಿಸಿ ಬಿಜೆಪಿಯ ಇತರ ನಾಯಕರೂ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.
‘ಈ ಹೇಳಿಕೆಗಳು ಸಂಘ ಪರಿವಾರದ ಪಿತೂರಿ. ಆದ್ದರಿಂದ ಬಿಜೆಪಿ ಶಾಸಕರು ಪೈಪೋಟಿಗೆ ಬಿದ್ದವರಂತೆ ದೊರೆಸ್ವಾಮಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.
ಕ್ಷಮೆ ಕೇಳುವ ಅಗತ್ಯವಿಲ್ಲ: ‘ಯತ್ನಾಳ್ ಕ್ಷಮೆ ಕೇಳುವ ಅಗತ್ಯವಿಲ್ಲ. ಈ ಹಿಂದೆ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಕೊಲೆಗಡುಕ ಎಂದಿದ್ದರು. ಶಾಸಕ ದಿನೇಶ್ ಗುಂಡೂರಾವ್ ಮೋದಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಹೇಳಿಕೆ ನೀಡಿದ್ದರು. ಇಂತಹ ಕುತ್ಸಿತ ಹೇಳಿಕೆಗಳಿಗೆ ಅವರು ಕ್ಷಮೆಯನ್ನೇ ಕೇಳಿಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದರು.
ಕಾಂಗ್ರೆಸ್ ರಣತಂತ್ರ: ಅಧಿವೇಶನದಲ್ಲಿ ಮುಖ್ಯವಾಗಿ ಪೌರತ್ವ (ತಿದ್ದುಪಡಿ) ಕಾಯ್ದೆಗೆ ವಿರೋಧ, ಕೇಂದ್ರದಿಂದ ಅನುದಾನ ಬಾರದಿರುವ ವಿಷಯವನ್ನು ಪ್ರಸ್ತಾಪಿಸಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.
ಅಧಿವೇಶನ ಆರಂಭಕ್ಕೂ ಮುನ್ನ ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸದನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಹಲವು ಯೋಜನೆಗಳನ್ನು ಯಡಿಯೂರಪ್ಪ ಕೈಬಿಡಲು ಮುಂದಾಗಿದ್ದಾರೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಮುನ್ಸೂಚನೆ ಸಿಕ್ಕಿದ್ದು, ಈ ವಿಷಯಗಳೂ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಸಿಎಎ ಪರ ನಿರ್ಣಯ: ಇದೇ 3 ಮತ್ತು 4 ರಂದು ಸಂವಿಧಾನದ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಅಲ್ಲದೆ, ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿಬುಧವಾರ ವಿಧಾನಸಭೆ ನಿರ್ಣಯ ಅಂಗೀಕರಿಸಲಿದೆ. ಆದ್ದರಿಂದ, ಅಂದು ಪಕ್ಷದ ಎಲ್ಲ ಶಾಸಕರೂ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಬಿಜೆಪಿ ಸೂಚನೆ ನೀಡಿದೆ.
ಹಲವು ರಾಜ್ಯಗಳು ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನಿರ್ಣಯ ತೆಗೆದುಕೊಂಡಿವೆ. ಕರ್ನಾಟಕ ವಿಧಾನಸಭೆ ಪರವಾದ ನಿರ್ಣಯ ತೆಗೆದುಕೊಂಡರೆ, ಇಂತಹ ನಿರ್ಣಯ ತೆಗೆದುಕೊಂಡ ಮೊದಲ ರಾಜ್ಯವಾಗಲಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿರ್ಣಯ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೌರತ್ವ ಕಾಯ್ದೆಯ ಪರವಾಗಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಯಾವ ನಡೆ ಅನುಸರಿಸುತ್ತವೆ ಎಂಬ ಸುಳಿವು ಬಿಟ್ಟುಕೊಟ್ಟಿಲ್ಲ. ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತವಿದೆ. ಕಾಂಗ್ರೆಸ್ ಮತದಾನಕ್ಕೆ ಒತ್ತಾಯಿಸಿದಾಗ ಬಿಜೆಪಿಯ ಕೆಲವು ಶಾಸಕರು ಗೈರಾದರೆ ಆಡಳಿತ ಪಕ್ಷಕ್ಕೆ ಮುಖಭಂಗವಾಗಲಿದೆ.
