ADVERTISEMENT

ಯಡಿಯೂರಪ್ಪ ಅವರಿಗೆ ಹಣಕಾಸಿನ ಬಗ್ಗೆ ಜ್ಞಾನ ಇಲ್ಲ: ಸಿದ್ದರಾಮಯ್ಯ ಗೇಲಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 6:57 IST
Last Updated 5 ಅಕ್ಟೋಬರ್ 2019, 6:57 IST
   

ಮಂಗಳೂರು: 'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಣಕಾಸಿನ ಬಗ್ಗೆ ಜ್ಞಾನವೇ ಇಲ್ಲ. ಹೀಗಾಗಿಯೇ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬುದಾಗಿ ಹೇಳುತ್ತಿದ್ದಾರೆ' ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶನಿವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ತೆರಳುವ ಮುನ್ನ ಅವರು ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಲು ಸಾಧ್ಯವೇ ಇಲ್ಲ. ಪ್ರತಿ ತಿಂಗಳು ಬೊಕ್ಕಸಕ್ಕೆ ತೆರಿಗೆ ಹರಿದು ಬರುತ್ತಿದೆ. ಬೊಕ್ಕಸದ ಪರಿಸ್ಥಿತಿ ಕುರಿತು ಯಡಿಯೂರಪ್ಪ ಅವರಿಗೆ ಸರಿಯಾದ ಜ್ಞಾನ ಇದ್ದಂತಿಲ್ಲ ಎಂದರು.

ADVERTISEMENT

ಪ್ರವಾಹ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ತುರ್ತಾಗಿ ₹ 5,000 ಕೋಟಿ ನೆರವು ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಎರಡು ತಿಂಗಳ ಬಳಿಕ ಕೇಂದ್ರ ಸರ್ಕಾರ 1,200 ಕೋಟಿ ನೀಡಿದೆ. ಇಲ್ಲಿಯವರೆಗೂ ರಾಜ್ಯ ಸರ್ಕಾರವೇ ತನ್ನ ಬೊಕ್ಕಸದ ಹಣವನ್ನು ಬಳಕೆ ಮಾಡಬೇಕಿತ್ತು. ಅದನ್ನೂ ಸರಿಯಾಗಿ ಮಾಡಿಲ್ಲ ಎಂದು ಟೀಕಿಸಿದರು.

'ಪ್ರಧಾನಿ ನರೇಂದ್ರ ಮೋದಿ ಅವರದ್ದು ಫ್ಯಾಸಿಸ್ಟ್ ಸರ್ಕಾರ. ಹಿಟ್ಲರ್ ರೀತಿ ಆಡಳಿತ ನಡೆಸುತ್ತಿದ್ದಾರೆ. ತಮ್ಮನ್ನು ಯಾರೂ ಪ್ರಶ್ನಿಸಬಾರದು ಎಂಬ ಧೋರಣೆ ಅನುಸರಿಸುತ್ತಿದ್ದಾರೆ' ಎಂದು ಹೇಳಿದರು.

ಮಾಹಿತಿ ಇಲ್ಲ: ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಪಕ್ಷದ ಸದಸ್ಯರಿಂದ ಮಾಹಿತಿ ಸಂಗ್ರಹಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿರುವ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಪಕ್ಷದ ಹಿರಿಯ ನಾಯಕ ಮಧುಸೂದನ ಮಿಸ್ತ್ರಿ ಅವರು ಅಭಿಪ್ರಾಯ ಸಂಗ್ರಹಕ್ಕೆ ಬರುತ್ತಿರುವ ಬಗ್ಗೆಯೂ ಗೊತ್ತಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.