ಚಿತ್ರದುರ್ಗ: ಬಿ.ಎಸ್.ಯಡಿಯೂರಪ್ಪ ಇನ್ನೂ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ ಎಂಬ ಭ್ರಮೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಲ್ಲಿದೆ. ಅವರು ಈ ಭ್ರಮೆ ಕಳಚಿಕೊಂಡು ಹೊರಬರಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕುಟುಕಿದರು.
ಶಿಕ್ಷಣ ಸಚಿವರ ತಲೆಗೂದಲು ಹಾಗೂ ಸಿನಿಮಾ ರಂಗದ ಆಸಕ್ತಿ ಬಗ್ಗೆ ಟೀಕೆ ಮಾಡಿದ್ದ ವಿಜಯೇಂದ್ರ ಅವರಿಗೆ ಮಧು ಬಂಗಾರಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದರು.
‘ನನ್ನ ಹೇರ್ ಕಟ್ ಮಾಡುವವರಿಗೆ ಬಿಡುವಾಗಿಲ್ಲ. ನಿಮಗೆ ಬಿಡುವಿದ್ದರೆ ಬಂದು ಹೇಳಿ. ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ವಿಜಯೇಂದ್ರ, ಜವಾಬ್ದಾರಿಯಿಂದ ಮಾತನಾಡಬೇಕು. ಚಿತ್ರರಂಗದ ಕುರಿತು ಅವರು ಆಡಿದ ಮಾತು ಸರಿ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇಷ್ಟು ದಿನ ಶಿಕ್ಷಣ ಕ್ಷೇತ್ರವನ್ನು ಹೊಲಸು ಮಾಡಿದ್ದು ಬಿಜೆಪಿ. ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆ ಕಾಪಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಕೆಲವು ಕಠಿಣ ಅನ್ನಿಸಿದರೂ ಮಕ್ಕಳ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದು ಹೇಳಿದರು.
‘ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ 43 ಸಾವಿರ ಅತಿಥಿ ಶಿಕ್ಷಕರ ಸೇವ ಪಡೆಯಲಾಗಿತ್ತು. ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಶಿಕ್ಷಣ ಇಲಾಖೆಯಲ್ಲಿಯೂ ಕೆಲ ಕೊರತೆ, ಸಮಸ್ಯೆ ಇವೆ. ಇವು ಹಲವು ವರ್ಷಗಳಿಂದ ಹಾಗೇ ಉಳಿದುಕೊಂಡಿವೆ. ಈ ಸಮಸ್ಯೆ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದರು.
‘ವಿಧಾನಪರಿಷತ್ ಚುನಾವಣೆಯನ್ನು ಈವರೆಗೆ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿರಲಿಲ್ಲ. ವಿಧಾನಪರಿಷತ್ ನಲ್ಲಿ ಪಕ್ಷಕ್ಕೆ ಬಹುಮತದ ಅಗತ್ಯವಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಆಗಿದ್ದು, ಆರು ಕ್ಷೇತ್ರ ಗೆಲ್ಲುವ ಉದ್ದೇಶದಿಂದ ಪಕ್ಷದ ಕಾರ್ಯಕರ್ತರು, ಮುಖಂಡರು ಚುನಾವಣೆಗೆ ಕೆಲಸ ಮಾಡುತ್ತಿದ್ದೇವೆ. ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿಗೆ ಬರಲಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ’ ಎಂದು ಹೇಳಿದರು.
ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕಿ ಕೆ.ಪೂರ್ಣಿಮಾ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಮುಖಂಡರಾದ ಲಕ್ಷ್ಮೀಕಾಂತ್, ಖುದ್ದೂಸ್, ಮೈಲಾರಪ್ಪ, ಸಂಪತ್, ಎನ್.ಡಿ.ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.