ಸಾಲ ಮನ್ನಾ ಜೆಡಿಎಸ್ ಅಸ್ತ್ರ: ರೈತರ ಸಾಲ ಮನ್ನಾ ವಿಚಾರ ಪ್ರಮುಖವಾಗಿ ಪ್ರಸ್ತಾಪಿಸಿ ಆಡಳಿತ ಪಕ್ಷವನ್ನು ಮಣಿಸಲು ಜೆಡಿಎಸ್ ಸಜ್ಜಾಗಿದೆ. ‘ಸಾಲ ಮನ್ನಾ ಬಗ್ಗೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ರೈತರ ಪರವಾಗಿ ನಿಲ್ಲುತ್ತೇನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಸಾಲ ಮನ್ನಾಕ್ಕಾಗಿ ಮೀಸಲಿಟ್ಟಿದ್ದ ₹ 25 ಸಾವಿರ ಕೋಟಿಯನ್ನು ಸರ್ಕಾರ ಬೇರೆ ಉದ್ದೇಶಕ್ಕೆ ಬಳಸಿದೆ. ರೈತರ ಸಾಲ ಮನ್ನಾ ಯೋಜನೆಗೆ ತಿಲಾಂಜಲಿ ಇಡಲು ಅಡ್ಡ ದಾರಿ ತುಳಿದಿದೆ. ದಾಖಲೆಗಳ ನೆಪ ಒಡ್ಡಿ ಸಾಲ ಮನ್ನಾ ಯೋಜನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ರೈತರನ್ನು ಕೈ ಬಿಡುವ ಮೂಲಕ ರೈತರಿಗೆ ದೋಖಾ ಮಾಡುತ್ತಿದೆ’ ಎಂದು ಅವರು ಕಿಡಿ ಕಾರಿದ್ದಾರೆ.
‘ಮಂಡ್ಯ ಜಿಲ್ಲೆಯಲ್ಲಿ ತೋಟಗಾರಿಕೆ ಸಚಿವ ನಾರಾಯಣಗೌಡ ಅವರು ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಅಧಿಕಾರಿಗಳನ್ನು ತಮ್ಮ ಕೈಗೊಂಬೆಯಾಗಿಸಿಕೊಂಡಿದ್ದಾರೆ. ಈ ವಿಷಯವನ್ನೂ ಸದನದಲ್ಲಿ ಪ್ರಸ್ತಾಪಿಸಲಾಗುವುದು’ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಅನುದಾನ ಮತ್ತು ತೆರಿಗೆ ಸಂಗ್ರಹದ ಹಂಚಿಕೆ ಪ್ರಮಾಣದಲ್ಲೂ ಕುಸಿತ ಆಗಿರುವುದನ್ನು ವಿರೋಧ ಪಕ್ಷಗಳು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವ ಪ್ರಯತ್ನ ನಡೆಸಲಿವೆ.
ರಾಜ್ಯ ಸರ್ಕಾರಿ ನೌಕರರಿಗೆ ಕೆಲವು ತಿಂಗಳುಗಳಿಂದ ವೇತನ ಪಾವತಿ ಆಗದೇ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇದಕ್ಕೆ ತಾಂತ್ರಿಕ ಸಮಸ್ಯೆ ಕಾರಣವೊ ಅಥವಾ ಸರ್ಕಾರದ ಬಳಿ ಹಣ ಇಲ್ಲದೇ ಇರುವುದು ಕಾರಣವೇ ಎಂದು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಳ್ಳಲಿವೆ.
ಯತ್ನಾಳ್ ವಿರುದ್ಧ ನಾಲ್ಕು ನಿರ್ಣಯಗಳು
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿರುವ ಹೇಳಿಕೆ ಖಂಡಿಸಿ ಸಾಹಿತಿಗಳು, ಪ್ರಗತಿಪರರು, ರಾಜಕೀಯ ಪಕ್ಷಗಳ ಮುಖಂಡರು ಭಾನುವಾರ ಬೆಂಗಳೂರಿನಲ್ಲಿ ನಾಲ್ಕು ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ.
* ಯತ್ನಾಳ್‌ರನ್ನು ವಿಧಾನಸೌಧದ ಒಳಗೆ ಬಿಡಬಾರದು ಮತ್ತು ಶಾಸಕ ಸ್ಥಾನ ರದ್ದು ಮಾಡಬೇಕು
* ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು
* ದೊರೆಸ್ವಾಮಿಗುಂಡಿಗೆ ಬಲಿಯಾಗುತ್ತಾರೆ ಎಂದು ಹೇಳಿದ್ದರಿಂದ ಕೊಲೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕ್ರಮ ಕೈಗೊಳ್ಳಬೇಕು.
* ಬಿಜೆಪಿ ಮುಖಂಡರು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮತ್ತು ನಾಡಿನ ಜನತೆಯಲ್ಲಿ ಕ್ಷಮೆ ಕೇಳಬೇಕು
**
ಯತ್ನಾಳ್ ಹೇಳಿಕೆ ವ್ಯವಸ್ಥಿತ ಸಂಚು. ಇದರ ಹಿಂದೆ ಸಂಘ ಪರಿವಾರದವರಿದ್ದಾರೆ. ಬೇರೆ ನಾಯಕರಿಂದಲೂ ದೊರೆಸ್ವಾಮಿ ವಿರುದ್ಧ ಮಾತನಾಡಿಸುತ್ತಿದ್ದಾರೆ.
–ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ
**
ಪೌರತ್ವ ಕಾಯ್ದೆ ವಿರೋಧ ಮಾಡುತ್ತಿರುವ, ದೇಶದ್ರೋಹಿಗಳಿಗೆ ಬೆಂಬಲ ನೀಡುವ ಕಾಂಗ್ರೆಸ್ ಪಕ್ಷದ ಬೆದರಿಕೆಗೆ ಬಗ್ಗುವ ಪ್ರಶ್ನೆಯೇ ಇಲ್ಲ.
–ಎನ್. ರವಿಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.